ಬೆಂಗಳೂರು : ರಾಜ್ಯದ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಬಿಜೆಪಿಯವರು ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದ್ದಷ್ಟು ಈ ದೇಶದ ಯಾವ ರಾಜ್ಯದಲ್ಲೂ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದೇ ಹುಬ್ಬಳ್ಳಿ ಕೊಲೆ ಪ್ರಕರಣಕ್ಕೆ ಕಾರಣ ಎನ್ನುವ ಬಿಜೆಪಿ ಆರೋಪದ ಬಗ್ಗೆ ಅವರು ಉತ್ತರಿಸಿದರು.
ರಾಜ್ಯಪಾಲರ ಆಡಳಿತ ಹೇರಲು ಈ ರೀತಿಯ ನಾಟಕ ಹಾಗು ಹುನ್ನಾರವನ್ನು ವಿಪಕ್ಷ ನಾಯಕ ಆರ್. ಅಶೋಕ ಮತ್ತು ಬಿಜೆಪಿಯವರು ಮಾಡುತ್ತಿದ್ದಾರೆ. ಈ ರೀತಿ ಆಗಲು ನಾವು ಬಿಡುವುದಿಲ್ಲ. ನಿಷ್ಪಕ್ಷಪಾತವಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಇದನ್ನೂ ಓದಿ:ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಬರುತ್ತಿದ್ದಾರೆ: ಸಿಎಂ ಆಕ್ರೋಶ
ಕರ್ನಾಟಕ ಬಿಹಾರ ಆಗುತ್ತದೆ ಎನ್ನುವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಅವರ ಕಾಲದಲ್ಲಿಯೂ ಅನೇಕ ಕೃತ್ಯಗಳು ನಡೆದಿದ್ದವು. ಎಲ್ಲರ ಕಾಲದಲ್ಲೂ ವೈಯಕ್ತಿಕ ಕಾರಣಗಳಿಗೆ ಇವು ನಡೆಯುತ್ತಿರುತ್ತವೆ. ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಈ ವಿಚಾರವಾಗಿ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ತಮ್ಮ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.
ಮಾಲೀಕಯ್ಯಾ ಗುತ್ತೇದಾರ್ ಹಾಗು ಶಾರದಾ ಮೋಹನ್ ಶೆಟ್ಟಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತುಗಳು:
ಮಾಲೀಕಯ್ಯಾ ಗುತ್ತೇದಾರ್ ಅವರು ಬಹಳ ವರ್ಷಗಳಿಂದ ನಮ್ಮ ಜೊತೆಗಿದ್ದವರು. ಕಾರಣಾಂತರಗಳಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಿಜೆಪಿಯಲ್ಲಿ ಭವಿಷ್ಯವಿಲ್ಲ ಎಂದು ಅರಿವಾಗಿ ಮತ್ತೆ ಮರಳಿ ಬಂದಿದ್ದಾರೆ.
ಈ ಹಿಂದೆ ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಮಾಲೀಕಯ್ಯಾ ಅವರು ಪಕ್ಷದ ಅನೇಕ ಹುದ್ದೆಗಳನ್ನು ಅಲಂಕರಿಸಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದಾರೆ. ಈಗ ಯಾವುದೇ ಷರತ್ತುಗಳನ್ನು ವಿಧಿಸದೆ ಮರಳಿ ಬಂದಿದ್ದಾರೆ. ನಮ್ಮ ಶಾಸಕರಾದ ಎಂ.ವೈ ಪಾಟೀಲ್ ಅವರು ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇವರ ಸೇರ್ಪಡೆಯನ್ನು ಸ್ವಾಗತಿಸಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಮರೆತು ಪಕ್ಷ ಕಟ್ಟಬೇಕು ಎಂಬುದು ಎಲ್ಲರ ಒಕ್ಕೊರಲಾಗಿದೆ.
ಇದನ್ನೂ ಓದಿ:ಎಲ್ಲರೂ ಒಟ್ಟಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ: ತುಷಾರ್ ಗಿರಿ ನಾಥ್
ಬಿಜೆಪಿ- ದಳದವರ ಮೈತ್ರಿಯನ್ನು ಅವರ ಕಾರ್ಯಕರ್ತರೇ ವಿರೋಧಿಸಿದ್ದಾರೆ. ಉತ್ತರ ಭಾರತದಲ್ಲೂ ಸಾಕಷ್ಟು ಜನ ಬಿಜೆಪಿ ತೊರೆಯುತ್ತಿದ್ದಾರೆ. ಅವರು 400 ಸ್ಥಾನ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದ್ದಿದ್ದರೇ ಇತರೇ ಪಕ್ಷಗಳ ನಾಯಕರನ್ನು ಏತಕ್ಕೆ ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದರು. ನನಗೆ ಬಂದಿರುವ ಮಾಹಿತಿ ಪ್ರಕಾರ ಎನ್ ಡಿಎ ದೇಶದಲ್ಲಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಕೇರಳ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದಲ್ಲಿ ಒಂದಂಕಿ ಸ್ಥಾನಗಳನ್ನು ಪಡೆಯುತ್ತಾರೆ.
ಬಿಜೆಪಿ- ದಳ ತೊರೆದು ಆನೇಕ ಕಾರ್ಯಕರ್ತರು, ನಾಯಕರು ನಮ್ಮ ಕಡೆ ವಾಲುತ್ತಿದ್ದಾರೆ. ಸರಮಾಲೆಯಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಬಿಜೆಪಿಗೆ ಧ್ವನಿಯಿಲ್ಲ. ಅವರು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ. ಆದ ಕಾರಣ ಸ್ಥಳೀಯ ಮಟ್ಟದಲ್ಲಿ ಯಾರು ಪಕ್ಷ ಸೇರ್ಪಡೆಯಾಗುತ್ತಾರೆಯೋ ಅವರನ್ನು ಸೇರಿಸಿಕೊಳ್ಳಬೇಕು ಎಂದು ಎಲ್ಲರಿಗೂ ಸೂಚನೆ ನೀಡಿದ್ದೇನೆ.
ಇದೇ ವೇಳೆ ಮಾಜಿ ಶಾಸಕರಾದ ಶಾರದ ಮೋಹನ್ ಶೆಟ್ಟಿ ಅವರು ಹಾಗೂ ಆಮ್ ಆದ್ಮಿ ಪಕ್ಷದ ನಟರಾಜ್ ಅವರು ಹಾಗೂ ಸಿದ್ದು ಸಾಲಮನಿ, ಕರುಣಾಕರ್ ಭಟ್, ರಾಮಣ್ಣ, ಮಲ್ಲೇಗೌಡ ಪಾಟೀಲ್, ರವಿ ಪಾಟೀಲ್, ಚಂದ್ರಕಾಂತ್, ಶಿವಪ್ಪ ಅವರು ಪಕ್ಷ ಸೇರ್ಪಡೆಯಾದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.