ಮಂಡ್ಯದಲ್ಲಿ ಟೂರಿಂಗ್ ಟಾಕೀಸ್ ರಾಜಕಾರಣ ನಡೆಯಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

“ಮಂಡ್ಯದ ಜನ ಸ್ಥಳೀಯರಿಗೆ ಬಿಟ್ಟು ಹೊರಗಿನವರಿಗೆ ತಮ್ಮ ಸ್ಥಾನ, ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ಮಂಡ್ಯದ ಗೌಡಿಕೆ, ಆಡಳಿತವನ್ನು ಬೇರೆಯವರಿಗೆ ಬಿಟ್ಟುಕೊಟ್ಟ ಇತಿಹಾಸ ನಮ್ಮ ಮುಂದೆ ಇಲ್ಲ. ಇಲ್ಲಿ ಟೂರಿಂಗ್ ಟಾಕೀಸ್ ರಾಜಕಾರಣ ನಡೆಯಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

Written by - Manjunath N | Last Updated : Apr 1, 2024, 08:28 PM IST
  • ನೀವು ಐದು ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ಮುಖ್ಯಮಂತ್ರಿಯಾಗಿ ಇರಪ್ಪ ಎಂದು ನಾವು ಅವಕಾಶ ಮಾಡಿಕೊಟ್ಟೆವು.
  • ಆದರೆ ಅದನ್ನು ಬಿಟ್ಟು ನಾನು ಕಿರುಕುಳ, ತೊಂದರೆ ಕೊಟ್ಟೆ ಎಂದು ಹೇಳುತ್ತಿದ್ದಾರೆ.
  • ನಾನು ಕಿರುಕುಳ ಕೊಟ್ಟ ದಿನವೇ ಕುಮಾರಸ್ವಾಮಿ ಅವರು ಬಿಜೆಪಿ ಸೇರಬಹುದಿತ್ತಲ್ಲವೇ? ಯಾಕೆ ಸೇರಲಿಲ್ಲ?
ಮಂಡ್ಯದಲ್ಲಿ ಟೂರಿಂಗ್ ಟಾಕೀಸ್ ರಾಜಕಾರಣ ನಡೆಯಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ title=
file photo

ಮಂಡ್ಯ, ಏಪ್ರಿಲ್. 01: “ಮಂಡ್ಯದ ಜನ ಸ್ಥಳೀಯರಿಗೆ ಬಿಟ್ಟು ಹೊರಗಿನವರಿಗೆ ತಮ್ಮ ಸ್ಥಾನ, ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ಮಂಡ್ಯದ ಗೌಡಿಕೆ, ಆಡಳಿತವನ್ನು ಬೇರೆಯವರಿಗೆ ಬಿಟ್ಟುಕೊಟ್ಟ ಇತಿಹಾಸ ನಮ್ಮ ಮುಂದೆ ಇಲ್ಲ. ಇಲ್ಲಿ ಟೂರಿಂಗ್ ಟಾಕೀಸ್ ರಾಜಕಾರಣ ನಡೆಯಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಸೋಮವಾರ ಹೇಳಿದ್ದಿಷ್ಟು;

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಕುಮಾರಸ್ವಾಮಿ ಅವರು ಹುಟ್ಟಿದ ಮಣ್ಣು ಹಾಸನ ಜಿಲ್ಲೆ ಬಿಟ್ಟು ರಾಮನಗರಕ್ಕೆ ಬಂದಿದ್ದರು. ಈಗ ಮಂಡ್ಯ ಜಿಲ್ಲೆಗೆ ಬಂದಿದ್ದಾರೆ. ನಾವು, ನೀವು ಕೊಟ್ಟ ಅಧಿಕಾರವನ್ನು ಕುಮಾರಸ್ವಾಮಿ ಅವರು ಉಳಿಸಿಕೊಳ್ಳಲಿಲ್ಲ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದವರ ಜೊತೆಯೇ ಈಗ ನೆಂಟಸ್ಥನ ಬೆಳೆಸಿಕೊಂಡು ಅವರನ್ನು ತಬ್ಬಾಡುತ್ತಿದ್ದಾರೆ. 

ಇದನ್ನೂ ಓದಿ: ಧೋನಿ ಬ್ಯಾಟಿಂಗ್‌ ನೋಡಿ ಮೈದಾನಲ್ಲೇ ಜಿಗಿದಾಡಿದ ಬಿಗ್‌ಬಾಸ್‌ ಬ್ಯೂಟಿ..! ಈಕೆಗೆ MSD ಅಂದ್ರೆ ಪ್ರಾಣ

ದೇವೇಗೌಡರನ್ನು ಈ ದೇಶದ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಎರಡನೇ ಬಾರಿಗೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್. ಆದರೆ ನಾವು ಅವರಿಗೆ ಮೋಸ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ನಾನು ಸರ್ಕಾರವನ್ನು ಉಳಿಸಲು ಯಾವ ರೀತಿಯ ಹೋರಾಟ ಮಾಡಿದೆ ಎಂಬುದನ್ನು ಜಿ.ಟಿ.ದೇವೇಗೌಡ, ಚನ್ನರಾಯಪಟ್ಟಣದ ಬಾಲಕೃಷ್ಣ, ಶಿವಲಿಂಗೇಗೌಡ ಅವರ ಬಳಿ ಕೇಳಿ ತಿಳಿದುಕೊಳ್ಳಲಿ. 

ನೀವು ಐದು ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ಮುಖ್ಯಮಂತ್ರಿಯಾಗಿ ಇರಪ್ಪ ಎಂದು ನಾವು ಅವಕಾಶ ಮಾಡಿಕೊಟ್ಟೆವು. ಆದರೆ ಅದನ್ನು ಬಿಟ್ಟು ನಾನು ಕಿರುಕುಳ, ತೊಂದರೆ ಕೊಟ್ಟೆ ಎಂದು ಹೇಳುತ್ತಿದ್ದಾರೆ. ನಾನು ಕಿರುಕುಳ ಕೊಟ್ಟ ದಿನವೇ ಕುಮಾರಸ್ವಾಮಿ ಅವರು ಬಿಜೆಪಿ ಸೇರಬಹುದಿತ್ತಲ್ಲವೇ? ಯಾಕೆ ಸೇರಲಿಲ್ಲ? ಸರ್ಕಾರ ಬೀಳುವರೆಗೂ ಅವರು ಸಿಎಂ ಸ್ಥಾನದಲ್ಲಿ ಮುಂದುವರಿದಿದ್ದು ಏಕೆ?

ರಾಮನಗರ ನನ್ನ ಕರ್ಮಭೂಮಿ ಎಂದಿದ್ದ ಕುಮಾರಸ್ವಾಮಿ ಅವರು ಈಗ ಮಂಡ್ಯ ನನ್ನ ಕರ್ಮಭೂಮಿ ಎಂದು ಇಲ್ಲಿಗೆ ಬಂದಿದ್ದಾರೆ. ರಾಮನಗರ ಅವರನ್ನು ಸಂಸದ, ಶಾಸಕ, ಮುಖ್ಯಮಂತ್ರಿ ಮಾಡಿತು. ಅವರ ತಂದೆಯವರನ್ನೂ ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿತು. ಈಗ ರಾಮನಗರ ಬಿಟ್ಟು, ಮಂಡ್ಯ ಸ್ವಾಭಿಮಾನ, ಕರ್ಮಭೂಮಿ ಎಂದು ಇಲ್ಲಿಗೆ ಬಂದಿದ್ದಾರೆ. 

ಕುಮಾರಸ್ವಾಮಿ ಅವರೇ ನಿಮ್ಮ ಹುಟ್ಟೂರು ಹಾಸನ, ಗೆದ್ದಿದ್ದು ರಾಮನಗರ, ಆದರೆ ಈಗ ಮಂಡ್ಯ. ನಿಮ್ಮ ಕೈ ಹಿಡಿದ ರಾಮನಗರ ಜಿಲ್ಲೆಯ ಮತದಾರರ ಬಗ್ಗೆಯೇ ನಿಮಗೆ ಕಾಳಜಿ ಇಲ್ಲ. ಇನ್ನು ಮಿಕ್ಕವರ ಬಗ್ಗೆ ಕಾಳಜಿ ಇದೆ ಎಂದು ಜನ ಹೇಗೆ ನಂಬುವುದು? ನಿಮ್ಮ ಭಾಮೈದನನ್ನು ಬಿಜೆಪಿಯಿಂದ ನಿಲ್ಲಿಸಿದ್ದೀರಿ. ಈಗ ನಿಮ್ಮ ಪಕ್ಷ ಎಲ್ಲಿದೆ? ನಿಮ್ಮ ಕುಟುಂಬದವರನ್ನೇ ಬಿಜೆಪಿಯಿಂದ ನಿಲ್ಲಿಸಿದ ಮೇಲೆ ಜೆಡಿಎಸ್ ಎಲ್ಲಿದೆ. ಜೆಡಿಎಸ್ ಕಾರ್ಯಕರ್ತರು ಏಕೆ ನಿಮ್ಮ ಜೊತೆ ಇರಬೇಕು. ನಿಮ್ಮ ಜೊತೆ ಇರಲು ಯಾರಿಗೂ ಇಷ್ಟವಿಲ್ಲ.  ಜನತಾದಳದ ಕಾರ್ಯಕರ್ತರಿಗೆ ಅಭಯ ನೀಡುತ್ತೇನೆ. ಡಿ.ಕೆ.ಶಿವಕುಮಾರ್ ನಿಮ್ಮ ರಕ್ಷಣೆಗೆ ಎಂದಿಗೂ ಇರುತ್ತಾನೆ.

ಕುಮಾರಸ್ವಾಮಿ ಯಾರನ್ನು ಬೇಕಾದರೂ ಭೇಟಿ ಮಾಡಿಕೊಳ್ಳಲಿ, ಅವರು ಬಿಜೆಪಿ ಜೊತೆ ಹೊಂದಾಣಿಕೆಯನ್ನಾದರೂ ಮಾಡಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಮಂಡ್ಯದ ಜನತೆ ಸ್ವಾಭಿಮಾನಕ್ಕೆ ಮತ ಹಾಕಬೇಕು ಎಂದು ಮನವಿ ಮಾಡುತ್ತೇನೆ.

ಸಿ.ಎಸ್.ಪುಟ್ಟರಾಜು ನನಗೆ ಟಿಕೆಟ್ ಸಿಗುತ್ತದೆ ಎಂದು ಕಾಯುತ್ತಾ ಕುಳಿತಿದ್ದ, ಈಗ ಪುಟ್ಟರಾಜು ಕತೆ ಗೋವಿಂದ. ದೇವೆಗೌಡರು ಪ್ರಧಾನಿಗಳಾಗಿದ್ದ ವೇಳೆ 17 ಜನ ಸಂಸದರು ಇದ್ದರು. ಕುಮಾರಸ್ವಾಮಿ ಅವರು ಒಬ್ಬರು ಬಿಟ್ಟು ಮಿಕ್ಕವರೆಲ್ಲಾ ಕಾಂಗ್ರೆಸ್- ಬಿಜೆಪಿ ಸೇರಿದರು. ಇದರ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕಿಕೊಂಡು ಜಾತ್ಯಾತೀತ ತತ್ವವನ್ನು ನೀರಿನಲ್ಲಿ ತೇಲಿ ಬಿಟ್ಟರು. ಆ ಮೂಲಕ ಸೈದ್ಧಾಂತಿಕವಾಗಿ ಬದುಕಿಯೂ ಸತ್ತಂತೆ.

ಕಳೆದ ಬಾರಿ ನಿಖಿಲ್ ಅವರ ಪರವಾಗಿ ನಾನು ಮತ ಕೇಳಲು ಬಂದಿದ್ದೇ. ಆದರೆ ಇಂದು ಸ್ವಾಭಿಮಾನಕ್ಕೆ, ಸ್ಥಳೀಯ ಮನೆ ಮಗನಿಗೆ ಮತ ಕೇಳಲು ಬಂದಿದ್ದೇನೆ. ಸುಮಾರು ಮೂರು ಸಾವಿರ ಜನಕ್ಕೆ ಉದ್ಯೋಗ ನೀಡಿದ ಸರಳ, ಸಜ್ಜನ ಕುಟುಂಬದ ಸ್ಟಾರ್ ಚಂದ್ರು ಅವರು ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಅವರು ಮಂಡ್ಯ ಜನರ ಸೇವೆ ಮಾಡಲು ನಿಮ್ಮ ಮುಂದೆ ಬಂದಿದ್ದಾರೆ.

ಇದನ್ನೂ ಓದಿ: Nani 33 update : ಬಾಯಲ್ಲಿ ಸಿಗರೇಟು.. ರಗಡ್ ಲುಕ್..! ನ್ಯಾಚುರಲ್‌ ಸ್ಟಾರ್‌ ನಾನಿ 33ನೇ ಸಿನಿಮಾ ಅನೌನ್ಸ್‌

ವೆಂಕಟರಮಣೇಗೌಡರು ಇಲ್ಲಿ ಅಭ್ಯರ್ಥಿಯಲ್ಲ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಅವರು ಮಂಡ್ಯದ ಅಭ್ಯರ್ಥಿಗಳು. ಹಾಸನ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕಾಂಗ್ರೆಸ್ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ. 

ಎಂಟು ಮಂದಿ ಒಕ್ಕಲಿಗರಿಗೆ ಲೋಕಸಭಾ ಟಿಕೆಟ್ ನೀಡಿದ್ದೇವೆ. ನನ್ನನ್ನು ಗಮನದಲ್ಲಿ ಇಟ್ಟುಕೊಂಡು ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ. ನಿಮ್ಮ ನಿರೀಕ್ಷೆ ಹುಸಿಯಾಗುವುದಿಲ್ಲ. 

ಕೊರೋನಾ ಸಮಯದಲ್ಲಿ ಜನರ ಸೇವೆ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರು. ಹಳ್ಳಿ, ಹಳ್ಳಿಗೂ ಬಂದು ಜನರ ಸೇವೆ ಮಾಡಿದ್ದೇವೆ. ಅನ್ನ, ನೀರು ಕೊಟ್ಟಿದ್ದೇವೆ. ಡಿ.ಕೆ.ಸುರೇಶ್ ರೈತರ ತರಕಾರಿ ತೆಗೆದುಕೊಂಡು ಜನರಿಗೆ ಹಂಚಿದರು. ಕುಮಾರಸ್ವಾಮಿ ಅವರು ಮನೆ ಬಿಟ್ಟು ಹೊರಗೆ ಬರಲಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶವಸಂಸ್ಕಾರ ಮಾಡಿ ಮನೆ ಮಕ್ಕಳಂತೆ ಜನರ ಜೊತೆ ನಿಂತಿದ್ದಾರೆ. 

ಕಮಲ ಕೆರೆಯಲ್ಲಿ ಇದ್ದರೇ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ಈ ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಇದೇ ಮಾತಿನಂತೆ ಉಚಿತ ವಿದ್ಯುತ್, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಶಕ್ತಿ ಯೋಜನೆ ಹೀಗೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. 

Rashmika Mandanna: ನ್ಯಾಷನಲ್ ಕ್ರಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್! ಏನದು ಗೊತ್ತೇ??

ನೀವು ಒತ್ತುವ ಮತದ ಸದ್ದು ಮೋದಿ ಅವರಿಗೆ ಕೇಳಿಸಬೇಕು

ಮಂಡ್ಯ ಜನತೆಯ ಸ್ವಾಭಿಮಾನವನ್ನು ಹೊತ್ತಿರುವ ನಾಮಪತ್ರ ಸಲ್ಲಿಕೆಗೆ ಜೊತೆಯಾಗಿದ್ದೇನೆ. ನೀವು ಮತಯಂತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒತ್ತುವ ಓಟಿನ ಸದ್ದು ಮೋದಿ ಅವರಿಗೆ ಕೇಳಿಸಬೇಕು.

2 ಲಕ್ಷ ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು:
ನಾಮಪತ್ರ ಸಲ್ಲಿಕೆಗೂ ಮುನ್ನ ಹಾಗೂ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಭಾವಿಸಿದ್ದೆ. ಆದರೆ ಈಗ ಜನರ ಪ್ರೀತಿ ವಿಶ್ವಾಸ ನೋಡಿದ ಮೇಲೆ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ಮೂಡಿದೆ. ಮಂಡ್ಯದ ಜನ ಬುದ್ಧಿವಂತರು, ಪ್ರಜ್ಞಾವಂತರು. ಮಂಡ್ಯದವರು ತಮ್ಮ ಪಾರುಪತ್ಯವನ್ನು ಬೇರೆಯವರಿಗೆ ಬಿಟ್ಟು ಕೊಡುವುದಿಲ್ಲ. 

ಮಂಡ್ಯದ ಜನ ಸ್ವಾಭಿಮಾನಿಗಳು ಟೂರಿಂಗ್ ಟಾಕೀಸ್ ರಾಜಕಾರಣ ಮಾಡುವವರಿಗೆ ಬೆಲೆ ಕೊಡುವುದಿಲ್ಲ. ಇಲ್ಲಿ ಸಿನಿಮಾ ರಾಜಕಾರಣ ನಡೆಯುವುದಿಲ್ಲ. ಇಲ್ಲಿ ಏನೇ ಇದ್ದರೂ ಬದುಕಿನ ರಾಜಕಾರಣಕ್ಕೆ ಮಾತ್ರ ಬೆಲೆ. ಈ ಕ್ಷೇತ್ರದ ಜನ ತಮ್ಮ ಮತವನ್ನು ಮಂಡ್ಯದವರಿಗೇ ನೀಡುತ್ತಾರೆ. ನಾಗಮಂಗಲದಲ್ಲಿ ಜನಿಸಿ ಬೆಂಗಳೂರಿನಲ್ಲಿ ದೊಡ್ಡ ಉದ್ಯಮಿಯಾಗಿ ಸಾವಿರಾರು ಜನಕ್ಕೆ ಉದ್ಯೋಗ ನೀಡಿರುವ ವೆಂಕಟರಮಣೇಗೌಡ ಅವರಿಗೆ ಮಂಡ್ಯದ ಜನ ಮತ ಹಾಕಲಿದ್ದಾರೆ.

ಕಳೆದ ಬಾರಿ ಕುಮಾರಸ್ವಾಮಿ ಅವರ ಪುತ್ರನ ಪರವಾಗಿ ಇಲ್ಲಿ ಪ್ರಚಾರ ಮಾಡಿದ್ದಿರಿ ಎಂದು ಕೇಳಿದಾಗ, “ನಾನು ಕಳೆದ ಬಾರಿ ಆತ್ಮಸಾಕ್ಷಿಯಾಗಿ, ಪ್ರಾಮಾಣಿಕವಾಗಿ ಅವರಿಗೆ ಸಹಾಯ ಮಾಡಿದ್ದೆ. ಆದರೆ ಜನ ಮತ ನೀಡಲಿಲ್ಲ. ಹೀಗಾಗಿ ನಾವು ಈ ಬಾರಿ ಹೊರಗಿನವರಿಗೆ ಟಿಕೆಟ್ ನೀಡುವುದು ಬೇಡ. ಸ್ಥಳೀಯರಿಗೆ ಟಿಕೆಟ್ ನೀಡಿದ್ದೇವೆ” ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News