ಬೆಂಗಳೂರು: ದೇಶದ ಸರ್ವೋಚ್ಚ ನ್ಯಾಯಾಲಯ (Supreme Court) ಹೇಳಿದ ಮೇಲೂ ಕರ್ನಾಟಕಕ್ಕೆ (Karnataka) ಕಡಿಮೆ ಆಮ್ಲಜನಕ (Oxygen) ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕಕ್ಕೆ ಏಕೆ ಈ ರೀತಿ ತಾರತಮ್ಯ ಮಾಡಲಾಗುತ್ತಿದೆ? ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ? ಎಂದು ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಎಚ್.ಡಿ. ಕುಮಾರಸ್ವಾಮಿ 'ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್ (MT) ಆಮ್ಲಜನಕ ಪೂರೈಸಬೇಕು ಎಂಬ ಕೋರ್ಟ್ ಆದೇಶದ ನಂತರವೂ ಕೇಂದ್ರ ರಾಜ್ಯಕ್ಕೆ ಪೂರೈಸಿದ್ದು 120MT ಮಾತ್ರ. ಅತ್ತ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680MT ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ. ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ?' ಎಂದು ಪ್ರಶ್ನಿಸಿದ್ದಾರೆ.
The Centre should shun the arrogance that comes from the belief that it is most powerful and instead take measures to fulfil the genuine requirements of Karnataka. It has to realise that it is actually running the govt in a federal structure...
— H D Kumaraswamy (@hd_kumaraswamy) May 13, 2021
'ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರ್ಕಾರವೇ ನೀಡಿರುವ ಅಂಕಿ ಅಂಶಗಳಿಂದ ಬಯಲಾಗಿದೆ. ಕರ್ನಾಟಕ, ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ?' ಎಂದು ಕೇಳಿದ್ದಾರೆ.
ಇದನ್ನೂ ಓದಿ- "ಕೊರೊನಾ ಮೂರನೇ ಅಲೆ ಸಾಧ್ಯತೆ, ಈಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ" ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
'ಕರ್ನಾಟಕದ ವಿಚಾರದಲ್ಲಿ ಹೇಳತೀರದ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರ (Central Govt) ಒಂದು ವಿಷಯ ಸ್ಪಷ್ಟವಾಗಿ ಅರಿಯಬೇಕು. ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ನಡೆಸುತ್ತಿರುವವರು ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯದಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ದಂಗೆ ಎದ್ದಾರು' ಎಚ್ಚರಿಸಿದ್ದಾರೆ.
'ಲಸಿಕೆ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. '3ಕೋಟಿ ಲಸಿಕೆಗೆ ಕೇಳಿದ್ದೇವೆ. 7 ಲಕ್ಷ ಡೋಸ್ ಸಿಕ್ಕಿದೆ. ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಆದ್ಯತೆ. ಮೊದಲ ಡೋಸ್ ಪಡೆಯುವವರು ಕಾಯಬೇಕು ಎಂದಿದ್ದಾರೆ. ಲಸಿಕೆಯ ವಿಚಾರದಲ್ಲಿಯೂ ಕೇಂದ್ರ ತಾರತಮ್ಯ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ' ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
7 lakh doses to Karnataka as against the request to provide 3 crore doses. This has proved that the Centre is showing an attitude of bias even with respect to vaccines.
— H D Kumaraswamy (@hd_kumaraswamy) May 13, 2021
'ಬಿಜೆಪಿಯ ಪ್ರತಿಯೊಂದು ಧೋರಣೆಯನ್ನೂ ಬೆಂಬಲಿಸುವವರು, ಸಮರ್ಥಿಸಿಕೊಳ್ಳುತ್ತಿರುವವರು, ವಿರೋಧ ಪಕ್ಷಗಳ ನ್ಯಾಯಯುತ ಸಲಹೆ, ಬೇಡಿಕೆಗಳನ್ನು ಅಡಿಗಡಿಗೂ ಟೀಕಿಸುವವರು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸಮರ್ಥಿಸಿಕೊಳ್ಳುವರೇ? ಆಮ್ಲಜನಕವಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕನ್ನಡಿಗರ ಸಾವಿನ ಹೊಣೆಯನ್ನು ಹೊರುವರೇ? ಎಂದು ಪ್ರಶ್ನೆ ಮಾಡಿದ್ದಾರೆ.
Are those supporting as well as defending every stand and decision of the BJP and criticizing even the just demands and suggestions of the Opposition parties ready to defend such an injustice being inflicted on Karnataka and Kannadigas?...
— H D Kumaraswamy (@hd_kumaraswamy) May 13, 2021
'ನ್ಯಾಯಾಲಯ ಹೇಳಿದ್ದ 1200MT ಬದಲಿಗೆ 120MT ಆಮ್ಲಜನಕ (Oxygen) ಪೂರೈಸಿದ್ದಕ್ಕೆ ಮುಖ್ಯಮಂತ್ರಿ, ಕೇಂದ್ರದ ಸಚಿವರು, ಬಿಜೆಪಿ ಸಂಸದರು ಮುಗಿಬಿದ್ದು ಕೇಂದ್ರ, ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ನಮಗೆ ಸಿಗಬೇಕಾಗಿದ್ದರಲ್ಲಿ ಮುರಿದುಕೊಂಡು ಕೊಟ್ಟದ್ದಕ್ಕೆ ಧನ್ಯವಾದ ಏಕೆ? ಬಿಜೆಪಿ ನಾಯಕರು, ಬಿಜೆಪಿ ಬೆಂಬಲಿಗರು ಈ ಗುಲಾಮಗಿರಿ ಬಿಡಬೇಕು' ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ- ರಾಜ್ಯದಲ್ಲಿ ಕೋಮುವಾದದ ವಿಷ ಬೀಜಕ್ಕೆ ಇರುವ ಮತ್ತೊಂದು ಹೆಸರು ತೇಜಸ್ವಿ ಸೂರ್ಯ- ಡಿ.ಕೆ.ಶಿವಕುಮಾರ್
'ಕೇಂದ್ರ ಸರ್ಕಾರ ತಾರತಮ್ಯ ಬಿಟ್ಟು ಕರ್ನಾಟಕದ ಅಗತ್ಯವನ್ನು ಪೂರೈಸಬೇಕು. ತಾನು ಸರ್ವಶಕ್ತ ಆಡಳಿತ ನಡೆಸುತ್ತಿರುವ ದಿಮಾಕನ್ನು ಕೇಂದ್ರ ಬಿಡಬೇಕು. ಒಕ್ಕೂಟ ಸರ್ಕಾರ ನಡೆಸುತ್ತಿರುವ ವಾಸ್ತವ ಅರಿಯಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ತಪ್ಪನ್ನು ಇಲ್ಲಿ ಸಮರ್ಥಿಸಿಕೊಳ್ಳುತ್ತಿರುವವರು ಮೊದಲು ತಾವು ಕನ್ನಡಿಗರು ಎಂಬುದು ಅರಿಯಬೇಕು' ಎಂದು ಹೇಳಿದ್ದಾರೆ.
'ಆಮ್ಲಜನಕ ಕರ್ನಾಟಕದ ಈ ಹೊತ್ತಿನ ಅಗತ್ಯ. ಈ ವಿಚಾರದಲ್ಲಿ ಆಗುತ್ತಿರುವ ತಾರತಮ್ಯವನ್ನೇ ಕನ್ನಡಿಗರಾಗಿ ನಾವು ಪ್ರಶ್ನೆ ಮಾಡದೇ ಹೋದರೆ ಇನ್ನ್ಯಾವ ವಿಚಾರದಲ್ಲಿ ನಾವು ನ್ಯಾಯ ಪಡೆಯಲು ಸಾಧ್ಯ. ಪರಿಹಾರ, ಅನುದಾನಗಳಲ್ಲಿ ಕರ್ನಾಟಕಕ್ಕೆ ಈಗ ಆಗಿರುವ ಅನ್ಯಾಯ ಸಹಿಸಿದ್ದಾಗಿದೆ. ಜೀವದ ವಿಚಾರದಲ್ಲಿ ನಡೆಯುತ್ತಿರುವ ಈ ತಾರತಮ್ಯ ಸಹಿಸುವುದು ಬೇಡ' ಎಂದು ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.