ರಾಜ್ಯದ 22 ಸರಕಾರಿ ಡಿಗ್ರಿ ಕಾಲೇಜುಗಳ ಅಭಿವೃದ್ಧಿಗೆ ಉದ್ಯಮಿಪತಿಗಳ ಒಲವು

ರಾಜ್ಯದ ಆಯ್ದ 22 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ತಮ್ಮ ಸಿಎಸ್ಆರ್ ದೇಣಿಗೆ ಮೂಲಕ ಅಭಿವೃದ್ಧಿ ಪಡಿಸಲು ವಿವಿಧ ಉದ್ಯಮಿಗಳು ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಿಎಸ್ಆರ್ ಸಮಾವೇಶದಲ್ಲಿ ಘೋಷಿಸಿದರು.

Written by - Prashobh Devanahalli | Edited by - Manjunath N | Last Updated : Sep 16, 2022, 10:54 PM IST
  • ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಯುವ ಅನ್‌ಸ್ಟಾಪಬಲ್, ಯುನೈಟೆಡ್‌ ವೇಸ್‌ ಮತ್ತು ಸತ್ತ್ವ ಕಂಪನಿಗಳು ಸಂಯುಕ್ತವಾಗಿ ಸಮಾವೇಶವನ್ನು ಏರ್ಪಡಿಸಿದ್ದವು.
ರಾಜ್ಯದ 22 ಸರಕಾರಿ ಡಿಗ್ರಿ ಕಾಲೇಜುಗಳ ಅಭಿವೃದ್ಧಿಗೆ ಉದ್ಯಮಿಪತಿಗಳ ಒಲವು  title=

ಬೆಂಗಳೂರು: ರಾಜ್ಯದ ಆಯ್ದ 22 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ತಮ್ಮ ಸಿಎಸ್ಆರ್ ದೇಣಿಗೆ ಮೂಲಕ ಅಭಿವೃದ್ಧಿ ಪಡಿಸಲು ವಿವಿಧ ಉದ್ಯಮಿಗಳು ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಿಎಸ್ಆರ್ ಸಮಾವೇಶದಲ್ಲಿ ಘೋಷಿಸಿದರು.

ಇದಲ್ಲದೆ, ಮುಂಬರುವ ದಿನಗಳಲ್ಲಿ ರಾಜ್ಯದ ಉಳಿದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೂ ನೆರವು ನೀಡಲಾಗುವುದು. ಜತೆಗೆ ಶೌಚಾಲಯ, ಪ್ರಯೋಗಾಲಯ, ಗ್ರಂಥಾಲಯ ಮತ್ತು ಇತರ ಸಾಧನ ಸಲಕರಣೆಗಳ ವ್ಯವಸ್ಥೆಗೆ ಸಹಕರಿಸಲಾಗುವುದು ಎಂದು ಉದ್ಯಮಿಗಳು ಭರವಸೆ ನೀಡಿದರು.

ಉನ್ನತ ಶಿಕ್ಷಣ ಇಲಾಖೆಯ ಜತೆಗೆ ಯುವ ಅನ್‌ಸ್ಟಾಪಬಲ್, ಯುನೈಟೆಡ್‌ ವೇಸ್‌ ಮತ್ತು ಸತ್ತ್ವ ಕಂಪನಿಗಳು ಸಂಯುಕ್ತವಾಗಿ ಸಮಾವೇಶವನ್ನು ಏರ್ಪಡಿಸಿದ್ದವು. ಇದು ಇತ್ತೀಚಿನ ದಿನಗಳಲ್ಲಿ ನಡೆದ ಇಂತಹ ಮೊದಲ ಸಮಾವೇಶವಾಗಿದೆ. ಇದರಲ್ಲಿ ಸರಕಾರಿ ಡಿಗ್ರಿ ಕಾಲೇಜುಗಳ ಬಗ್ಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 'ಉದ್ಯಮಿಗಳು ದೇಣಿಗೆ ನೀಡಿ ತೃಪ್ತರಾಗಬಾರದು. ಸರಕಾರಿ ಕಾಲೇಜುಗಳಿಗೆ ಭೇಟಿ ನೀಡಿ ತಮ್ಮ ಅನುಭವ ಮತ್ತು ಅರಿವನ್ನು ಹಂಚಿಕೊಳ್ಳಬೇಕು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಂದ ಬರುವ ಮಕ್ಕಳ ಆತ್ಮವಿಶ್ವಾಸ ಹೆಚ್ಚುತ್ತದೆ. ಸುಂದರ ಸಮಾಜವನ್ನು ಸೃಷ್ಟಿಸುವ ಕೆಲಸಕ್ಕೆ ಎಲ್ಲರೂ ಹೆಗಲು ಕೊಡಬೇಕು" ಎಂದರು.

ಇದನ್ನೂ ಓದಿ: "ಮತಾಂತರ ನಿಷೇಧ ವಿಧೇಯಕ ಧಾರ್ಮಿಕ ಸ್ವಾತ್ತಂತ್ರ್ಯದ ಹಕ್ಕುಗಳನ್ನು ಕಸಿಯುವ ವಿಧೇಯಕವಾಗಿದೆ"

ಮುಖ್ಯಮಂತ್ರಿಯವರ ಮನವಿಗೆ ಸ್ಪಂದಿಸಿದ ಉದ್ಯಮಿಗಳು, ಸರಕಾರವು ತೆಗೆದುಕೊಂಡಿರುವ ಈ ಉಪಕ್ರಮವು ಅನುಕರಣ ಯೋಗ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಸ್ಪಂದಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಶಿಕ್ಷಣ ರಂಗದಲ್ಲಿ ಸರಕಾರವು ಸಾಮಾಜಿಕ ನ್ಯಾಯವನ್ನು ಪಾಲಿಸಬೇಕಾಗುತ್ತದೆ. ಆಗ ಮಾತ್ರ ಸಮಾನತೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬ ಹುದು. ಆದ್ದರಿಂದ ಉದ್ಯಮಿಗಳು ಸಮಾಜದ ಬಗ್ಗೆ ಕಳಕಳಿ ಇಟ್ಟುಕೊಂಡು, ದುರ್ಬಲರ ಏಳಿಗೆಗೆ ಮುಂದಾಗಬೇಕು. ಜತೆಗೆ ಸರಕಾರಿ ಕಾಲೇಜುಗಳು ಕೂಡ ನಮಗೆ ಸೇರಿದ್ದು ಎನ್ನುವ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು. 

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ಸ್ವಾತಂತ್ರದ ಅಮೃತ ಮಹೋತ್ಸವದ ಈ ಘಟ್ಟದಲ್ಲಿ ಒಂದೊಂದು ಕಂಪನಿಯೂ ಕನಿಷ್ಠಪಕ್ಷ ಒಂದು ಸರಕಾರಿ ಕಾಲೇಜಿನ ಅಭಿವೃದ್ಧಿಗೆ ಮುಂದಾದರೂ ಅದು ಶೈಕ್ಷಣಿಕ ಮನ್ವಂತರವನ್ನೇ ಸೃಷ್ಟಿಸುತ್ತದೆ. ರಾಜ್ಯವು ಶಿಕ್ಷಣದ ಖಾಸಗೀಕರಣಕ್ಕೆ ಎಲ್ಲರಿಗಿಂತಲೂ ಮೊದಲು ತೆರೆದುಕೊಂಡ ಹೆಗ್ಗಳಿಕೆ ಹೊಂದಿದೆ ಎಂದರು.

ರಾಜ್ಯದಲ್ಲಿ ಎನ್‌ಇಪಿಗೆ ತಕ್ಕಂತೆ ಶೈಕ್ಷಣಿಕ ಸುಧಾರಣೆ ಮತ್ತು ಪರಿಷ್ಕರಣೆ ನಡೆಯುತ್ತಿದೆ. ಇದರಲ್ಲಿ ಉದ್ಯಮಗಳನ್ನೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಈಗ ಇಂಟರ್‍ನ್‌ಶಿಪ್‌ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಲಾಗಿದೆ. ಜತೆಗೆ ಉದ್ಯಮಗಳೊಂದಿಗೆ ಸಂಶೋಧನಾ ಸಹಭಾಗಿತ್ವಕ್ಕೆ ಉತ್ತೇಜನ ನೀಡಲಾಗುತ್ತಿದೆ ಕೊಡುಕೊಳ್ಳುವಿಕೆಯಿಂದ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧಿಸಬಹುದು ಎಂದು ಅವರು ಹೇಳಿದರು.

ಸಮಾವೇಶದಲ್ಲಿ ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಮತ್ತು ಆಕ್ಸೆಲ್ ಪಾರ್ಟ್‌ನರ್‍ಸ್‌ನ ಪ್ರಶಾಂತ್ ಪ್ರಕಾಶ್, ಖ್ಯಾತ ಐಟಿ ಉದ್ಯಮಿ ಮತ್ತು ಸರಕಾರದ ಐಟಿ ವಿಷನ್‌ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣ, ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್, ಹಿರಿಯ ಕ್ರಿಕೆಟಿಗ ಅನಿಲ್ ಕುಂಬ್ಳೆ, ಖಾಸಗಿ ವಿ.ವಿ.ಗಳ ಕುಲಪತಿಗಳು ಇದ್ದರು.

ಇದನ್ನೂ ಓದಿ: ನನಗೆ ED ನೋಟಿಸ್ ನೀಡಿದ್ದಕ್ಕೆ ನಮ್ಮ ಕಾರ್ಯಕರ್ತರು ವಿಚಲಿತರಾಗಿದ್ದಾರೆ : ಡಿಕೆಶಿ

ಸಮಾವೇಶದಲ್ಲಿ ಹಲವು ಉದ್ಯಮಿಗಳು

ಸಿಎಸ್ಆರ್ ಸಮಾವೇಶದಲ್ಲಿ  ಖ್ಯಾತ ವೈದ್ಯ ಮತ್ತು ನಾರಾಯಣ ಹೆಲ್ತ್‌ನ ಡಾ.ದೇವಿ ಶೆಟ್ಟಿ, ಸತ್ತ್ವ ಸಮೂಹದ ಸಂಸ್ಥಾಪಕ ಕೃಷ್ಣ, ಎಂಪಿಎಲ್‌ನ ಸಾಯಿ ಶ್ರೀನಿವಾಸ್, ಎಕ್ಸೈಡ್‌ ಕಂಪನಿಯ ಸಿ.ಸುಬೀರ್‍‌, ಎಚ್‌ಡಿಎಫ್‌ಸಿಯ ಧೀರಜ್‌ ರೆಲ್ಲಿ, ಸೆಂಚುರಿ ಗ್ರೂಪ್‌ನ ರವಿ ಪೈ, ಅನ್ಅಕಾಡೆಮಿಯ ಗೌರವ್ ಮುಂಜಾಲ್, ಸತ್ತ್ವ ಸಮೂಹದ ಕೃಷ್ಣಮೂರ್ತಿ, ಗಿವ್‌ ಇಂಡಿಯಾದ ಅತುಲ್‌ ಸತೀಜಾ, ಜಿಎಸ್‌ ಗ್ಲೋಬಲ್‌ನ ಅರ್ಜುನ್‌ ಸಂತಾನಕೃಷ್ಣ, ಮರ್ಸಿಡಿಸ್‌ನ ಮನು ಸಾಲೆ, ಜೆರೋಡಾದ ನಿಖಿಲ್ ಕಾಮತ್, ಯುವಅನ್‌ಸ್ಟಾಪಬಲ್‌ನ ಅಮಿತಾಭ್‌ ಷಾ, ಮೆರ್ಕ್ ಕಂಪನಿಯ ಶ್ರೀನಾಥ್‌ ನಾರಾಯಣಯ್ಯ, ಬಗಾರಿಯಾ ಗ್ರೂಪ್ಸ್‌ನ  ಕರಣ್‌ ಬಗಾರಿಯಾ, ಆರ್‍‌.ವಿ.ಶಿಕ್ಷಣ ಸಂಸ್ಥೆಗಳ ಶಾಮ್‌ ಶೆಟ್ಟಿ ಉಪಸ್ಥಿತರಿದ್ದರು.

ಇವರಲ್ಲದೆ, ಉದ್ಯಮಿಗಳಾದ ಶ್ವೇತಾ ಪಾಂಡೆ, ಶ್ವೇತಾ ಖುರಾನಾ, ಸೋಹಿನಿ ಕರ್ಮಾಕರ್, ಇರ್ಫಾನ್‌ ರಜಾಕ್‌, ಕ್ಷಿತಿಜಾ ಕೃಷ್ಣಸ್ವಾಮಿ, ಅನುರಾಗ್‌ ಪ್ರತಾಪ್‌, ಅರ್ಚನಾ ಸಹಾಯ್‌, ಧೀರಜ್‌ ರಾಜಾರಾಂ, ಲವನೀಶ್‌ ಚಹಾನಾ, ಸುಜಿತ್‌ಕುಮಾರ್ ಮುಂತಾದವರು ಕೂಡ ಇದ್ದರು.

ಆಯ್ದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಯ್ದ ಉದ್ಯಮಿಗಳ ಜತೆಗಿನ ಸಿಎಸ್‌ಆರ್‍‌ ಸಮಾವೇಶವು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಶುಕ್ರವಾರ ನಡೆಯಿತು. ಈ ಸಂದರ್ಭದಲ್ಲಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರೂ ಇದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News