ಬೆಂಗಳೂರು: ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ಪಕ್ಷ ಅಗಲಿ ಹೋಗಿರುವ ನನ್ನ ಮಗನ ಹೆಸರನ್ನು ಎಳೆದು ತಂದಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆರೋಪಿಸಿದ್ದಾರೆ.
"ಸರಿ ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ಬಿಟ್ ಕಾಯಿನ್ ಹಗರಣವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದುಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ.ಕೇಂದ್ರ ಮತ್ತು ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಬಿಜೆಪಿಯವರೇ ತನಿಖೆಗೆ ಒಪ್ಪಿಸಬೇಕು. ನಾವು ತಪ್ಪಿತಸ್ಥರೋ? ಬಿಜೆಪಿಯವರು ತಪ್ಪತಸ್ಥರೋ? ಎಂದು ತನಿಖೆಯಾಗಿ, ಸತ್ಯ ಗೊತ್ತಾಗಲಿ" ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೇಂದ್ರದ ಈ ಯೋಜನೆಯಲ್ಲಿ ಹೂಡಿಕೆ ಮಾಡಿ 1 ಕೋಟಿ ಆದಾಯ ಗಳಿಸಿ!
"ನನ್ನ ಮಗ ರಾಕೇಶ್ ನಮ್ಮನಗಲಿ ಐದು ವರ್ಷಗಳಾಗಿವೆ, ಪುತ್ರಶೋಕ ನಿರಂತರ. ತನ್ನ ಮೇಲಿನ ಆರೋಪಕ್ಕೆ ಆತ ಪ್ರತಿಕ್ರಿಯಿಸಲೂ ಸಾಧ್ಯವಿಲ್ಲ.ಇಂತಹ ಸಮಯದಲ್ಲಿ ಬಿಜೆಪಿ ಪಕ್ಷ ನನ್ನ ದಿವಂಗತ ಮಗನ ಹೆಸರನ್ನು ಎಳೆದು ರಾಜಕೀಯ ಮಾಡಲು ಹೊರಟಿರುವುದು "ಅತ್ಯಂತ ವೈಯಕ್ತಿಕ ಮತ್ತು ಕ್ಷುಲಕತನದ' ರಾಜಕಾರಣ.ರಾಕೇಶ್ ಜೊತೆಗೆ ಬಿಟ್ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್ ಮುದ್ದಪ್ಪ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ.ಹಾಗಿದ್ದರೆ 2018ರಲ್ಲಿ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಪೋಟೊವನ್ನು ಹೇಗೆ ವ್ಯಾಖ್ಯಾನಿಸುವುದು? ಎಂದು ಸಿದ್ಧರಾಮಯ್ಯನವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಶಬರಿ ಮಲೆಯ ಪವಿತ್ರ ತೀರ್ಥಕ್ಕೆ ಅವಮಾನ? ಘಟನೆಯ ನಂತರ ಸಚಿವರು ನೀಡಿದ ಸ್ಪಷ್ಟನೆ ಇದು
ಶ್ರೀಕೃಷ್ಣನ ಜೊತೆ ಬಂಧನಕ್ಕೊಳಗಾದ ಹೇಮಂತ್ ಮುದ್ದಪ್ಪನ ಬಿಡುಗಡೆಗಾಗಿ ಪೊಲೀಸರ ಜೊತೆ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಸಂಧಾನ ಮಾಡಿದ್ದು,ಆ ಸೇವೆಗಾಗಿ ಆರೋಪಿಯಿಂದ ಆ ಬಿಜೆಪಿ ನಾಯಕ ಬಿಟ್ ಕಾಯಿನ್ ಪಡೆದಿದ್ದ ಎಂಬ ಆರೋಪ ಇದೆ.ಆ ನಾಯಕ ಯಾರೆಂದು ನಳಿನ್ ಕುಮಾರ್ ಕಟೀಲ್ ಅವರಿಗೆ ಗೊತ್ತಿರಬಹುದೇನೋ?ನನ್ನ ಕೈಯಲ್ಲಿ ಪುರಾವೆಗಳಿಲ್ಲದ ಕಾರಣ ನಾನು ಇಲ್ಲಿಯ ವರೆಗೆ ಯಾರ ವಿರುದ್ಧವೂ ನೇರ ಆರೋಪ ಮಾಡಿಲ್ಲ.ಬಿಜೆಪಿ ಸರ್ಕಾರವೇ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿರುವ ವಿಷಯವನ್ನಷ್ಟೇ ಹೇಳುತ್ತಿದ್ದೇನೆ.ಈ ವರೆಗಿನ ಪೊಲೀಸರ ತನಿಖೆ ಯಾರೋ ಪ್ರಭಾವಿಗಳನ್ನು ರಕ್ಷಿಸಲು ನಡೆಸಿರುವ ನಾಟಕದಂತಿದೆ.ನಮ್ಮ ಬುಟ್ಟಿಯಲ್ಲಿ ಹಾವು ಇಲ್ಲ ಎಂದಾದರೆ ಬಿಜೆಪಿ ನಾಯಕರು ಯಾಕೆ ಹಾವು ಕಂಡ ಹಾಗೆ ಬೆಚ್ಚಿ ಬೀಳುತ್ತಿದ್ದಾರೆ?ಯಾಕೆ ಸರತಿ ಸಾಲಲ್ಲಿ ನಿಂತು ಹೆಗಲು ಮುಟ್ಟಿ ನೋಡಿಕೊಂಡು " ಸರ್ಕಾರ ತಪ್ಪು ಮಾಡಿಲ್ಲ, ನಾವೆಲ್ಲ ನಿರಪರಾಧಿಗಳು' ಎಂದು ಎದೆ ಬಡಿದು ಕೊಳ್ಳುತ್ತಿದ್ದಾರೆ? ಎಂದು ಅವರು ವ್ಯಂಗ್ಯವಾಡಿದ್ದಾರೆ.
"ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ನಾಯಕರ ಮಕ್ಕಳ ಹೆಸರೂ ಕೇಳಿ ಬರುತ್ತಿವೆ.ಪುರಾವೆಗಳಿಲ್ಲದೆ ಕುಟುಂಬದ ಸದಸ್ಯರ ಹೆಸರು ಎಳೆದು ತರಬಾರದೆಂದು ಸುಮ್ಮನಿದ್ದೇನೆ.ಬಿಜೆಪಿ ನಾಯಕರು ಜೇನು ಗೂಡಿಗೆ ಕಲ್ಲೆಸೆಯುತ್ತಿದ್ದಾರೆ. ಕೆರಳಿದ ಜೇನು ನೊಣಗಳು ಯಾರಿಗೆಲ್ಲ ಕಚ್ಚಲಿದೆಯೋ ಗೊತ್ತಿಲ್ಲ' ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.