ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಉಳಿದಿದೆ. ಈ ಹಿನ್ನಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಚುನಾವಣೆಗಾಗಿ ಭರ್ಜರಿ ಸಿದ್ಧತೆ ಆರಂಭಿಸಿವೆ. ಇತ್ತೀಚೆಗಷ್ಟೇ ಪಂಜಾಬ್ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಸರ್ಕಾರ ರಚಿಸಿರುವ ಆಮ್ ಆದ್ಮಿ ಪಕ್ಷವು, 2023ರಲ್ಲಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿದೆ.
ಇಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಬೃಹತ್ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಮಾವೇಶವನ್ನು ಉದ್ಘಾಟಿಸುವ ಮೂಲಕ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಆಪ್ ಪಕ್ಷದ ಚುನಾವಣಾ ರಣಕಹಳೆ ಊದಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯ ರಾಜ್ಯಕೀಯ ಇತಿಹಾಸದಲ್ಲಿಯೇ ಇದೊಂದು ಐತಿಹಾಸಿಕ ದಿನ:
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಈ ಬೃಹತ್ ರೈತ ಸಮಾವೇಶದಲ್ಲಿ ರಾಜ್ಯದ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೆಹಲಿ ಮಾದರಿಯಿಂದ ಪ್ರೇರಣೆ ಪಡೆದಿರುವ ನಾಡಿನ ರೈತ ಸಂಘವು ಈ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರವರಿಗೆ ವಿಶೇಷ ಆಹ್ವಾನ ನೀಡಿದೆ. ರಾಜ್ಯ ರಾಜ್ಯಕೀಯ ಇತಿಹಾಸದಲ್ಲಿಯೇ ಇದೊಂದು ಐತಿಹಾಸಿಕ ದಿನ ಎಂದು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ರೈತ ಮುಖಂಡರು ಬಣ್ಣಿಸಿದ್ದಾರೆ.
ಇದನ್ನೂ ಓದಿ- ಸಿದ್ದರಾಮಯ್ಯ ಅಲ್ಲ ಸುಳ್ಳಿನರಾಮಯ್ಯ, ಬಿಜೆಪಿ ಬೆಂಕಿಗೆ ಕಾಂಗ್ರೆಸ್ ಪೆಟ್ರೋಲ್: ಎಚ್.ಡಿ.ಕುಮಾರಸ್ವಾಮಿ
ಕರ್ನಾಟಕ ವಿಧಾನಸಭಾ ಚುನಾವಣೆಗೆ 1 ವರ್ಷ ಇರುವಾಗಲೇ ಆಪ್ ಭರ್ಜರಿ ಸಿದ್ಧತೆ :
ದೇಶಾದ್ಯಂತ ದೆಹಲಿ ಮಾದರಿ, ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕಾರ್ಯವೈಖರಿ ಸಖತ್ ಸದ್ದು ಮಾಡುತ್ತಿದೆ. ದೆಹಲಿಯಲ್ಲಿನ ಶಿಕ್ಷಣ ವ್ಯವಸ್ಥೆ, ಆರೋಗ್ಯ ವ್ಯವಸ್ಥೆಗಳಲ್ಲಿನ ಸುಧಾರಣೆಗಳು ಜನರ ಗಮನ ಸೆಳೆಯುತ್ತಿವೆ. ದೆಹಲಿ ಮಾಡೆಲ್ ಮುಂದಿಟ್ಟುಕೊಂಡು ಪಂಜಾಬ್ ರಾಜ್ಯದಲ್ಲಿ ಮೊದಲ ಬಾರಿ ಗದ್ದುಗೆ ಪಡೆದಿರುವ ಆಪ್ ಪಕ್ಷವು ಹೊಸ ವಿಶ್ವಾಸದೊಂದಿಗೆ ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ತೀವ್ರಗೊಳಿಸಿದೆ.
ಇತ್ತೀಚೆಗಷ್ಟೇ ನಿವೃತ್ತ ಐಪಿಎಸ್ ಭಾಸ್ಕರ್ ರಾವ್ ಅವರು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೇರ್ಪಡೆಗೊಂಡಿದ್ದರು. ಇದರ ಬೆನ್ನಲ್ಲೇ, ಇಂದು ನಿವೃತ್ತ ದಕ್ಷ ಕೆ.ಎ.ಎಸ್ ಅಧಿಕಾರಿ ಕೆ ಮಥಾಯಿ ಆಪ್ ಸೇರ್ಪಡೆಗೊಳ್ಳಲಿದ್ದಾರೆ. ದೆಹಲಿ ಗೆಲುವಿನ ಹಿಂದೆ ಶ್ರಮಿಸಿದ ಆಪ್ ಶಾಸಕ ದಿಲೀಪ್ ಪಾಂಡೆ ಅವರೇ ರಾಜ್ಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ- HD Deve Gowda : 'ಹುಬ್ಬಳ್ಳಿ ಗಲಭೆಗೆ ಎರಡೂ ರಾಷ್ಟ್ರೀಯ ಪಕ್ಷಗಳೆ ಕಾರಣ'
ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸ್, ಎಸ್. ಬಂಗಾರಪ್ಪ, ಬಿ.ಎಸ್. ಯಡಿಯೂರಪ್ಪ, ಸಿದ್ದರಾಮಯ್ಯ ಅವರಂಥ ಘಟಾನುಘಟಿ ನಾಯಕರೇ ಹೊಸ ಪಕ್ಷವನ್ನು ಹುಟ್ಟುಹಾಕಿ ಯಶಸ್ವಿ ಸಾಧಿಸಲು ಸಾಧ್ಯವಾಗಿಲ್ಲ. ದೂರದ ದೆಹಲಿಯ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಯಶಸ್ಸು ಸಾಧಿಸುವುದೇ ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.