ಬುಡಕಟ್ಟು ಸಮುದಾಯದ ನಾಯಕರಾದ ಬಿರ್ಸಾ ಮುಂಡಾ ಅಂದಿನ ಬಂಗಾಳ ಪ್ರೆಸಿಡೆನ್ಸಿ ಭಾಗದಲ್ಲಿ (ಇಂದಿನ ಜಾರ್ಖಂಡ್ ) ಬ್ರಿಟಿಷರ ವಿರುದ್ಧ ದಂಗೆ ಏಳುವ ಮೂಲಕ ಬುಡುಕಟ್ಟು ಸಮುದಾಯದಲ್ಲಿ ಧರ್ತಿ ಅಬ್ಬಾ ಎಂದೇ ಖ್ಯಾತಿಯನ್ನು ಪಡೆದಿದ್ದರು.1875 ರ ನವೆಂಬರ್ 15 ರಂದು ಬಂಗಾಳ ಪ್ರೆಸಿಡೆನ್ಸಿಯ ಉಲಿಹಾಟಿನಲ್ಲಿ ಜನಿಸಿದರು( ಈಗಿನ ಜಾರ್ಖಂಡ್‌ನ ಖುಂಟಿ ಜಿಲ್ಲೆ) ಆಗ ಚಾಲ್ತಿಯಲ್ಲಿದ್ದ ಮುಂಡಾ ಪದ್ಧತಿಯ ಪ್ರಕಾರ ಆ ದಿನದ ಹೆಸರನ್ನು ಅವರಿಗೆ ಇಡಲಾಯಿತು.
My humble tributes to the iconic tribal freedom fighter Birsa Munda on his birth anniversary today. Known as Dharti Aaba 'Father of Earth', #BirsaMunda mobilised the tribals against the oppression of the British.#BirsaMundaJayanti pic.twitter.com/1ukb4VOIJm
— Vice President of India (@VPSecretariat) November 15, 2020
ಬಿರ್ಸಾ ಮುಂಡಾ ಆರಂಭಿಕ ಜೀವನ
ಆರಂಭಿಕ ಶಿಕ್ಷಣವನ್ನು ಅವರು ಶಿಕ್ಷಕ ಜೈಪಾಲ್ ನಾಗ್ ಅವರ ಮಾರ್ಗದರ್ಶನದಲ್ಲಿ ಪಡೆದರು. ಆಗ ಅವರ ಪ್ರದೇಶದಲ್ಲಿ ಕ್ರಿಶ್ಚಿಯನ್ ಮಿಷನರಿಗಳೇ ತುಂಬಿದ್ದರಿಂದಾಗಿ ಶಿಕ್ಷಕರು ಬಿರ್ಸಾಗೆ ಜರ್ಮನ್ ಮಿಷನ್ ಶಾಲೆಗೆ ಸೇರಲು ಹೇಳಿದರು. ಆದರೆ ಆಗ ಪ್ರವೇಶ ಪಡೆಯಬೇಕೆಂದರೆ ಬಿರ್ಸಾ ಮುಂಡಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದು ಅನಿವಾರ್ಯವಾಗಿತ್ತು. ಮತಾಂತರದ ನಂತರ ಅವರನ್ನು ಬಿರ್ಸಾ ಡೇವಿಡ್ ಮತ್ತು ನಂತರ ಬಿರ್ಸಾ ದೌಡ್ ಎಂದು ಮರುನಾಮಕರಣ ಮಾಡಲಾಯಿತು. ಕೆಲವು ವರ್ಷಗಳ ಅಧ್ಯಯನದ ನಂತರ ಬಿರ್ಸಾ ಜರ್ಮನ್ ಮಿಷನ್ ಶಾಲೆಯನ್ನು ತೊರೆದರು.1886 ರಿಂದ 1890 ರ ನಡುವೆ, ಬಿರ್ಸಾ ಮುಂಡಾ ಅವರು ಇಂದಿನ ಜಾರ್ಖಂಡ್‌ನ ಚೈಬಾಸಾದಲ್ಲಿ ಸರ್ದಾರ್‌ಗಳ ಕೇಂದ್ರಕ್ಕೆ ಹತ್ತಿರದಲ್ಲಿದ್ದರು. ಇದು ಯುವಕನಾದ ಬಿರ್ಸಾ ಮುಂಡಾ ಮೇಲೆ ಸಾಕಷ್ಟು ಪರಿಣಾಮವನ್ನು ಬಿರಿತು. ಕೊನೆಗೆ ಅವರು ಅವರು ಮಿಷನರಿ ಮತ್ತು ಸರ್ಕಾರದ ವಿರುದ್ಧ ದಂಗೆ ಎದ್ದರು.
ಬಿರ್ಸೈಟ್ ಧರ್ಮ ಸ್ಥಾಪನೆ:
ಬಿರ್ಸಾ ಮುಂಡಾ ಅವರು ವೈಷ್ಣವ್ ಸನ್ಯಾಸಿಯಿಂದ ಹಿಂದೂ ಧಾರ್ಮಿಕ ಬೋಧನೆಗಳ ಬಗ್ಗೆ ತಿಳಿದುಕೊಂಡರು ಮತ್ತು ರಾಮಾಯಣ ಮತ್ತು ಮಹಾಭಾರತದ ಜೊತೆಗೆ ಪ್ರಾಚೀನ ಗ್ರಂಥಗಳನ್ನು ಅಧ್ಯಯನ ಮಾಡಿದರು. ಬುರ್ಸಾ ಬುಡಕಟ್ಟು ಸಮಾಜವನ್ನು ಸುಧಾರಿಸಲು ಬಯಸಿದ್ದರು ಮತ್ತು ಆದ್ದರಿಂದ, ವಾಮಾಚಾರದ ಮೇಲಿನ ನಂಬಿಕೆಗಳನ್ನು ಬಿಡಬೇಕೆಂದು ಅವರು ಒತ್ತಾಯಿಸಿದರು ಮತ್ತು ಆದರೆ ಪ್ರಾರ್ಥನೆಯ ಮಹತ್ವವನ್ನು ಒತ್ತಿ ಹೇಳಿದರು, ಮದ್ಯಪಾನದಿಂದ ದೂರವಿರುವುದು, ದೇವರ ಮೇಲಿನ ನಂಬಿಕೆ ಹಾಗೂ ನೀತಿ ಸಂಹಿತೆಯನ್ನು ಪಾಲಿಸಿದರು. ನಂತರ ಬಿರ್ಸಾ ಮುಂಡಾ ಬಿರ್ಸೈಟ್ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದರು.ಈ ಧರ್ಮವು ಏಕದೇವೋಪಾಸನೆಯನ್ನು ನಂಬಿತ್ತು ಮತ್ತು ಅವರ ಮೂಲ ಧಾರ್ಮಿಕ ನಂಬಿಕೆಗಳಿಗೆ ಮರಳಲು ಜನರನ್ನು ಪ್ರೋತ್ಸಾಹಿಸಿತು. ಜನರು ಅವರನ್ನು ಧಾರ್ಮಿಕ ಚಿಕಿತ್ಸಕ, ಪವಾಡ ಪುರುಷ ಮತ್ತು ಬೋಧಕ ಎಂದೆಲ್ಲ ಕರೆಯಲು ಪ್ರಾರಂಭಿಸಿದರು. ಮುಂದೆ ಬಿರ್ಸಾ ವಿಚಾರಗಳಿಂದ ಪ್ರಭಾವಿತರಾಗಿ ಒರಾನ್ ಮತ್ತು ಮುಂಡಾ ಬುಡಕಟ್ಟುವಿಗೆ ಸೇರಿದ ಜನರು ಬಿರ್ಸೈಟ್ಸ್ ಧರ್ಮಕ್ಕೆ ಸೇರಿದರು. ಇದರ ಪರಿಣಾಮವಾಗಿ ಅನೇಕರು ಅವರನ್ನು ಧರ್ತಿ ಅಬ್ಬಾ ಅಥವಾ ಭೂಮಿಯ ಪಿತಾಮಹ ಎಂದು ಕರೆಯಲು ಪ್ರಾರಂಭಿಸಿದರು
ಬ್ರಿಟಿಷರ ವಿರುದ್ಧದ ಹೋರಾಟ:
ಬಿರ್ಸಾ ಮುಂಡಾ ತಮ್ಮ ಧರ್ಮದ ಮೂಲಕ, ಬ್ರಿಟಿಷ್ ವಿರೋಧಿ ವಿಚಾರಗಳನ್ನು ಬೋಧಿಸಿದರು ಮತ್ತು ಸಾವಿರಾರು ಬುಡಕಟ್ಟು ಜನರನ್ನು ಸಜ್ಜುಗೊಳಿಸಿ, ಬ್ರಿಟಿಷರ ಮೇಲೆ ದಾಳಿ ಮಾಡಲು ಗೆರಿಲ್ಲಾ ಸೇನೆಗಳನ್ನು ರಚಿಸಿದರು. ಬ್ರಿಟಿಷ್ ರಾಜ್‌ಗೆ ಬೆದರಿಕೆ ಹಾಕುವ ಅವರ ಘೋಷಣೆ 'ರಾಜ್ ಸೆತಾರ್ ಜನಾ, ಮಹಾರಾಣಿ ರಾಜ್ ತುಂಡು ಜನಾ' ಅಂದರೆ 'ರಾಣಿಯ ಸಾಮ್ರಾಜ್ಯ ಕೊನೆಗೊಳ್ಳಲಿ ಮತ್ತು ನಮ್ಮ ರಾಜ್ಯ ಸ್ಥಾಪನೆಯಾಗಲಿ 'ಎನ್ನುವ ಘೋಷಣೆಯನ್ನು ಮೊಳಗಿಸಿದರು.ಈ ಘೋಷಣೆ ಇಂದಿಗೂ ಕೂಡ ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸ್ಮರಿಸಲ್ಪಡುತ್ತದೆ. ಬ್ರಿಟಿಷ್ ದೌರ್ಜನ್ಯದ ಬಗ್ಗೆ ಅವನ ಅರಿವು ಹೆಚ್ಚಾಗುತ್ತಿದ್ದಂತೆ, ಬಿರ್ಸಾ ಮುಂಡಾ 1886 -1890 ರ ನಡುವೆ ಚೈಬಾಸಾದಲ್ಲಿ ಮಿಷನರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದರು ಮತ್ತು 'ಉಲ್ಗುಲಾನ್ 'ಅಥವಾ 'ದಿ ಗ್ರೇಟ್ ಟ್ಯೂಮಲ್ಟ್' ಎಂಬ ಚಳುವಳಿಯನ್ನು ಪ್ರಾರಂಭಿಸಿದರು.ಕೊನೆಗೆ ಬ್ರಿಟಿಷರಿಗೆ ಮಾರಕವಾಗಿ ಪರಿಣಮಿಸಿದ್ದ ಬಿರ್ಸಾ ಮುಂಡಾ ಅವರನ್ನು ಮಾರ್ಚ್ 3, 1900 ರಂದು ಬ್ರಿಟಿಷ್ ಪೊಲೀಸರು ಬಂಧಿಸಿದರು ಮತ್ತು ಅದೇ ವರ್ಷ ಜೂನ್ 9 ರಂದು ರಾಂಚಿಯಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಅವರ ಮರಣದ ಎಂಟು ವರ್ಷಗಳ ನಂತರ, ಬ್ರಿಟಿಷ್ ಸರ್ಕಾರವು 1908 ರಲ್ಲಿ ಚೋಟಾನಾಗ್ಪುರ ಹಿಡುವಳಿ ಕಾಯ್ದೆಯನ್ನು ಜಾರಿಗೆ ತಂದಿತು, ಇದು ಬುಡಕಟ್ಟು ಜನಾಂಗವು ಆದಿವಾಸಿಯೇತರ ಜನರಿಗೆ ಭೂಮಿ ಹಸ್ತಾಂತರಿಸುವುದನ್ನು ನಿಷೇಧಿಸುತ್ತದೆ.ಅವರ ನಿಧನವಾದ ಒಂದು ಶತಮಾನದ ನಂತರ ಅವರ ಜಯಂತಿ ದಿನವಾದ ನವೆಂಬರ್ 15, 2000 ರಂದು ಬಿಹಾರದಿಂದ ಬುಡಕಟ್ಟುರಾಜ್ಯವಾಗಿ ಜಾರ್ಖಂಡ್ ನ್ನು ರಚಿಸಲಾಯಿತು.
ಜನಪದ ನಾಯಕನಾದ ಬಿರ್ಸಾ :
ಇಂದಿಗೂ ಕೂಡ ಜನಪದ ನಾಯಕ ಬಿರ್ಸಾ ಮುಂಡಾ ಅವರ ಕ್ರಾಂತಿಕಾರಿ ಜೀವನ ಮತ್ತು ಪರಂಪರೆಯನ್ನು ಬುಡಕಟ್ಟು ಪ್ರದೇಶಗಳಾದ ಬಿಹಾರ, ಜಾರ್ಖಂಡ್, ಛತ್ತೀಸ್ ಗಡ್ ಮತ್ತು ಕರ್ನಾಟಕ, ಒಡಿಶಾದ ಕೆಲವು ಭಾಗಗಳಲ್ಲಿ ಇಂದಿಗೂ ಆಚರಿಸಲಾಗುತ್ತಿದೆ.ಕರ್ನಾಟಕದಲ್ಲಿ ಅವರ ಜಯಂತಿಯನ್ನು ವಿಶೇಷವಾಗಿ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಬುಡಕಟ್ಟು ಜನರು ಆಚರಿಸುತ್ತಾರೆ ಮತ್ತು ಜಾರ್ಖಂಡ್‌ನ ರಾಜಧಾನಿ ರಾಂಚಿಯ ಕೋಕರ್‌ನಲ್ಲಿರುವ ಅವರ ಸಮಾಧಿ ಬಳಿ ವಾರ್ಷಿಕ ಸಮಾರಂಭವನ್ನು ನಡೆಸಲಾಗುತ್ತದೆ.
ಜಾರ್ಖಂಡ್‌ನ ರಾಜ್ಯದಲ್ಲಿ ಬಿರ್ಸಾ ಮುಂಡಾ ವಿಮಾನ ನಿಲ್ದಾಣ ರಾಂಚಿ, ಬಿರ್ಸಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಂಡ್ರಿ, ಬಿರ್ಸಾ ಮುಂಡಾ ಬುಡಕಟ್ಟು ವಿಶ್ವವಿದ್ಯಾಲಯ, ಬಿರ್ಸಾ ಕೃಷಿ ವಿಶ್ವವಿದ್ಯಾಲಯ, ಬಿರ್ಸಾ ಕಾಲೇಜು ಖುಂಟಿ, ಬಿರ್ಸಾ ಮುಂಡಾ ಅಥ್ಲೆಟಿಕ್ಸ್ ಕ್ರೀಡಾಂಗಣ, ಮತ್ತು ಬಿರ್ಸಾ ಮುಂಡಾ ಕೇಂದ್ರ ಜೈಲು ಮುಂತಾದ ಸ್ಮಾರಕಗಳಿವೆ.ಸಂಸತ್ತಿನ ಕೇಂದ್ರ ಭವನದಲ್ಲಿಯೂ ಕೂಡ ಬಿರ್ಸಾ ಮುಂಡಾ ಅವರ ಫೋಟೋವನ್ನು ನೇತು ಹಾಕಲಾಗಿದೆ.ಅಕ್ಟೋಬರ್ 16, 1989 ರಂದು ಲೋಕಸಭೆಯ ಸ್ಪೀಕರ್ ಡಾ. ಬಲರಾಮ್ ಜಖರ್ ಅವರು ಅನಾವರಣಗೊಳಿಸಿದ ಈ ಭಾವಚಿತ್ರವನ್ನು ಬಿರ್ಸಾ ಮುಂಡಾ ಪ್ರತಿಮೆ ಸಮಿತಿ ರೂರ್ಕೆಲಾ ಅವರು ನಿಯೋಜಿಸಿದರು.ಇನ್ನು ಹಿಂದಿ ಚಿತ್ರಗಳಾದ ಉಲ್ಗುಲಾನ್-ಏಕ್ ಕ್ರಾಂತಿ (2004) ಮತ್ತು ಗಾಂಧಿ ಸೆ ಪೆಹ್ಲೆ ಗಾಂಧಿ (2008)-ಅವರ ಜೀವನ ಚರಿತ್ರೆಯನ್ನು ಆಧರಿಸಿವೆ.
1979 ರಲ್ಲಿ ಬಂಗಾಳಿ ಭಾಷೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗೆದ್ದ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಮಹಾಶ್ವೇತಾ ದೇವಿ ಅವರ ಐತಿಹಾಸಿಕ ಕಾದಂಬರಿ ಅರಣ್ಯರ್ ಅಧಿಕಾರ (ಅರಣ್ಯದ ಹಕ್ಕು, 1977), ಮುಂಡಾ ಅವರ ಜೀವನ ಮತ್ತು 19 ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ರಾಜ್ ವಿರುದ್ಧದ ದಂಗೆಯನ್ನು ಆಧರಿಸಿದೆ.
-ಮಂಜುನಾಥ ನರಗುಂದ