Watch CCTV Footage: ಚಲಿಸುತ್ತಿದ್ದ ರೈಲಿನಡಿ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ವ್ಯಕ್ತಿ..!

ಮಧ್ಯಪ್ರದೇಶದ ಇಂದೋರ್ ನಗರದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

Written by - Puttaraj K Alur | Last Updated : Aug 19, 2021, 12:49 PM IST
  • ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ರೈಲಿನಡಿ ಸಿಲುಕುತ್ತಿದ್ದ ಮಹಿಳೆಯ ಪ್ರಾಣ ಉಳಿಸಿದ ಸಹಪ್ರಯಾಣಿಕ
  • ಮಧ್ಯಪ್ರದೇಶದ ಇಂದೋರ್ ರೈಲು ನಿಲ್ದಾಣದಲ್ಲಿ ನಡೆದಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
  • ಸಹಪ್ರಯಾಣಿಕನ ಸಮಯ ಪ್ರಜ್ಞೆಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರ
Watch CCTV Footage: ಚಲಿಸುತ್ತಿದ್ದ ರೈಲಿನಡಿ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ವ್ಯಕ್ತಿ..! title=
ರೈಲಿನಡಿ ಸಿಲುಕುತ್ತಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ

ಇಂದೋರ್: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಕೆಳಗೆ ಬೀಳುತ್ತಿದ್ದ ಮಹಿಳೆಯನ್ನು ಸಹಪ್ರಯಾಣಿಕನೊಬ್ಬ ರಕ್ಷಿಸಿದ್ದಾನೆ. ಮಧ್ಯಪ್ರದೇಶದ ಇಂದೋರ್ ನಗರದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾ(CCTV Camera)ದಲ್ಲಿ ದೃಶ್ಯ ಸೆರೆಯಾಗಿದೆ. ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದ ಮಹಿಳೆ ಕಾಲುಜಾರಿ ರೈಲಿನಡಿ ಬೀಳುತ್ತಿದ್ದರು. ಈ ವೇಳೆ ಸರಿಯಾದ ಸಮಯಕ್ಕೆ ಆಪಾತ್ಭಾಂದವನಂತೆ ಬಂದ ಸಹಪ್ರಯಾಣಿಕ ರೈಲಿನಡಿ ಸಿಲುಕುತ್ತಿದ್ದ ಮಹಿಳೆಯನ್ನು ಹೊರಗೆಳೆದು ರಕ್ಷಿಸಿದ್ದಾನೆ.

ಇಂದೋರ್ ನಿಲ್ದಾಣ(Indore Railway Station)ದಲ್ಲಿ ರೈಲು ಪ್ಲಾಟ್‌ಫಾರ್ಮ್ ನಿಂದ ಹೊರಡುತ್ತಿತ್ತು. ರೈಲು ತನ್ನ ವೇಗವನ್ನು ಹೆಚ್ಚಿಸುತ್ತಿದ್ದಂತೆ ಮಹಿಳೆಯೊಬ್ಬರು ಓಡಿ ಬಂದು ಹತ್ತಲು ಪ್ರಯತ್ನಿಸಿದ್ದಾರೆ. ಹೀಗೆ ಹತ್ತಲು ಹೋದ ಮಹಿಳೆ ಕಾಲುಜಾರಿ ರೈಲಿನಡಿ ಬೀಳುತ್ತಿದ್ದರು. ಅದೃಷ್ಟವಶಾತ್ ಅಲ್ಲಿಯೇ ಇದ್ದ ಪ್ರಯಾಣಿಕರ ಪೈಕಿ ಒಬ್ಬ ವ್ಯಕ್ತಿ ಸರಿಯಾದ ಸಮಯಕ್ಕೆ ಅವರನ್ನು ಹಿಡಿದು ಹೊರಗೆಳೆದಿದ್ದಾನೆ. ಈ ವೇಳೆ ರೈಲ್ವೆ ಪೊಲೀಸ್ ಅಧಿಕಾರಿ ಕೂಡ ಮಹಿಳೆಯ ಸಹಾಯಕ್ಕೆ ಓಡೋಡಿ ಸ್ಥಳಕ್ಕೆ ಬಂದಿದ್ದಾರೆ. ಸಹಪ್ರಯಾಣಿಕನ ಸಮಯ ಪ್ರಜ್ಞೆಯಿಂದಾಗಿ ಮಹಿಳೆ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಪ್ರಣಾಪಾಯದಿಂದ ಪಾರಾದ ಮಹಿಳೆ ಸುಸ್ತಾಗಿದ್ದರು. ಸಹಪ್ರಯಾಣಿಕರು ಅವರಿಗೆ ನೀರು ನೀಡಿ ಉಪಚರಿಸಿದ್ದಾರೆ.

ಇದನ್ನೂ ಓದಿ: ಹತ್ತನೇ ತರಗತಿಯ ಪರೀಕ್ಷೆ ಬರೆದ ಮಾಜಿ ಸಿಎಂ, ಪಾಸ್ ಆಗದೆ ಉಳಿದಿದೆ ಈ ಪೇಪರ್

‘ರೈಲಿನಡಿ ಸಿಲುಕುತ್ತಿದ್ದ ಮಹಿಳೆ ತಮ್ಮ ಪತಿ ಮತ್ತು ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದರು. ಲಗೇಜನ್ನು ರೈಲಿನೊಳಗೆ ಇರಿಸಿದ ಬಳಿಕ ಆ ವ್ಯಕ್ತಿ ಮತ್ತು ಮಗು ರೈಲು ಹತ್ತಿದ್ದಾರೆ. ಆದರೆ ಮಹಿಳೆ ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿ ಜಾರಿ ಬಿದ್ದಿದ್ದಾರೆ. ಸಹ ಪ್ರಯಾಣಿಕರು ಸರಿಯಾದ ಸಮಯಕ್ಕೆ ಸರಪಳಿಯನ್ನು ಎಳೆದಿದ್ದರಿಂದ ರೈಲು ನಿಂತಿತು. ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದಾಗಿ ಅವರು ಪ್ರಣಾಪಾಯದಿಂದ ಪಾರಾಗಿದ್ದಾರೆ’ ಅಂತಾ ರೈಲ್ವೆ PRO ಖೇಮರಾಜ್ ಮೀನಾ ಹೇಳಿದ್ದಾರೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಇದೀಗ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮಹಿಳೆಯ ಪ್ರಾಣ ಉಳಿಸಿದ ಸಹಪ್ರಯಾಣಿಕನ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Whatsappನಲ್ಲಿ ಈ ಎರಡು ಕೆಲಸಗಳನ್ನು ಎಂದಿಗೂ ಮಾಡಬೇಡಿ, ಇಲ್ಲವೇ ನಿಮ್ಮ ಅಕೌಂಟ್ ಬ್ಯಾನ್ ಆಗುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News