IPL 2021: ಎಂ.ಎಸ್.ಧೋನಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

ಮುಂದಿನ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್.ಧೋನಿ ಆಡದಿದ್ದರೆ, ನಾನೂ ಕೂಡ ಆಡುವುದಿಲ್ಲವೆಂದು ರೈನಾ ಹೇಳಿದ್ದಾರೆ.

Written by - Puttaraj K Alur | Last Updated : Jul 10, 2021, 10:39 AM IST
  • ಐಪಿಎಲ್ ಪ್ರಾರಂಭದಿಂದಲೂ ಚೆನ್ನೈ ತಂಡದ ಭಾಗವಾಗಿರುವ ಸುರೇಶ್ ರೈನಾ, ಎಂ.ಎಸ್.ಧೋನಿ
  • ಮುಂದಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ಆಡದಿದ್ದರೆ ನಾನೂ ಆಡುವುದಿಲ್ಲವೆಂದಿರುವ ರೈನಾ
  • 2021ರ ಐಪಿಎಲ್ ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿರುವ CSK ಗೆಲ್ಲುವ ಫೆವರಿಟ್ ಆಗಿದೆ
IPL 2021: ಎಂ.ಎಸ್.ಧೋನಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ title=
ಚೆನ್ನೈ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿದೆ

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿಯವರ ಬಗ್ಗೆ  ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಮಹತ್ವದ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ನಾವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವು ಸಾಧಿಸಿದರೆ ಇನ್ನೊಂದು ವರ್ಷ ಐಪಿಎಲ್ ಆಡುವಂತೆ ಧೋನಿಯವರ ಮನವೊಲಿಸುತ್ತೇನೆಂದು ಹೇಳಿದ್ದಾರೆ.

ಕೊರೊನಾ ಕಾರಣದಿಂದ ಅರ್ಧಕ್ಕೆ ನಿಂತಿರುವ 2021ರ ಐಪಿಎಲ್ (IPL 2021)ಟೂರ್ನಿ ಯುಎಇಯಲ್ಲಿ ಇದೇ ಸೆಪ್ಟೆಂಬರ್ ನಿಂದ ಪುನಃ ಆರಂಭವಾಗಲಿದೆ. 2020ರ ಐಪಿಎಲ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್(Chennai Super Kings), 2021ರ ಋತುವಿನಲ್ಲಿ ಕಮ್ ಬ್ಯಾಕ್ ಮಾಡಿದೆ. ಕೊರೊನಾ 2ನೇ ಅಲೆಯ ಪರಿಣಾಮ ಸ್ಥಗತಗೊಂಡಿರುವ ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ತಾನಾಡಿರುವ 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಸೆಪ್ಟೆಂಬರ್ 3ನೇ ವಾರದಲ್ಲಿ ಮತ್ತೆ ಯುಎಇಯಲ್ಲಿ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಬಲಿಷ್ಠವಾಗಿರುವ ಚೆನ್ನೈ ತಂಡ ಈ ಬಾರಿಯೂ ಚಾಂಪಿಯನ್ ಆಗುವ ಫೆವರಿಟ್ ತಂಡವೆನಿಸಿದೆ.  

ಇದನ್ನೂ ಓದಿ: India vs SL 2021: ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಕೊರೊನಾ ಕರಿನೆರಳು...!

ಕೆಲ ವೈಯಕ್ತಿಕ ಕಾರಣಗಳಿಂದ 2020ರ ಐಪಿಎಲ್ ಟೂರ್ನಿಗೆ ಸುರೇಶ್ ರೈನಾ(Suresh Raina) ಗೈರಾಗಿದ್ದರು. ಮತ್ತೆ ಭರ್ಜರಿ ಕಮ್ ಬ್ಯಾಕ್ ಮಾಡಿರುವ ರೈನಾ ಪ್ರಸಕ್ತ ಟೂರ್ನಿಯಲ್ಲಿ 123 ರನ್ ಗಳಿಸಿದ್ದು, ಚೆನ್ನೈಗೆ ಆನೆಬಲ ಬಂದಂತಾಗಿದೆ. ಚೆನ್ನೈನಲ್ಲಿ ಧೋನಿ ಇದ್ದರೆ ಮಾತ್ರ ತಾನು ಆಡುವುದಾಗಿ ರೈನಾ ಯಾವಾಗಲೂ ಹೇಳುತ್ತಿರುತ್ತಾರೆ. ಮುಂದಿನ ಐಪಿಎಲ್ ಟೂರ್ನಿಯಲ್ಲಿ ಧೋನಿ ಆಡದಿದ್ದರೆ, ನಾನೂ ಕೂಡ ಆಡುವುದಿಲ್ಲ. 2008ರಿಂದ ನಾವು ಚೆನ್ನೈ ತಂಡದಲ್ಲಿ ಒಟ್ಟಿಗೆ ಆಡುತ್ತಿದ್ದೇವೆ. ಪ್ರಸಕ್ತ ಟೂರ್ನಿಯಲ್ಲಿ ನಾವು ಗೆಲುವು ಸಾಧಿಸಿದರೆ ಮುಂದಿನ ವರ್ಷವೂ ಐಪಿಎಲ್ ಆಡುವಂತೆ ನಾನು ಧೋನಿಯವರಿಗೆ ಮನವೊಲಿಸುತ್ತೇನೆಂದು ರೈನಾ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂ.ಎಸ್.ಧೋನಿ(MS Dhoni) ಅವರು ಆಗಸ್ಟ್ 15ರಂದು ನಿವೃತ್ತಿ ಘೋಷಿಸಿದ್ದರು. ಇದಾದ ಕೇವಲ 1 ಗಂಟೆಯಲ್ಲೇ ಸುರೇಶ್ ರೈನಾ ಕೂಡ ನಿವೃತ್ತಿ ಘೋಷಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.

ಇದನ್ನೂ ಓದಿ: "ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"

ಐಪಿಎಲ್ ಟೂರ್ನಿಯಿಂದ ಚೆನ್ನೈ ತಂಡ ಬ್ಯಾನ್ ಆಗಿದ್ದ ಸಮಯದಲ್ಲಿ ರೈನಾ 2016 ಮತ್ತು 2017ರಲ್ಲಿ ಗುಜರಾತ್ ಲಯನ್ಸ್ ಪರ ಆಡಿದ್ದರು. ಮತ್ತೆ ಅವರು 2018ರಲ್ಲಿ ಧೋನಿ ನಾಯಕತ್ವದ ಚೆನ್ನೈ ತಂಡಕ್ಕೆ ಸೇರಿಕೊಂಡು 3ನೇ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದ್ದರು.  

ನನಗೆ ಇನ್ನೂ ಐಪಿಎಲ್ ಆಡಲು ಕೇವಲ ನಾಲ್ಕೈದು ವರ್ಷಗಳಿವೆ. ಈ ವರ್ಷದ ಐಪಿಎಲ್ ಸರಣಿ(IPL 2021) ಇನ್ನೂ ಬಾಕಿ ಇದೆ. ಮುಂದಿನ ವರ್ಷ ಎರಡು ಹೊಸ ತಂಡಗಳು ಸೇರಿಕೊಳ್ಳಲಿವೆ. ಆದರೆ ನಾನು ಎಲ್ಲಿವರೆಗೆ ಆಡುತ್ತೇನೋ ಅಲ್ಲಿವರೆಗೂ ಚೆನ್ನೈ ತಂಡದ ಪರವಾಗಿಯೇ ಆಡುತ್ತೇನೆ. ಈ ವರ್ಷ ನಮ್ಮ ತಂಡದ ಪ್ರದರ್ಶನ ಚೆನ್ನಾಗಿದೆ. ಧೋನಿ ತಂಡದಲ್ಲಿದ್ದರೆ ನಮಗೆ ಹೊಸ ಹುರುಪು ಇರುತ್ತದೆ. ಹೀಗಾಗಿ ಮುಂದಿನ ವರ್ಷವೂ ಐಪಿಎಲ್ ಟೂರ್ನಿಯಲ್ಲಿ ಆಡುವಂತೆ ಧೋನಿಯವರ ಬಳಿ ಕೇಳಿಕೊಳ್ಳುತ್ತೇನೆ ಎಂದು ರೈನಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News