ನವದೆಹಲಿ/ರೇವಾ: ಮಹಿಳೆಯರ ಮೇಲೆ ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಮಧ್ಯೆ, ಮಹಿಳೆಯರಿಗೆ ರಕ್ಷಣೆ ನೀಡಬೇಕಾದ ಆರಕ್ಷಕರೇ ಅತ್ಯಾಚಾರಕ್ಕೆ ಮುಂದಾಗಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ.
ಇಂತಹ ಒಂದು ಘಟನೆ ನಡೆದಿರುವುದು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ. ಇಲ್ಲಿನ ಮಾವುಗಂಜ್ ಪೋಲಿಸ್ ಠಾಣೆಯ ಪ್ರಭಾರ ಅಧಿಕಾರಿ ಮಹೇಂದ್ರ ಮಿಶ್ರಾ(45) 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದು, ಸದ್ಯ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಮಾವುಗಂಜ್ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಶಿವ ಕುಮಾರ್ ಸಿಂಗ್, "15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಸಬ್ ಇನ್ಸ್'ಪೆಕ್ಟರ್ ಮಹೇಂದ್ರ ಮಿಶ್ರಾ ಅವರನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಸಂಸದರೊಬ್ಬರು, ಅಂತರ್ಜಾಲ ಮತ್ತು ಸ್ಮಾರ್ಟ್ ಪೋನ್ ಬಳಕೆಯಿಂದಾಗಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ.
ಆರೋಪಿ ಸಬ್ ಇನ್ಸ್'ಪೆಕ್ಟರ್ ಮಹೇಂದ್ರ ಮಿಶ್ರಾನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನೀಶ್ ಪಾಟಿದಾರ್ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.