ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಭಾನುವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಮರಾಠ ಸಮುದಾಯದ ಮುಖಂಡ ಹಾಗೂ ಶಿವಸಂಗ್ರಾಮ್ ಮುಖ್ಯಸ್ಥ ವಿನಾಯಕ್ ಮೇಟೆ ಸಾವನ್ನಪ್ಪಿದ್ದಾರೆ. ಅಪಘಾತದ ಹೊಡೆತಕ್ಕೆ ಅವರ ಕಾರು ನಜ್ಜುಗುಜ್ಜಾಗಿದೆ.
ಮಡಪ್ ಸುರಂಗದ ಬಳಿ ಮಾಜಿ ವಿಧಾನಪರಿಷತ್ ಸದಸ್ಯ (MLC) ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಎಲ್ಲರಿಗೂ ಗಾಯಗಳಾಗಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಬಿಜೆಪಿಯ ಮಿತ್ರ ಪಕ್ಷವಾದ ಶಿವಸಂಗ್ರಾಮ್ನ ಮುಖ್ಯಸ್ಥರನ್ನು ಅಪಘಾತದ ನಂತರ ನವಿ ಮುಂಬೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇದನ್ನೂ ಓದಿ: ಮನೆಯ ಮೇಲೆ ಪಾಕ್ ಧ್ವಜ ಹಾರಿಸಿದ ವ್ಯಕ್ತಿ ಬಂಧನ..!
ವಿನಾಯಕ್ ಮೇಟೆಯವರ ಭದ್ರತೆಗೆ ನಿಯೋಜಿಸಲಾಗಿದ್ದ ಪೊಲೀಸ್ ಪೇದೆ ರಾಮ್ ಡೋಬ್ಲೆ ಎಂಬುವರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವಿಸ್ ಅವರು ನವಿ ಮುಂಬೈನ ಎಂಜಿಎಂ ಆಸ್ಪತ್ರೆಗೆ ತಲುಪಿದ್ದಾರೆ. ಮಹಾರಾಷ್ಟ್ರದ ಮಾಜಿ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿರುವ ಮೇಟೆ ಅವರು ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
Maharashtra Shiv Sangram leader & former state minister Vinayak Mete injured in a car accident in Raigad early morning today passes away
CM Eknath Shinde and Deputy CM Devendra Fadnavis reach MGM Hospital in Panvel pic.twitter.com/jF3POCYrDD
— ANI (@ANI) August 14, 2022
ಮೇಟೆ ಅವರ ನಿಧನಕ್ಕೆ ರಾಜ್ಯದ ಹಲವಾರು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ. ‘ಇದು ತಮಗೆ ಆಘಾತ ತಂದಿದೆ ಎಂದು ರಾಜ್ಯ ಸಚಿವ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ. ‘ವಿನಾಯಕ್ ಮೇಟೆಯವರು ಮರಾಠ ಮೀಸಲಾತಿ ವಿಚಾರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರು. ಇದು ನಮಗೆ ಮತ್ತು ಮರಾಠ ಸಮುದಾಯಕ್ಕೆ ದೊಡ್ಡ ನಷ್ಟ’ವೆಂದು ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Big Breaking: ಉದ್ಯಮಿ, ‘ಬಿಗ್ ಬುಲ್’ ಖ್ಯಾತಿಯ ರಾಕೇಶ್ ಜುಂಜುನ್ವಾಲಾ ವಿಧಿವಶ
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಅಧ್ಯಕ್ಷ ಶರದ್ ಪವಾರ್ ಕೂಡ ಮೇಟೆ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ರಾಜಕೀಯ ವಿಷಯಗಳಿಗಿಂತ ಸಾಮಾಜಿಕ ವಿಷಯಗಳ ಮೇಲೆ ವಿನಾಯಕ್ ಮೇಟೆಯವರ ಗಮನ ಹೆಚ್ಚಿತ್ತು. ಅವರು ರಾಜಕೀಯ ನಾಯಕರಿಗಿಂತ ಸಾಮಾಜಿಕ ಕಾರ್ಯಕರ್ತರಾಗಿದ್ದರು. ಇದು ನಮಗೆ ದೊಡ್ಡ ಆಘಾತವಾಗಿದೆ. ಅವರು ಈ ಹಿಂದೆ ಎನ್ಸಿಪಿಯ ಭಾಗವಾಗಿದ್ದರು. ಅವರು ಮರಾಠರಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯ ಬೇಡಿಕೆಗಾಗಿ ಹೋರಾಟ ನಡೆಸುತ್ತಿದ್ದರು’ ಎಂದು ಹೇಳಿದ್ದಾರೆ.
‘ಮೇಟೆಯಂತಹ ನಾಯಕನನ್ನು ಕಳೆದುಕೊಂಡಿರುವುದು ದುರದೃಷ್ಟಕರ ಸಂಗತಿ. ನಾವು ವಿವಿಧ ರಾಜಕೀಯ ಪಕ್ಷಗಳಲ್ಲಿದ್ದರೂ, ರಾಜ್ಯದಲ್ಲಿ ಮರಾಠ ಮೀಸಲಾತಿ ವಿಷಯದಲ್ಲಿ ಮೇಟೆ ಮತ್ತು ನಾನು ಬಹುತೇಕ ಒಂದೇ ರೀತಿಯ ಹೋರಾಟ ಮಾಡುತ್ತಿದ್ದೇವೆ’ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಚವ್ಹಾಣ್ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.