ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿಚಾರವಾಗಿ ಪ್ರತಿಪಕ್ಷಗಳು ಹಾಗೂ ಕೆಲ ಸಂಘಟನೆಗಳು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಆರೋಪಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ(Dr CN Ashwathnarayan), ಸಿಎಎ ಒಂದು ಮಾನವೀಯತೆಯ ಕಾನೂನು. ಇದನ್ನು ಒಪ್ಪಿಕೊಳ್ಳುವ ದೊಡ್ಡತನ ತೋರಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪೌರತ್ವ ತಿದುದ್ದಪಡಿ ಕಾಯ್ದೆ (Citizenship Amendment Act) ಕುರಿತಂತೆ ಜನಜಾಗೃತಿ ಮೂಡಿಸಲು ಬಿಜೆಪಿ ಹಮ್ಮಿಕೊಂಡಿರುವ 'ಮನೆ ಮನೆ ಸಂಪರ್ಕ ಅಭಿಯಾನ'ದ ಭಾಗವಾಗಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಜ್ಞಾನ ಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರರ ಮನೆಗೆ ಭೇಟಿ ನೀಡಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಸಿಎಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (NRC) ನಡುವೆ ಥಳಕು ಹಾಕುವ ಪ್ರಯತ್ನ ನಡೆಯುತ್ತಿದೆ. ಈಗ ಸಿಎಎ ವಿಚಾರದ ಬಗ್ಗೆ ಚರ್ಚೆ ನಡೆಯಬೇಕು. ಹೊರದೇಶಗಳಲ್ಲಿ ನೊಂದು ಬಂದ ಭಾರತೀಯ ಮೂಲದವರಿಗೆ ಪೌರತ್ವ ಕೊಡುವ ಕಾನೂನಿದು. ಇದರಲ್ಲಿ ರಾಜಕೀಯ ಮಾಡಬಾರದು. ಆದರೆ, ಇದಕ್ಕೆ ಕೋಮು ಬಣ್ಣ ಬಳೆಯಲಾಗುತ್ತಿದೆ. ಮುಸ್ಲಿಮರ ವಿರುದ್ಧದ ಕಾನೂನು ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದು ತಪ್ಪು," ಎಂದು ಹೇಳಿದರು.
ಎನ್ಆರ್ಸಿಯನ್ನು ಸಿಎಎ ಜತೆ ಥಳಕು ಹಾಕಬಾರದು. ಎನ್ಆರ್ಸಿ ತಂದದ್ದು ಕಾಂಗ್ರೆಸ್. ಹೀಗಾಗಿ , ಎನ್ಆರ್ಸಿ ವಿಚಾರದಲ್ಲಿ ಜನರನ್ನು ದಾರಿತಪ್ಪಿಸುವ ಮೊದಲು ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
"ಮುಸಲ್ಮಾನರು ನಮ್ಮ ಜತೆ ಬದುಕುತ್ತಿದ್ದಾರೆ. ಇಲ್ಲಿಂದ ಯಾವುದೇ ಮುಸ್ಲಿಂ ಕುಟುಂಬ ವಲಸೆ ಹೋಗಿರುವುದನ್ನು ನೋಡಿದ್ದೀರಾ? ವಿಭಜನೆಯ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನದಲ್ಲಿ 30% ಹಿಂದೂಗಳು ಹಾಗೂ ಇತರ ಧರ್ಮದವರಿದ್ದರದ್ದರು. ಪಶ್ಚಿಮ ಪಾಕಿಸ್ತಾನದಲ್ಲಿ 23% ಹಿಂದೂಗಳಿದ್ದರು. ಈಗ ಅವರ ಸಂಖ್ಯೆ ಎಷ್ಟಿದೆ ? ಅಲ್ಲಿ ಕಿರುಕುಳ ತಾಳಲಾರದೆ ಪ್ರತಿನಿತ್ಯ ಇಲ್ಲಿಗೆ ವಲಸೆ ಬರುತ್ತಲೇ ಇದ್ದಾರೆ. ಅಲ್ಲಿ ಬದುಕಲಾಗದವರು ಎಲ್ಲಿಗೆ ಹೋಗುತ್ತಾರೆ? ಅವರು ಇಲ್ಲಿಗೆ ಬರಬೇಕು. ಇದನ್ನು ವಿರೋಧಿಸುವುದು ಸರಿ ಅಲ್ಲ" ಎಂದರು.
"ಹಿಂದೆ ಪ್ರಧಾನಿ ಆಗಿದ್ದ ಡಾ. ಮನಮೋಹನ್ ಸಿಂಗ್ ಅವರು ಸಿಎಎ ಜಾರಿ ತರಬೇಕು ಎಂದಿದ್ದರು. ಜವಾಹರಲಾಲ್ ನೆಹರು ಅವರು ಈ ಬಗ್ಗೆ ಹೇಳಿದ್ದರು. ಆದರೆ ಈಗ, ಪ್ರತಿಪಕ್ಷಗಳು ಹಾಗೂ ಕೆಲ ಸಂಘಟನೆಗಳು ಸಮಾಜಕ್ಕೆ ತಪ್ಪು ಮಾಹಿತಿ ಕೊಡುವ ಪ್ರಯತ್ನ ಮಾಡುತ್ತಿವೆ. ಜನರ ದಾರಿ ತಪ್ಪಿಸುತ್ತಿರುವ ಪ್ರತಿಪಕ್ಷಗಳ ಪ್ರಯತ್ನವನ್ನು ಬಯಲಿಗೆಳೆದು, ಸರಿಯಾದ ವಿಚಾರವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದಲೇ 'ಮನೆ ಮನೆ ಸಂಪರ್ಕ ಅಭಿಯಾನ' ಆರಂಭಿಸಿದ್ದೇವೆ. ಹಿರಿಯ ಸಾಹಿತಿ , ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಮನೆಗೆ ಭೇಟಿ ನೀಡಿದ್ದೇನೆ. ಅವರ ಜತೆ ವಿಚಾರ ಹಂಚಿಕೊಂಡಿದ್ಧೇನೆ," ಎಂದು ವಿವರಿಸಿದರು.
"ನಮ್ಮ ಪ್ರಣಾಳಿಕೆಯಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ತರುವ ಬಗ್ಗೆ ಭರವಸೆ ನೀಡಿದ್ದೆವು. ಈ ಕಾಯ್ದೆ ಯಾವುದೇ ಒಂದು ಕೋಮು ಅಥವಾ ಸಮುದಾಯದ ವಿರುದ್ಧವಲ್ಲ. ಬೇರೆ ರಾಷ್ಟ್ರಗಳಲ್ಲಿ ನೊಂದು ವಲಸೆ ಬಂದಂಥವರಿಗೆ ಪೌರತ್ವ ನೀಡುವ ಕಾನೂನಿದು. ಈ ವಿಚಾರವಾಗಿ ಜಾನಜಾಗೃತಿ ಮೂಡಿಸುವುದೇ ಈ ಅಭಿಯಾನದ ಉದ್ದೇಶ. ಈ ಬಗ್ಗೆ ಯಾವುದೇ ಪ್ರಚೋದನಕಾರಿ ಭಾಷಣ ಸರಿಯಲ್ಲ. 'ವಸುದೈವ ಕುಟುಂಬಕಂ' ಎಂಬ ತತ್ತ್ವ ಸಾರುವ ದೇಶವಿದು. ಗೊಂದಲಕ್ಕೆ ಪರಿಹಾರ ಕಂಡುಕೊಂಡು ಸಾಮರಸ್ಯದ ಜೀವನ ನಡೆಸೋಣ," ಎಂದು ಕರೆ ನೀಡಿದರು.
*ಸಿಎಎ ಬಗ್ಗೆ ಸಕಾರಾತ್ಮಕ ಚಿಂತನೆ ಅಗತ್ಯ- ಕಂಬಾರ*
"ಪೌರತ್ವ ಕಾಯ್ದೆ ಬಗ್ಗೆ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಮಾತಾಡಿದ್ದರು. ನೆಹರು ಕೂಡ ಈ ಬಗ್ಗೆ ಆಲೋಚನೆ ಮಾಡಿದ್ದರು. ಆದರೆ, ಈಗ ಅದರ ಮಹತ್ವ ಅರ್ಥವಾಗಿದೆ. ನಾವೆಲ್ಲರೂ ಈ ಬಗ್ಗೆ ಖಂಡಿತಾ ಆಲೋಚನೆ ಮಾಡಬೇಕು. ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ದೂರುವ ಅಥವಾ ಸಮರ್ಥಿಸಿಕೊಳ್ಳುವ ಬದಲಿಗೆ ನಮ್ಮನ್ನು ನಾವು ಸಮರ್ಥಿಸಿಕೊಳ್ಳಬೇಕು. ಈ ಬಗ್ಗೆ ಸಕಾರಾತ್ಮಕ ಚಿಂತನೆ ಅಗತ್ಯ," ಎಂದು ಡಾ.ಚಂದ್ರಶೇಖರ ಕಂಬಾರ ಪ್ರತಿಪಾದಿಸಿದರು.