ಬೀದರ್ : ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚೌಕೀದಾರ ಅಲ್ಲ, ಭ್ರಷ್ಟಾಚಾರದ ಭಾಗಿದಾರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.
ಇಂದು ಬೀದರ್ ನಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಲ್ಕು ವರ್ಷಗಳ ಬಳಿಕ ಕೇಂದ್ರದ ಬಿಜೆಪಿ ಸರ್ಕಾರದ ಬಂಡವಾಳ ಬಯಲಾಗಿದೆ. ಎಲ್ಲಾ ರಂಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದರು.
ಸುಳ್ಳು ಭರವಸೆ ಮತ್ತು ಅಪಪ್ರಚಾರದ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಬಗ್ಗೆ ಜನ ನೀರಸನಗೊಂಡಿದ್ದಾರೆ. ನರೇಂದ್ರ ಮೋದಿ ಅವರು ಈ ದೇಶದ ಚೌಕೀದಾರ ಅಲ್ಲ. ಭ್ರಷ್ಟಾಚಾರದ ಭಾಗೀದಾರ. ಅವರ ಕುಮ್ಮಕ್ಕಿನಿಂದಲೇ ದೇಶದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸುಳ್ಳು ಭರವಸೆಗಳ ಮೂಲಕ ದೇಶದ ಜನರನ್ನು ಮೂರ್ಖರನ್ನಾಗಿ ಮಾಡಲು ಹೋದ ಮೋದಿ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ ರಾಹುಲ್ ಗಾಂಧಿಯವರು ಪ್ರಧಾನಿ ಆಗಲಿದ್ದಾರೆ. ಬಳಿಕ ಅವರು ರೈತರ ಸಾಲ ಮನ್ನಾ ಮಾಡಲಿದ್ದಾರೆ ಎಂದರು.
ಮನ್ ಕೀ ಬಾತ್ ನಿಂದ ಬಡವರ ಹೊಟ್ಟೆ ತುಂಬದು
ಪ್ರಧಾನಿಯವರ ಮನ್ ಕೀ ಬಾತ್ ನಿಂದ ಬಡವರ ಹೊಟ್ಟೆ ತುಂಬದು. ಅವರಿಗೆ ಬೇಕಿರುವುದು ಕಾಮ್ ಕೀ ಬಾತ್. ದಲಿತರ ಬಗ್ಗೆ ಮೋದಿಯವರಿಗೆ ಕಾಳಜಿ ಇದ್ದರೆ ಅವರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ SCP, TSP ಕಾಯಿದೆಯನ್ನು ದೇಶವ್ಯಾಪಿ ಜಾರಿಗೆ ತರಲಿ.
ಕೇವಲ ಮೂಗಿಗೆ ತುಪ್ಪ ಸವರುವುದರಿಂದ ದಲಿತರು, ರೈತರ ಉದ್ಧಾರ ಆಗಲು ಸಾಧ್ಯವಿಲ್ಲ. ಅವರ ಕಲ್ಯಾಣಕ್ಕೆ ಕಾರ್ಯಕ್ರಮ ಜಾರಿಗೆ ತರಬೇಕು ಎಂದ ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.
ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನ ಕೊಟ್ಟಿದ್ದು ಕಾಂಗ್ರೆಸ್
ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ತಂದುಕೊಟ್ಟದ್ದು ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ. ಬಿಜೆಪಿಯಿಂದ ಆ ಕೆಲಸ ಆಗಲಿಲ್ಲ. ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಕಳಕಳಿಗೆ ಬಲ ಬರಬೇಕಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರು ಪಕ್ಷಕ್ಕೆ ಆಶೀರ್ವಾದ ಮಾಡುವ ಮೂಲಕ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಬೇಕೆಂದು ಸಿದ್ದರಾಮಯ್ಯ ಮನವಿ ಮಾಡಿದರು.