ನಾನು ಯಾವ ತಪ್ಪೂ ಮಾಡಿಲ್ಲ, ಗಲ್ಲಿಗೇರಿಸಿದರೂ ಹೆದರುವುದಿಲ್ಲ: ಡಿ.ಕೆ.ಶಿವಕುಮಾರ್

ಬಿಜೆಪಿಯ ಇಡೀ ಜಾತಕ ನನ್ನ ಬಳಿಯಿದೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಡಿಕೆಶಿ ಬಾಂಬ್ ಸಿಡಿಸಿದರು.  

Last Updated : Sep 19, 2018, 08:57 PM IST
ನಾನು ಯಾವ ತಪ್ಪೂ ಮಾಡಿಲ್ಲ, ಗಲ್ಲಿಗೇರಿಸಿದರೂ ಹೆದರುವುದಿಲ್ಲ: ಡಿ.ಕೆ.ಶಿವಕುಮಾರ್ title=

ಬೆಂಗಳೂರು: ನನ್ನ ಮೇಲಿನ ಎಲ್ಲಾ ಆರೋಪಗಳೂ ಆಧಾರ ರಹಿತ ಮತ್ತು ರಾಜಕೀಯ ಪ್ರೇರಿತ. ಯಾವುದಕ್ಕೂ ನಾನು ಹೆದರಿ ಓಡಿ ಹೋಗುವುದಿಲ್ಲ. ಎಲ್ಲಾ ದಾಖಲೆಗಳೂ ನನ್ನ ಬಳಿಯಿವೆ. ನಾನು ಯಾವ ತಪ್ಪನ್ನೂ ಮಾಡಿಲ್ಲ, ಏನೇ ಬಂದರೂ ಧೈರ್ಯವಾಗಿ ಎದುರಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಮೇಲೆ ಹಲವು ಆರೋಪಗಳನ್ನು ಮಾಡಿದ ಬೆನ್ನಲ್ಲೇ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವ ಡಿ.ಕೆ.ಶಿವಕುಮಾರ್ ಅವರು, ಹಲವರು ಜಾರಿ ನಿರ್ದೇಶನಾಲಯ ನನ್ನನ್ನು ಬಂಧಿಸಲಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ದೇಶದ ಕಾನೂನು ತಿಳಿದಿದೆ. ಅಷ್ಟಕ್ಕೂ ನಾನು ಹೇಡಿಯಲ್ಲ, ನಾನು ಯಾವ ತಪ್ಪನ್ನೂ ಮಾಡಿಲ್ಲ, ಎಲ್ಲವನ್ನೂ ಎದುರಿಸಲು ಸಿದ್ಧ ಎಂದು ಹೇಳಿದರು.

ನಾನು ಯಾವುದೇ ಡೈರಿ ಬರೆದಿಲ್ಲ
ಮುಂದುವರೆದು ಮಾತನಾಡಿದ ಅವರು, ತಾವು ಯಾವುದೇ ಡೈರಿಯನ್ನೂ ಬರೆದಿಲ್ಲ, ಆರ್​ಜಿ (ರಾಹುಲ್​ ಗಾಂಧಿ), ಎಸ್​ಜಿ (ಸೋನಿಯಾ ಗಾಂಧಿ) ಎಂದು ಸಂಬಿತ್​ ಪಾತ್ರ ಹೇಳುತ್ತಿರುವುದೆಲ್ಲ ಸತ್ಯಕ್ಕೆ ದೂರವಾದದ್ದು. ಅಷ್ಟು ಕೋಟಿ ಸಿಕ್ಕಿದೆ, ಇಷ್ಟು ಕೋಟಿ ಸಿಕ್ಕಿದೆ ಎಂದು ಬಿಜೆಪಿ ನಾಯಕರು ಕಥೆ ಹೊಡೆಯುತ್ತಿದ್ದಾರೆ. ಅಲ್ಲಿ ಸಿಕ್ಕ ಹಣದಲ್ಲಿ ಕೇವಲ 41 ಲಕ್ಷ ರೂ. ಗಳು ಮಾತ್ರ ನನಗೆ ಸೇರಿದವು. ಮಿಕ್ಕಿದವು ನನ್ನ ಕೆಲ ಸ್ನೇಹಿತರದ್ದು. ಅದನ್ನು ಅವರೇ ದಾಖಲೆ ಸಮೇತ ಆದಾಯ ತೆರಿಗೆ ಅಧಿಕಾರಿಗಳಿಗೆ ನೀಡಿದ್ದಾರೆ. ಇನ್ನು, 41ಲಕ್ಷ ರೂ.ಗಳ ಬಗೆಗಿನ ದಾಖಲೆಗಳು ನನ್ನ ಬಳಿ ಇವೆ. ನಾನು ಯಾರನ್ನೂ ಕೊಲೆ ಮಾಡಿಲ್ಲ, ಯಾವುದೇ ಅಪರಾಧ ಮಾಡಿಲ್ಲ, ಹವಾಲ ದಂಧೆಯಲ್ಲಿ ಭಾಗಿಯಾಗಿಲ್ಲ. ನಾನು ಯಾವುದಕ್ಕೂ ಬಗ್ಗುವುದಿಲ್ಲ, ಎಲ್ಲಿಯೂ ಓಡಿ ಹೋಗುವ ಹೇಡಿಯಲ್ಲ. ಸೂಕ್ತ ಸಮಯದಲ್ಲಿ ದೇಶದ ಜನತೆಗೆ ಎಲ್ಲ ವಿಷಯವನ್ನು ಬಹಿರಂಗಪಡಿಸುವುದಾಗಿ ಹೇಳಿದರು. 

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಹೆಸರು ಕೆಡಿಸಲು ಬಿಜೆಪಿ ಪ್ರಯತ್ನ
ಗುಜರಾತ್ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ ರಕ್ಷಣೆ ನೀಡಿದ ಬಳಿಕ ಬೇಕಂತಲೇ ಬಿಜೆಪಿಯವರು ನನ್ನ ಮನೆ ಸೇರಿದಂತೆ 82 ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳಿಂದ ದಾಳಿ ನಡೆಸಿದರು. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಎರಡೂ ಸ್ವಾಯತ್ತ ಸಂಸ್ಥೆಗಳು. ಆದರೆ ಇದನ್ನು ಬಿಜೆಪಿ ದುರುಪಯೋಗ ಪಡಿಸಿಕೊಂಡು ನನ್ನ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ರಾಷ್ಟ್ರಮಟ್ಟದಲ್ಲಿ ಹಾಳುಮಾಡಲು ಹೊರಟಿದೆ. ಕಾಂಗ್ರೆಸ್ ಬಗ್ಗೆ ಸಂಬಿತ್ ಪಾತ್ರ ಮಾಡಿರುವ ಆರೋಪಗಳಿಗೆ ನಾನೊಬ್ಬ ಉತ್ತರ ಕೊಟ್ಟರೆ ಸಾಕು, ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸುವ ಅಗತ್ಯ ಇಲ್ಲ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಾಡುತ್ತಿರುವ ಸಂವಿಧಾನ ವಿರೋಧಿ ಕೆಲಸಗಳಿಗೆ ಮತದಾರರು ತಕ್ಕ ಉತ್ತರ ಕೊಡಲಿದ್ದಾರೆ ಎಂದರು.

ರಾಜೀನಾಮೆ ನೀಡುವ ಮಾತೇ ಇಲ್ಲ
ನಾನು ಯಾರಿಗೂ ಮೋಸ ಮಾಡಿಲ್ಲ. ಕಳ್ಳತನ ಮಾಡಿಲ್ಲ. ಸಿಕ್ಕ ಅಷ್ಟೂ ಹಣಕ್ಕೆ ದಾಖಲೆ ತೋರಿಸಿದ್ದೇನೆ. ಹೀಗಿದ್ದಾಗ ನಾನು ಹೆದರುವ ಅವಶ್ಯಕತೆಯಿಲ್ಲ. ಆದರೆ ಜನರಿಗೆ ಬಿಜೆಪಿಯ ಪಿತೂರಿಗಳು ಅರ್ಥವಾಗುತ್ತದೆ. ನಾನೂ ಕೂಡ ದೆಹಲಿಯಲ್ಲೇ ಪತ್ರಿಕಾಗೋಷ್ಠಿ ಮಾಡಿ ಅವರಿಗೆ ಉತ್ತರ ಕೊಡುತ್ತೇನೆ. ಈ ದೇಶದ ಪ್ರಜೆಯಾಗಿ ನನಗೂ ದೇಶದ ಕಾನೂನು ಗೊತ್ತು. ತಪ್ಪು ಮಾಡಿದ್ದರೆ ಜೈಲಿಗೆ ಹೋಗಲು ಗಲ್ಲಿಗೇರಲು ಸಿದ್ಧ ಎಂದು ಸವಾಲು ಎಸೆದರು. ಬಿಜೆಪಿಯವರ ಪಿತೂರಿ ಬಗ್ಗೆ ಸಿಎಂ ಅವರಿಗೂ ಗೊತ್ತು, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತು. ಬಿಜೆಪಿಯ ಇಡೀ ಜಾತಕ ನನ್ನ ಬಳಿಯಿದೆ. ಸಂದರ್ಭ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಡಿಕೆಶಿ ಬಾಂಬ್ ಸಿಡಿಸಿದರು.

ಸೆಪ್ಟೆಂಬರ್ 18ರಂದು ಜಾರಿ ನಿರ್ದೇಶನಾಲಯವು ಸಚಿವ ಡಿ.ಕೆ.ಶಿವಕುಮಾರ್ ಅವರ ದೆಹಲಿ ಫ್ಲ್ಯಾಟ್​'ಗಳಲ್ಲಿ ಕೋಟ್ಯಂತರ ರೂ. ನಗದು ಪತ್ತೆಯಾದ ಹಿನ್ನೆಲೆಯಲ್ಲಿ ಹವಾಲ ಹಣ ಸಾಗಣೆ, ತೆರಿಗೆ ವಂಚನೆ ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಿತ್ತು. ಈ ಪ್ರಕರಣದಲ್ಲಿ ಡಿಕೆಶಿಯವರನ್ನು ಬಂಧಿಸುವ ಸಾಧ್ಯತೆಗಳೂ ಇವೆ ಎನ್ನಲಾಗಿತ್ತು. ಈ ಎಲ್ಲಾ ಕಾನೂನು ಬೆಳವಣಿಗೆಗಳ ಬೆನ್ನಲ್ಲೇ ಆರೋಗ್ಯದಲ್ಲಿ ಏರುಪೇರಾದ್ದರಿಂದ ಡಿ.ಕೆ.ಶಿವಕುಮಾರ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

Trending News