ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಪಂಜಾಬ್ ಕಿಂಗ್ಸ್ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇಲ್ಲಿನ ಬ್ರಾಬೌರ್ನೆ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ನಡೆದ ಐಪಿಎಲ್ ಟೂರ್ನಿಯ 60ನೇ ಪಂದ್ಯದಲ್ಲಿ ಆರ್‌ಸಿಬಿಯನ್ನು 56 ರನ್ ಗಳಿಂದ ಪಂಜಾಬ್ ಮಣಿಸಿತು.
ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 209 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಸವಾಲಿನ ಮೊತ್ತವನ್ನು ಚೇಸ್ ಮಾಡಿದ ಆರ್‌ಸಿಬಿ ಬ್ಯಾಟಿಂಗ್ ನಲ್ಲಿ ಮತ್ತೊಮ್ಮೆ ವೈಫಲ್ಯ ಅನುಭವಿಸಿ ಸೋಲು ಕಂಡಿತು. 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಬೆಂಗಳೂರು 155 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಲಿಯಾಮ್ & ಬೈರ್ಸ್ಟೋವ್ ಬ್ಯಾಟಿಂಗ್ ಅಬ್ಬರ!
ಪಂಜಾಬ್ ಪರ ಆರಂಭಿಕ ಆಟಗಾರ ಜಾನಿ ಬೈರ್ಸ್ಟೋವ್(66), ಲಿಯಾಮ್ ಲಿವಿಂಗ್ಸ್ಟೋನ್(70) ಅಬ್ಬರದ ಬ್ಯಾಟಿಂಗ್ ನಡೆಸಿ ಆರ್‌ಸಿಬಿ ಬೌಲರ್ ಗಳಿಗೆ ಬೆವರಿಳಿಸಿದರು. ಇನ್ನುಳಿದಂತೆ ಶಿಖರ್ ಧವನ್(21) ಮತ್ತು ನಾಯಕ ಮಯಾಂಕ್ ಅರ್ಗವಾಲ್(19) ರನ್ ಗಳಿಸಿದರು. ಆರ್‌ಸಿಬಿ ಪರ ಹರ್ಷಲ್ ಪಟೇಲ್ 4 ವಿಕೆಟ್ ಕಿತ್ತು ಮಿಂಚಿದರೆ, ವನಿಂದು ಹಸರಂಗ 2, ಗ್ಲೇನ್ ಮ್ಯಾಕ್ಸ್ ವೇಲ್ ಮತ್ತು ಶಹಬಾಜ್ ಅಹಮದ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದ ಆರ್‌ಸಿಬಿ
ಬೃಹತ್ ಮೊತ್ತದ ಗೆಲುವಿನ ಗುರಿ ಬೆನ್ನತ್ತಿದ ಆರ್‌ಸಿಬಿ ಮತ್ತೊಮ್ಮೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿತು. ಆರ್‌ಸಿಬಿ ಪರ ಗ್ಲೇನ್ ಮ್ಯಾಕ್ಸ್ ವೇಲ್(35), ರಜತ್ ಪಾಟಿದಾರ್(26), ವಿರಾಟ್ ಕೊಹ್ಲಿ(20), ದಿನೇಶ್ ಕಾರ್ತಿಕ್(11), ಹರ್ಷಲ್ ಪಟೇಲ್(11) ಮತ್ತು ಫಾಫ್ ಡುಪ್ಲೇಸಿಸ್(10) ರನ್ ಗಳಿಸಿದರು. ಪಂಜಾಬ್ ಪರ ಕಗಿಸೊ ರಬಾಡ 3, ರಿಷಿ ಧವನ್ ಮತ್ತು ರಾಹುಲ್ ಚಹಾರ್ ತಲಾ 2 ಹಾಗೂ ಹರ್ಪ್ರೀತ್ ಬ್ರಾರ್ ಮತ್ತು ಅರ್ಷದೀಪ್ ಸಿಂಗ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.