'ಇರಾಕ್ ನ ಯುಎಸ್ ನೆಲೆಯ ಮೇಲೆ ದಾಳಿ ಯುಎಸ್ ಗೆ ಮಾಡಿದ ಕಪಾಳಮೋಕ್ಷ'

ಇರಾಕ್‌ನ ಯುಎಸ್ ನೆಲೆಯ ಮೇಲೆ ಇರಾನ್‌ ನಡೆಸಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯು ಅಮೆರಿಕಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ ಎಂದು ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಾಮನೆಯಿ ಹೇಳಿದ್ದಾರೆ. 

Last Updated : Jan 8, 2020, 02:49 PM IST
'ಇರಾಕ್ ನ ಯುಎಸ್ ನೆಲೆಯ ಮೇಲೆ ದಾಳಿ ಯುಎಸ್ ಗೆ ಮಾಡಿದ ಕಪಾಳಮೋಕ್ಷ' title=

ಇರಾನ್ :ಇರಾಕ್‌ನ ಯುಎಸ್ ನೆಲೆಯ ಮೇಲೆ ಇರಾನ್‌ ನಡೆಸಿರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಯು ಅಮೆರಿಕಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ ಎಂದು ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಾಮನೆಯಿ ಹೇಳಿದ್ದಾರೆ. ಇರಾಕ್ ನಲ್ಲಿ ಯುಎಸ್ ವಾಯು ನೆಲೆಗಳ ಮೇಲೆ ಇರಾನ್ ದಾಳಿಯ ನಂತರ, ಅಲ್ಲಿನ ಮಾಧ್ಯಮಗಳು ಈ ಕುರಿತು ವರದಿ ಮಾಡಿವೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಇದು ಒಟ್ಟು 15 ಕ್ಷಿಪಣಿಗಳ ದಾಳಿಯಾಗಿದ್ದು,  ಈ ದಾಳಿಯಲ್ಲಿ, 80 ಜನರು ಸಾವನ್ನಪ್ಪಿದ್ದು, ಅಮೆರಿಕದ ಅನೇಕ ವಿಮಾನಗಳು ಬೆಂಕಿಗೆ ಆಹುತಿಯಾಗಿವೆ ಎಂದಿವೆ.  ಬಳಿಕ ಈ ಕುರಿತು ಮಾತನಾಡಿರುವ  ಇರಾನ್‌ನ ವಿದೇಶಾಂಗ ಸಚಿವ ಜವಾದ್ ಜರೀಫ್ ನಮಗೆ ಯುದ್ಧ ಬೇಕಾಗಿಲ್ಲ ಆದರೆ, ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ನಾವು ಆತ್ಮರಕ್ಷಣೆಗಾಗಿ ಈ ದಾಳಿ ನಡೆಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಯುಎಸ್ ಹೇಡಿಗಳಂತೆ ದಾಳಿ ಮಾಡಿ ನಮ್ಮ ನಾಗರಿಕರು ಮತ್ತು ಸೈನಿಕರನ್ನು ಕೊಂದಿದೆ ಎಂದು ಅವರು ಹೇಳಿದ್ದಾರೆ. ಯುಎನ್‌ನ ಚಾರ್ಟರ್ 53ರ ಅಡಿ ಈ ದಾಳಿ ನಡೆಸಲಾಗಿದೆ. ಇನ್ನೊಂದೆಡೆ, ಒಟ್ಟು 22 ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇರಾಕ್ ಸೇನಾ ಮೂಲಗಳು ಮಾಹಿತಿ ನೀಡಿವೆ. ದಾಳಿಯಲ್ಲಿ ಯಾವುದೇ ಇರಾಕಿ ಸೈನಿಕರು ಸಾವನ್ನಪ್ಪಿಲ್ಲ ಎಂದು ಅವರು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ(ಸ್ಥಳೀಯ ಕಾಲಮಾನದ ಪ್ರಕಾರ) ಮಧ್ಯ ಇರಾಕ್ ನ ಅಲ್-ಅಸಾದ್ ವಾಯುನೆಲೆಯ ಮೇಲೆ ಇರಾನ್ ಒಂದು ಡಜನ್ ಗೂ ಅಧಿಕ ಬ್ಯಾಲೆಸ್ಟಿಕ್ ಮಿಸೈಲ್ ಗಳ ಮೂಲಕ ದಾಳಿ ನಡೆಸಿದೆ. ಇಲ್ಲಿ ಅಮೇರಿಕ ತನ್ನ ಹಲವಾರು ಸೈನಿಕರನ್ನು ನಿಯೋಜನೆಗೊಳಿಸಿತ್ತು. ಇದು ಇರಾನ್ ವತಿಯಿಂದ ನಡೆಸಲಾದ ಮೊಟ್ಟಮೊದಲ ಪ್ರತಿದಾಳಿಯಾಗಿತ್ತು. ಕಳೆದ ವಾರ ಅಮೇರಿಕ ನಡೆಸಿದ್ದ ಡ್ರೋನ್ ದಾಳಿಯಲ್ಲಿ ಇರಾನಿನ ಕುದ್ಸ್ ಪೋರ್ಸ್ ಕಮಾಂಡರ್ ಜನರಲ್ ಕಾಸೀಂ ಸುಲೇಮಾನಿ ಹತ್ಯೆಗೈಯಲಾಗಿದ್ದು, ಆ ಬಳಿಕ ಅಮೇರಿಕ ಮತ್ತು ಇರಾನ್ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.

ಇರಾನ್ ದಾಳಿಯ ಕುರಿತು ಮಾಧ್ಯಮಗಳು ಹೇಳಿದ್ದೇನು?
ಸುದ್ದಿ ಸಂಸ್ಥೆ ಎಫೆ ನೀಡಿರುವ ವರದಿ ಪ್ರಕಾರ , ಈ ಕ್ಷಿಪಣಿ ದಾಳಿಯಲ್ಲಿ ನಿಜವಾಗಿಯೂ ಯಾವುದೇ ಸಾವುನೋವುಗಳು ಸಂಭವಿಸಿದೆಯೇ? ಅಥವಾ ವಾಯು ನೆಲೆಗೆ ಯಾವುದೇ ರೀತಿಯ ಹಾನಿ ಸಂಭವಿಸಿದೆಯೇ ಎಂಬ ಕುರಿತು ಮಾಹಿತಿ ಇಲ್ಲ ಎಂದಿದೆ. ಒಟ್ಟು ಎಷ್ಟು ಕ್ಷಿಪಣಿಗಳನ್ನು ಹಾರಿಸಲಾಗಿದೆ ಅಥವಾ ಅವು ಯಾವ ಪ್ರಕಾರದ ಕ್ರಿಪಣಿಗಳಾಗಿವೆ ಎಂಬುದು ನಿಖರವಾಗಿ ತಿಳಿದಿಲ್ಲ ಎಂದು ಸಂಸ್ಥೆ ಹೇಳಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಈ ದಾಳಿಯ ಬಗ್ಗೆ ಮಾಹಿತಿ ನೀಡಲಾಗಿದ್ದು, ಅವರ ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಶ್ವೇತಭವನ ಹೇಳಿದ್ದರೆ, ರೆವಲೂಷನರಿ ಗಾರ್ಡ್‌ಗಳು ಈ ದಾಳಿ ನಡೆಸಿದ್ದಾರೆ ಎಂದು ಇರಾನ್‌ನ ರಾಜ್ಯ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಗೆ ಸಂಬಂಧಿಸಿದಂತೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಎಲ್ಲವೂ ಚೆನ್ನಾಗಿದೆ' ಎಂದು ಹೇಳಿದ್ದರು. ಅಷ್ಟೇ ಅಲ್ಲ ದಾಳಿಯಿಂದಾದ ಹಾನಿಯ ಕುರಿತು ನಾವು ಮೌಲ್ಯಮಾಪನ ನಡೆಸುತ್ತಿರುವುದಾಗಿ ಹೇಳಿದ್ದರು. ಜೊತೆಗೆ ನಾವು ವಿಶ್ವದ ಅತ್ಯಂತ ಶಕ್ತಿಶಾಲಿ ಸೈನ್ಯ ಹೊಂದಿದ್ದೇವೆ. ನಾಳೆ ಬೆಳಗ್ಗೆ ದಾಳಿಯ ಕುರಿತು ಹೇಳಿಕೆ ನೀಡುತ್ತೇನೆ ಎಂದಿದ್ದರು.

Trending News