ನವದೆಹಲಿ: ಭಯೋತ್ಪಾದಕರ ಧನಸಹಾಯ ಮತ್ತು ಆಶ್ರಯ ತಾಣವೆಂದೇ ಕರೆಯಲ್ಪಡುವ ಪಾಕಿಸ್ತಾನ ಈಗ ಕಪ್ಪುಪಟ್ಟಿಗೆ ಸೇರುವ ಭೀತಿಯಲ್ಲಿದೆ. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ನ ಪ್ರಮುಖ ಸಭೆ ಇಂದು ಬ್ಯಾಂಕಾಕ್ನಲ್ಲಿ ನಡೆಯಲಿದ್ದು, ಈ ಸಭೆಯಲ್ಲಿ ಪಾಕಿಸ್ತಾನದ ಹೆಸರು ಗ್ರೇ ಪಟ್ಟಿಯಲ್ಲಿ ಉಳಿಯುತ್ತದೆಯೇ ಅಥವಾ ಅದನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆಯೇ ಎಂದು ನಿರ್ಧರಿಸಲಾಗುತ್ತದೆ. ಭಯೋತ್ಪಾದನೆಗೆ ಧನಸಹಾಯದ ವಿಷಯದಲ್ಲಿ ಕಪ್ಪುಪಟ್ಟಿಗೆ ಸೇರ್ಪಡೆಗೊಳ್ಳುವ ಆತಂಕದಲ್ಲಿರುವ ಪಾಕಿಸ್ತಾನದ 20 ಸದಸ್ಯರ ತಂಡ ಇಂದು ಬ್ಯಾಂಕಾಕ್ನಲ್ಲಿ ಎಫ್ಎಟಿಎಫ್ ಮುಂದೆ ಹಾಜರಾಗಲಿದೆ.
ಸಭೆಯಲ್ಲಿ ಫೆಡರಲ್ ಆರ್ಥಿಕ ವ್ಯವಹಾರಗಳ ಸಚಿವ ಹಮ್ಮದ್ ಅಜ್ಹರ್, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ, ಸ್ಟೇಟ್ ಬ್ಯಾಂಕ್, ಫೆಡರಲ್ ಬೋರ್ಡ್ ಆಫ್ ರೆವಿನ್ಯೂ, ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ ಆಫ್ ಪಾಕಿಸ್ತಾನ್, ಪಾಕಿಸ್ತಾನದ ವಿರೋಧಿ ಮಾದಕವಸ್ತು ಮತ್ತು ಗುಪ್ತಚರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಭೆ ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿದ್ದು, ಇದರಲ್ಲಿ 2018 ರ ಜೂನ್ನಲ್ಲಿ ಪಾಕಿಸ್ತಾನ ನೀಡಿದ್ದ ಭರವಸೆಗಳನ್ನು ಈಡೇರಿಸಿದೆಯೇ ಎಂಬುದನ್ನು ಪರಿಶೀಲಿಸಲಾಗುವುದು.
ಸಭೆಯಲ್ಲಿ, ನಿಷೇಧಿತ ಸಂಸ್ಥೆಗಳ ಚಟುವಟಿಕೆಗಳನ್ನು ನಿವಾರಿಸಲು ಮತ್ತು ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪಾಕಿಸ್ತಾನ ಎಫ್ಎಟಿಎಫ್ಗೆ ತಿಳಿಸುತ್ತದೆ. ಕೂಲಂಕುಷ ಪರಿಶೀಲನೆ ಬಳಿಕ ಸೆಪ್ಟೆಂಬರ್ 13ರಂದು ಈ ಸಭೆಯ ಫಲಿತಾಂಶ ಹೊರ ಬರುವ ನಿರೀಕ್ಷೆ ಇದೆ. ಫಲಿತಾಂಶ ಹೊರ ಬಂದ ಬಳಿಕ ಪಾಕಿಸ್ತಾನದ ಹೆಸರು ಬೂದು(ಗ್ರೇ) ಪಟ್ಟಿಯಲ್ಲಿ ಉಳಿಯುತ್ತದೆಯೇ ಅಥವಾ ಕಪ್ಪು ಪಟ್ಟಿಗೆ ಸೇರುತ್ತದೆಯೇ ಎಂಬ ಕುತೂಹಲಕ್ಕೆ ತೆರೆಬೀಳಲಿದೆ.
ಎಫ್ಎಟಿಎಫ್ನ ಪ್ರಾದೇಶಿಕ ಅಂಗಸಂಸ್ಥೆಯಾದ ಏಷ್ಯಾ-ಪೆಸಿಫಿಕ್ ಗ್ರೂಪ್ (ಎಪಿಜಿ) ಯ ಪ್ರಚಾರವು ಈ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸುವ ವಿಷಯದ ಬಗ್ಗೆಯೂ ಚರ್ಚಿಸಲಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನವು ತ್ರೈಮಾಸಿಕ ಆಧಾರದ ಮೇಲೆ ಎಪಿಜಿಗೆ ಫಾಲೋಅಪ್ ವರದಿಯನ್ನು ಸಲ್ಲಿಸುವ ಅಗತ್ಯವಿದೆ. ಪಾಕಿಸ್ತಾನವನ್ನು ಪಟ್ಟಿಯಿಂದ ಹೊರಗಿಡಲು ಎಪಿಜಿಯ 125 ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ಪಡೆಯಲಿದೆ. ಪಾಕಿಸ್ತಾನದ ನಿಲುವನ್ನು ಎಪಿಜಿ ಮೂಲಕ ಮಾತುಕತೆಯಲ್ಲಿ ಪರಿಚಯಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಮನಿ ಲಾಂಡರಿಂಗ್ ಮತ್ತು ಭಯೋತ್ಪಾದನೆಯ ಹಣಕಾಸು ನಿಗ್ರಹಕ್ಕೆ ಸಂಬಂಧಿಸಿದ 10 ಪ್ರಮುಖ ಪ್ರಶ್ನೆಗಳಿಗೆ ಪಾಕಿಸ್ತಾನ ಉತ್ತರಿಸಲಿದೆ ಎಂದು ಮೂಲಗಳು ತಿಳಿಸಿವೆ.