ನವದೆಹಲಿ: ಭಾರತದ ಮಾಜಿ ಕ್ರಿಕೆಟ್ ಆಟಗಾರ ರಾಬಿನ್ ಸಿಂಗ್ ಪ್ರಸ್ತುತ ಭಾರತ ತಂಡದ ಕ್ರಿಕೆಟ್ ಕೋಚ್ ರವಿಶಾಸ್ತ್ರಿಯವರ ಸಾಮರ್ಥ್ಯವನ್ನು ಪ್ರಶ್ನಿಸಿದ್ದಾರೆ.
ಭಾರತ ತಂಡ ವಿಶ್ವಕಪ್ ಟೂರ್ನಿಯಲ್ಲಿ ಅದರಲ್ಲೂ ಲೀಗ್ ಪಂದ್ಯದಲ್ಲಿ ಒಂದು ಪಂದ್ಯವನ್ನು ಸೋತಿದ್ದು ಬಿಟ್ಟರೆ ಸೆಮಿಫೈನಲ್ ನಲ್ಲಿ ಮಾತ್ರ ಸೋಲನ್ನು ಅನುಭವಿಸಿತ್ತು. ಈಗ ವಿಶ್ವಕಪ್ ಟೂರ್ನಿ ಮುಗಿದ ನಂತರ ಬಿಸಿಸಿಐ ಮುಖ್ಯ ಕೋಚ್ ಮತ್ತು ಇತರ ಸಹಾಯಕ ಸಿಬ್ಬಂದಿ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಭಾರತದ ಮಾಜಿ ಆಲ್ರೌಂಡರ್ ರಾಬಿನ್ ಸಿಂಗ್ ಪ್ರಸ್ತುತ ಕೋಚ್ ರವಿಶಾಸ್ತ್ರಿ ವಿರುದ್ಧ ಕಿಡಿಕಾರಿ ಅವರ ನೇತೃತ್ವದಲ್ಲಿ ಭಾರತ ತಂಡವು ಎರಡು ವಿಶ್ವಕಪ್ ಸೆಮಿಫೈನಲ್ ಗಳನ್ನು ಸೋತಿದೆ ಎಂದು ಆರೋಪಿಸಿದರು.
"ಪ್ರಸ್ತುತ ತರಬೇತುದಾರನ ಅಡಿಯಲ್ಲಿ, ಸತತ ಎರಡು ಏಕದಿನ ವಿಶ್ವಕಪ್ಗಳ ಸೆಮಿಫೈನಲ್ನಲ್ಲಿ ಮತ್ತು ವಿಶ್ವ ಟ್ವೆಂಟಿ -20 ಚಾಂಪಿಯನ್ಶಿಪ್ನ ಕೊನೆಯ ನಾಲ್ಕು ಹಂತಗಳಲ್ಲಿ ಭಾರತ ಸೋತಿದೆ. ಈಗ 2023 ರ ವಿಶ್ವಕಪ್ಗೆ ತಯಾರಿ ನಡೆಸುವ ಸಮಯ, ಆದ್ದರಿಂದ ಕೋಚ್ ಬದಲಾವಣೆಯಾಗಬೇಕಾಗಿದೆ ಎಂದು ರಾಬಿನ್ ಸಿಂಗ್ ತಿಳಿಸಿದ್ದಾರೆ.
ವಿಶ್ವಕಪ್ ಟೂರ್ನಿ ಮುಗಿದ ನಂತರ ರವಿಶಾಸ್ತ್ರಿ ಮತ್ತು ಇತರ ಸಹಾಯಕ ಸಿಬ್ಬಂದಿಗೆ 45 ದಿನಗಳ ವರೆಗೆ ಅವರ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಜುಲೈ16 ರಂದು ಬಿಸಿಸಿಐ ಮುಖ್ಯ ಕೋಚ್, ಬ್ಯಾಟಿಂಗ್ ಕೋಚ್, ಬೌಲಿಂಗ್ ಕೋಚ್, ಫೀಲ್ಡಿಂಗ್ ಕೋಚ್, ಫಿಸಿಯೋಥೆರಪಿಸ್ಟ್, ಸ್ಟ್ರೆಂಗ್ ಅಂಡ್ ಕಂಡೀಷನಿಂಗ್ ಕೋಚ್ ಮತ್ತು ಆಡಳಿತಾತ್ಮಕ ಮ್ಯಾನೇಜರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತು. ಕೋಚ್ ಹುದ್ದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 30, 2019, ಸಂಜೆ 5 ಗಂಟೆಯವರೆಗೆ ಇರುತ್ತದೆ.