PBKS vs CSK, IPL 2022: ಶಿಖರ್ ‘ದಾಖಲೆ’ ಬ್ಯಾಟಿಂಗ್, ಚೆನ್ನೈಗೆ ವಿರೋಚಿತ ಸೋಲು

ಐಪಿಎಲ್ ಟೂರ್ನಿಯ 38ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿತು.

Written by - Zee Kannada News Desk | Last Updated : Apr 25, 2022, 11:56 PM IST
  • ವ್ಯರ್ಥವಾದ ಅಂಬಾಟಿ ರಾಯಡು ಸ್ಫೋಟಕ ಬ್ಯಾಟಿಂಗ್
  • ಚೆನ್ನೈ ವಿರುದ್ಧ ಪಂಜಾಬ್‍ ಕಿಂಗ್ಸ್ಗೆ ರೋಚಕ ಗೆಲುವು
  • ಐಪಿಎಲ್‍ನಲ್ಲಿ 6 ಸಾವಿರ ರನ್ ಪೂರೈಸಿದ ಶಿಖರ್ ಧವನ್
PBKS vs CSK, IPL 2022: ಶಿಖರ್ ‘ದಾಖಲೆ’ ಬ್ಯಾಟಿಂಗ್, ಚೆನ್ನೈಗೆ ವಿರೋಚಿತ ಸೋಲು title=
ಚೆನ್ನೈ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 38ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿತು. ಟಾಸ್ ಗೆದ್ದ ಚೆನ್ನೈ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 187 ರನ್ ಗಳ ಸವಾಲಿನ ಮೊತ್ತ ಗಳಿಸಿತು.

ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಕೊನೆ ಓವರ್ ವರೆಗೂ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡ ಚೆನ್ನೈ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ 11 ರನ್ ಗಳಿಂದ ಮತ್ತೊಂದು ಗೆಲುವು ದಾಖಲಿಸಿ ಸಂಭ್ರಮಿಸಿತು.

ಬೃಹತ್ ಮೊತ್ತ ಕಲೆ ಹಾಕಿದ ಪಂಜಾಬ್

ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್(ಅಜೇಯ 88) ಚೆನ್ನೈ ಬೌಲರ್‍ಗಳನ್ನು ಕಾಡಿದರು. ಧವನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಮತ್ತು ಬೌಂಡರಿಗಳನ್ನು ಅಟ್ಟುವ ಮೂಲಕ ಧವನ್ ಮನರಂಜಿಸಿದರು. 59 ಎಸೆತಗಳಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳನ್ನು ಚಚ್ಚಿದ ಧವನ್ ಔಟಾಗದೆ ಉಳಿದರು. ಇನ್ನುಳಿದಂತೆ ಭಾನುಕಾ ರಾಜಪಕ್ಸೆ(42), ಲಿಯಾಮ್ ಲಿವಿಂಗ್ಸ್ಟೋನ್(19) ಮತ್ತು ನಾಯಕ ಮಯಾಂಕ್ ಅಗರ್ವಾಲ್(18) ರನ್ ಗಳಿಸಿದರು. CSK ಪರ ಡ್ವೇನ್ ಬ್ರಾವೋ 2 ವಿಕೆಟ್ ಹಾಗೂ ಮಹೇಶ್ ತೀಕ್ಷಣ 1 ವಿಕೆಟ್ ಕಬಳಿಸಿದರು.  

ಅಂಬಾಟಿ ರಾಯಡು ಬ್ಯಾಟಿಂಗ್ ವ್ಯರ್ಥ!

ಗೆಲುವಿನ ಗುರಿ ಬೆನ್ನತ್ತಿದ ಚೆನ್ನೈ ಪರ ಅಂಬಾಟಿ ರಾಯಡು ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. 39 ಎಸೆಗಳಲ್ಲಿ 6 ಸಿಕ್ಸ್ ಮತ್ತು 7 ಬೌಂಡರಿ ಬಾರಿಸಿದ ರಾಯಡು 78 ರನ್ ಗಳಿಸಿದರು. ಇನ್ನುಳಿದಂತೆ ಋತುರಾಜ್ ಗಾಯಕ್ವಾಡ್(30), ನಾಯಕ ರವೀಂದ್ರ ಜಡೇಜಾ(ಅಜೇಯ 21) ಮತ್ತು ಎಂ.ಎಸ್.ಧೋನಿ(12) ರನ್ ಗಳಿಸಿದರು. ಪಂಜಾಬ್ ಪರ ಕಗಿಸೊ ರಬಾಡ ಮತ್ತು ರಿಷಿ ಧವನ್ ತಲಾ 2 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ ಮತ್ತು ಹರ್ಷದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

6 ಸಾವಿರ ರನ್ ಪೂರೈಸಿದ ಶಿಖರ್ ಧವನ್

ಐಪಿಎಲ್‍ನಲ್ಲಿ ಶಿಖರ್ ಧವನ್ 6 ಸಾವಿರ ರನ್ ಪೂರೈಸಿದ ದಾಖಲೆ ಮಾಡಿದರು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ 6 ಸಾವಿರ ರನ್ ಪೂರೈಸಿದ 2ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. 215 ಪಂದ್ಯಗಳಲ್ಲಿ 6402 ರನ್ ಗಳಿಸಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, 6050 ರನ್ ಬಾರಿಸಿರುವ ಶಿಖರ್ ಧವನ್ 2ನೇ ಸ್ಥಾನದಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News