ಬೆಂಗಳೂರು: ನಗರದಲ್ಲಿ ವ್ಯವಸ್ಥಿತವಾಗಿ ಜಾಹೀರಾತು ಪ್ರದರ್ಶನಕ್ಕೆಂದೇ ನೂತನ 'ಜಾಹೀರಾತು ಪಾಲಿಸಿ' ತರಲು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ಕಾರ್ಡ್ ರಸ್ತೆ ಮಂಜುನಾಥ ನಗರದಲ್ಲಿ ಸೋಮವಾರ ನೂತನ ಮೆಲ್ಸೇತುವೆ ಉದ್ಘಾಟಿಸಿ ಮಾತನಾಡಿದ ಪರಮೇಶ್ವರ್, ನ್ಯಾಯಾಲಯದ ನಿರ್ದೇಶನದ ಬಳಿಕ ಎಲ್ಲ ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಗಿದೆ. ಕೆಲ ಜಾಹೀರಾತುದಾರರು ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಅದಕ್ಕಾಗಿಯೇ ಮುಂದಿನ ದಿನಗಳಲ್ಲಿ ಜಾಹೀರಾತು ಪಾಲಿಸಿ ಮಾಡಲಾಗುವುದು ಎಂದು ಹೇಳಿದರು.
ಅವಧಿಯೊಳಗೆ ಕಾಮಗಾರಿ ಮುಗಿಯದ ಕಾರಣ ಹೆಚ್ಚುವರಿ ವೆಚ್ಚ:
ಬಿಬಿಎಂಪಿ ಟೆಂಡರ್ ಕರೆಯುವ ಸಂದರ್ಭದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವಧಿ ನಿಗದಿ ಮಾಡಿದರೂ ಅವಧಿಯೊಳಗೇ ಕಾಮಗಾರಿ ಮುಗಿಯುತ್ತಿಲ್ಲ. ಇದರಿಂದ ಹೆಚ್ಚುವರಿ ಹಣ ವೆಚ್ಚವಾಗುತ್ತಿದೆ. ಹೀಗಾಗಿ ಗುತ್ತಿಗೆದಾರರಿಗೆ ಸಮಯದ ಬಗ್ಗೆ ಎಚ್ಚರಿಕೆ ನೀಡಿ. ದಂಡ ಹಾಕುವ ಅವಕಾಶವೂ ಇದೆ. ಅದನ್ನು ಬಿಬಿಎಂಪಿ ಬಳಸಬಹುದು ಎಂದರು.
ಐದು ವರ್ಷದಲ್ಲಿ ಬಿಬಿಎಂಪಿಗೆ 15,000 ರೂ. ಅನುದಾನ:
ಕಳೆದ ಐದು ವರ್ಷದಲ್ಲಿ ಬಿಬಿಎಂಪಿಗೆ 15 ಸಾವಿರ ಕೋಟಿ ರೂ.ಅನುದಾನವನ್ನು ಸರಕಾರದಿಂದ ನೀಡಲಾಗಿದೆ. ಆದರೂ ಸಾಕಷ್ಟು ಮೇಲ್ಸೇತುವೆ, ಕೆಳಸೇತುವೆಗಳು ಆಗಬೇಕಿದೆ. ಬಿಬಿಎಂಪಿ ವೇಗವಾಗಿಯೇ ಸಾಕಷ್ಟು ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಕಸ ನಿರ್ವಹಣೆ, ಅನಧಿಕೃತ ಕೇಬಲ್ ಅಳವಡಿಕೆಯಲ್ಲೂ ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. 8 ಸಾವಿರ ಕಿ.ಮೀ. ಅನಧಿಕೃತ ಕೇಬಲ್ ತೆರವು ಗೊಳಿಸಿದ್ದೇವೆ ಎಂದು ಪರಮೇಶ್ವರ್ ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ಮೇಯರ್ ಸಂಪತ್ ರಾಜ್, ಶಾಸಕ ಸುರೇಶ್ ಕುಮಾರ್, ಆಯುಕ್ತ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.