ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಚಾರ್ಜ್ ಶೀಟ್ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದು, ಹಲವು ಪ್ರಶ್ನೆಗಳನ್ನೂ ಕೇಳಿದ್ದಾರೆ.
ಜೆಡಿಎಸ್ ಬಿಡುಗಡೆ ಮಾಡಿರುವ 15 ಅಂಶಗಳ ಆರೋಪ ಪಟ್ಟಿ ಹೀಗಿದೆ :
1. ಲಿಂಗಾಯತ ವೀರಶೈವ ಸಮುದಾಯವನ್ನು ಒಡೆದಿದ್ದು ಜಾತ್ಯತೀತತೆ ತತ್ವದ ಆಧಾರದ ಮೇಲಾ?
2. ಸಮುದಾಯ, ಧರ್ಮಗಳನ್ನು ಒಡೆಯುವುದು, ಓಲೈಸುವುದೇ ಕಾಂಗ್ರೆಸ್ನ ಜಾತ್ಯತೀತತೆಯೇ?
ಜ್ಯಾತ್ಯತೀತ ತತ್ವದ ಪ್ರತಿಪಾದಕರಿಗೆ ಕಾಂಗ್ರೆಸ್ ಸರ್ಕಾರ ಕೊಟ್ಟ ರಕ್ಷಣೆ ಎಂಥದ್ದು?
3. ಸಂಶೋಧಕ ಎಂ.ಎಂ. ಕಲಬುರಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಎಲ್ಲಿವರೆಗೆ ಬಂದಿದೆ?
4. ಸತ್ಯದ ಮೇಲೆ ಪ್ರಮಾಣವಚನ ಸ್ವೀಕಾರ ಮಾಡಿದವರು ಸತ್ಯದ ಕೆಲಸ ಮಾಡಿದರೇ? ನ್ಯಾಯ, ಸತ್ಯದ ಪ್ರತೀಕವಾದ ಲೋಕಾಯುಕ್ತ ಸಂಸ್ಥೆಯನ್ನು ಕಾಂಗ್ರೆಸ್ ದುರ್ಬಲಗೊಳಿಸಿದೆ.
5. 70 ಲಕ್ಷ ರೂ.ಗಳ ಹ್ಯೂಬ್ಲೋಟ್ ಕೈಗಡಿಯಾರವನ್ನು ಸಿದ್ದರಾಮಯ್ಯ ಖರೀದಿಸಿ ತೊಟ್ಟಿದ್ದೋ? ಕಿಕ್ ಬ್ಯಾಕ್ನಿಂದ ಬಂದ ಕೊಡುಗೆಯೋ?
6. ತುರ್ತು ಪರಿಸ್ಥಿತಿ ಹೇರುವ ಮೂಲಕ ಕಾಂಗ್ರೆಸ್ ಸಂವಿಧಾನವನ್ನು ಅಗೌರವಿಸಿದೆ. ಸಂವಿಧಾನಕ್ಕೆ 7. ರಾಹುಲ್ ಗಾಂಧಿ ಅವರ ಕುಟುಂಬ ಅಪಚಾರ ಮಾಡಿದೆ. ಜೆಡಿಎಸ್ನ ಬಂಡಾಯ ಶಾಸಕರನ್ನು ರಕ್ಷಿಸಿಕೊಳ್ಳಲು ಸ್ಪೀಕರ್ ಕಚೇರಿ ದುರ್ಬಳಕೆ ಮಾಡಿಕೊಂಡಿದ್ದು ಅಸಾಂವಿಧಾನಿಕ.
8. ಕಾಂಗ್ರೆಸ್ ಮಗ್ಗುಲಲ್ಲೇ ಅತ್ಯಾಚಾರಿಗಳಿದ್ದಾರೆ. ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಮೇಲಿರುವ ಅತ್ಯಾಚಾರ ಪ್ರಕರಣ ಮತ್ತು ಹೆಚ್.ವೈ ಮೇಟಿ ಅವರ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಕಾಂಗ್ರೆಸ್ ಮರೆತಿದೆ.
9. ರೈತರ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಹಣ ಬಿಡುಗಡೆ ಮಾಡದೆ ರೈತರನ್ನು ವಂಚಿಸಿದೆ.
10. ಬೃಹತ್ ಹಗರಣಗಳಿಗೆ ಸ್ಟೀಲ್ ಬ್ರಿಡ್ಜ್ ಯೋಜನೆ ಒಂದು ಉದಾಹರಣೆ
11. ಕಾಂಗ್ರೆಸ್ ಪಕ್ಷದಲ್ಲೇ ಗೂಂಡಾಗಳಿದ್ದಾರೆ. ಇನ್ನು ಕಾಂಗ್ರೆಸ್ನಿಂದ ಜನರ ರಕ್ಷಣೆ ಸಾಧ್ಯವೇ?
12. ವಿಧಾನಪರಿಷತ್ ಸದಸ್ಯ ಗೋವಿಂದರಾಜು ತಮ್ಮ ಡೈರಿಯಲ್ಲಿ ಬರೆದಿದ್ದ ಹೈಕಮಾಂಡ್ ಕಪ್ಪದ ಕತೆ ಏನಾಯ್ತು?
13. ಮಹದಾಯಿ ವಿವಾದದಲ್ಲಿ ಬಗೆಹರಿಯದೇ ಹೋಗಿದ್ದರಲ್ಲಿ ಕಾಂಗ್ರೆಸ್ ಪಕ್ಷ ಎ1 ಆರೋಪಿ
ಎಲ್ಲ ಸಮುದಾಯದ ದೊಡ್ಡ ನಾಯಕರನ್ನೇ ಮೂಲೆಗೆ ಸರಿಸಿ, ಅವರು ಪ್ರತಿನಿಧಿಸುವ ಸಮುದಾಯಕ್ಕೆ ದ್ರೋಹ ಬಗೆದಿದ್ದು ಕಾಂಗ್ರೆಸ್.
14. ದಲಿತರ ದೌರ್ಜನ್ಯ ತಡೆ ಕಾಯಿದೆ ದುರ್ಬಲಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದಾಗ ದೇಶದಲ್ಲಿ ದಲಿತರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಆಕ್ರೋಶವನ್ನು ಲಾಭವಾಗಿ ಪರಿವರ್ತಿಸಿಕೊಳ್ಳಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉಪವಾಸ ಮಾಡಿದರು. ಈ ಮೂಲಕ ಬಡವರ ಹಸಿವನ್ನೇ ಅಣಕಿಸಿದರು.
15. ನಾನು ಅಮಿತ್ ಷಾ ಜತೆ ವಿಮಾನದಲ್ಲಿ ಒಟ್ಟಿಗೇ ಪ್ರಾಣಿಸಿದ ಫೋಟೊ ನಿಮ್ಮ ಬಳಿ ಇದೆಯೇ ಸಿದ್ದರಾಮಯ್ಯ ನವರೇ? ನಿಮಗೆ ನೆನಪಿನಶಕ್ತಿ ಕಡಿಮೆ ಎನಿಸುತ್ತದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಉಪಚುನಾವಣೆಗಳು ನಡೆಯುವ ಸಂದರ್ಭದಲ್ಲೇ ನೀವು ಅಂದಿನ ಬಿಜೆಪಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿದ್ದನ್ನು ಇಡೀ ಕರ್ನಾಟಕ ನೋಡಿದೆ. ನೆನಪಾಯ್ತೇ?
ಇಷ್ಟು ಪ್ರಶ್ನೆಗಳನ್ನು ಕುಮಾರಸ್ವಾಮಿ ಅವರು ಕಾಂಗ್ರೆಸ್ ಪಕ್ಷವನ್ನು ಕೇಳಿದ್ದು, ಈ ಆರೋಪಪಟ್ಟಿಗೆ ಕಾಂಗ್ರೆಸ್ ಏನೆಂದು ಉತ್ತರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.