ನವದೆಹಲಿ/ಇಸ್ಲಾಮಾಬಾದ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370ನ್ನು ರದ್ದುಪಡಿಸುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ನಿರ್ಧಾರದಿಂದ ಪಾಕಿಸ್ತಾನದ ಒತ್ತಡ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರದಿಂದ ಸಂಸತ್ತಿನ ಉಭಯ ಸದನಗಳ ತುರ್ತು ಸಭೆ ಕರೆಯಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಕುರಿತು ಭಾರತದ ನಿರ್ಧಾರವನ್ನು ಚರ್ಚಿಸಲು ಪಾಕಿಸ್ತಾನದ ರಾಷ್ಟ್ರಪತಿ ಡಾ.ಆರಿಫ್ ಅಲ್ವಿ ಇಂದು (ಮಂಗಳವಾರ) ಸಂಸತ್ತಿನ ಉಭಯ ಸದನಗಳ ತುರ್ತು ಸಭೆ ಕರೆದಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿ ಸಚಿವಾಲಯವು ಜಂಟಿ ಸಭೆಯ ಕಾರ್ಯಸೂಚಿಯನ್ನು ಹೊರಡಿಸಿದೆ. ಸೋಮವಾರ ಹೊರಡಿಸಿದ ಅಧಿಕೃತ ಅಧಿಸೂಚನೆಯ ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿ ಮತ್ತು ಸೆನೆಟ್ ಜಂಟಿ ಸಭೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ವಿಶೇಷವೆಂದರೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370 ನೇ ವಿಧಿಯನ್ನು ಭಾರತ ಸರ್ಕಾರ ಸೋಮವಾರ ರದ್ದುಗೊಳಿಸಿತು. ಈಗ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗುವುದು. ಅವುಗಳಲ್ಲಿ ಒಂದು ಜಮ್ಮು ಮತ್ತು ಕಾಶ್ಮೀರ ಮತ್ತು ಎರಡನೇಯ ಕೇಂದ್ರಾಡಳಿತ ಪ್ರದೇಶ ಲಡಾಖ್. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡ ಕೇಂದ್ರಾಡಳಿತ ಪ್ರದೆಶವಾದರೆ, ಲಡಾಖ್ ನಲ್ಲಿ ವಿಧಾನಸಭೆ ಇರುವುದಿಲ್ಲ.