ನವದೆಹಲಿ: ಇದೀಗ ವಿಶ್ವಾದ್ಯಂತ ಕರೋನಾ ವೈರಸ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಚೀನಾ(China), ಇಟಲಿ(Italy) ಮತ್ತು ಇರಾನ್ (Iran) ನಂತರ ಪಾಕಿಸ್ತಾನ(Pakistan)ದಲ್ಲಿ ಕರೋನಾ ವೈರಸ್(Corona Virus) ನ ಹೆಚ್ಚು ಪ್ರಕರಣ ಕಂಡುಬಂದಿದೆ. ಗಮನಾರ್ಹವಾಗಿ ಪಾಕಿಸ್ತಾನದಲ್ಲಿ ಒಂದೇ ದಿನದಲ್ಲಿ ವೈರಸ್ ಸೋಂಕಿತರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅಲ್ಲದೆ ಕರೋನಾ ವೈರಸ್‌ನಿಂದ ಬಳಲುತ್ತಿರುವ ವ್ಯಕ್ತಿಯೂ ಸಾವನ್ನಪ್ಪಿದ್ದಾನೆ.
ತಮ್ಮ ದೇಶವು ದಕ್ಷಿಣ ಏಷ್ಯಾದ ವುಹಾನ್ ಆಗುವ ಹಾದಿಯಲ್ಲಿದೆ ಎಂಬುದನ್ನು ಪಾಕಿಸ್ತಾನದೊಳಗಿನ ತಜ್ಞರೇ ಒಪ್ಪುತ್ತಿದ್ದಾರೆ. ಪಾಕಿಸ್ತಾನದಲ್ಲಿ ಕರೋನಾ ವೈರಸ್‌ನ್ನು ಸೂಕ್ಷ್ಮವಾಗಿ ಪರಿಗಣಿಸಲಾಗಿಲ್ಲ. ಬದಲಿಗೆ ಕರೋನಾದೊಂದಿಗೆ ವ್ಯವಹರಿಸುವಾಗ ನಿರ್ಲಕ್ಷ್ಯವನ್ನು ಮಾಡಲಾಗುತ್ತಿದೆ. ಈ ಕಾರಣಕ್ಕಾಗಿ, ಸಿಂಧ್ ಪ್ರಾಂತ್ಯದಲ್ಲಿ ಒಂದು ದಿನದೊಳಗೆ 115 ಕರೋನಾ ಪ್ರಕರಣಗಳು ವರದಿಯಾಗಿವೆ ಎನ್ನಲಾಗಿದೆ.
ಪಾಕಿಸ್ತಾನದಲ್ಲಿ ಕರೋನಾ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಈಗ ಪಾಕಿಸ್ತಾನದಲ್ಲಿ ಭಾರತಕ್ಕಿಂತ ಹೆಚ್ಚಿನ ಕರೋನಾ ವೈರಸ್ ಸೋಂಕಿತರಿರುವುದು ವರದಿಯಾಗಿದೆ. ಚೀನಾ, ಇಟಲಿ ಮತ್ತು ಇರಾನ್ ನಂತರ ಇನ್ನಾವುದೇ ದೇಶದಲ್ಲೂ ಈ ಮಟ್ಟಿಗಿನ ಹೆಚ್ಚಳ ಕಂಡು ಬಂದಿಲ್ಲ ಎಂಬುದು ಪಾಕಿಸ್ತಾನದ ತಲ್ಲಣಕ್ಕೆ ಕಾರಣವಾಗಿದೆ. ಪಾಕಿಸ್ತಾನವು ದಕ್ಷಿಣ ಏಷ್ಯಾದ ಹೊಸ 'ವುಹಾನ್' ಆಗಲಿದೆಯೇ? ಎಂಬ ಆತಂಕ ಹೆಚ್ಚಾಗತೊಡಗಿದೆ.
ದಕ್ಷಿಣ ಏಷ್ಯಾದ ವುಹಾನ್ ಆಗಲಿದೆಯೇ ಪಾಕಿಸ್ತಾನ?
- ಭಾರತ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿರುವ ಕರೋನಾ ವೈರಸ್ ಸೋಂಕಿತರ ಸಂಖ್ಯೆ ಪಾಕಿಸ್ತಾನದಲ್ಲಿ ಹೆಚ್ಚಾಗಿದೆ.
- ಪಾಕಿಸ್ತಾನದಲ್ಲಿ ಕರೋನಾ ವೈರಸ್‌ನಿಂದ ಬಳಲುತ್ತಿರುವವರ ಸಂಖ್ಯೆ 237 ಕ್ಕೆ ತಲುಪಿದೆ.
- ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಅತಿ ಹೆಚ್ಚು ಕರೋನಾ ಪ್ರಕರಣಗಳು ಅಂದರೆ 172 ಪ್ರಕರಣ ಕಂಡುಬಂದಿದೆ.
- ಖೈಬರ್ ಪಖ್ತುನ್ಖ್ವಾದಲ್ಲಿ 16, ಬಲೂಚಿಸ್ತಾನದಲ್ಲಿ 16, ಪಂಜಾಬ್‌ನಲ್ಲಿ 26, ರಾಜಧಾನಿ ಇಸ್ಲಾಮಾಬಾದ್‌ನಲ್ಲಿ 2, ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ 5 ಪ್ರಕರಣಗಳು ವರದಿಯಾಗಿವೆ.
- ಕರೋನಾ ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಿಗೆ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನಕ್ಕೂ ಹರಡಿದೆ.
ಪಾಕಿಸ್ತಾನದ ಜನರಲ್ಲಿ ಆತಂಕ:
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಈಗಾಗಲೇ ಕರೋನಾ ವಿರುದ್ಧ ಹೋರಾಡಲು ಅಸಮರ್ಥತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಸಹಕಾರಕ್ಕಾಗಿ ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ. ದೇಶದಲ್ಲಿ ಕರೋನಾವನ್ನು ಎದುರಿಸಲು ಯಾವುದೇ ವ್ಯವಸ್ಥೆಗಳಿಲ್ಲ ಮತ್ತು ಪಾಕಿಸ್ತಾನದಲ್ಲಿ ಕರೋನಾ ರೋಗಿಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಈಗ ಪಾಕಿಸ್ತಾನದ ಜನರು ಭಯಭೀತರಾಗುತ್ತಿದ್ದಾರೆ.
ತೊಂದರೆಯಲ್ಲಿ ಪಾಕಿಸ್ತಾನ:
ಪಾಕಿಸ್ತಾನಕ್ಕೆ ಹೆಚ್ಚು ಭಯ ಹುಟ್ಟಿಸುವ ಸಂಗತಿಯೆಂದರೆ ಪಾಕಿಸ್ತಾನದಲ್ಲಿ 24 ಗಂಟೆಗಳಲ್ಲಿ ರೋಗಿಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ ವೇಗದಲ್ಲಿ ಪಾಕಿಸ್ತಾನದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದರೆ, ಪ್ರಕರಣಗಳನ್ನು ನಿಭಾಯಿಸುವುದು ಪಾಕಿಸ್ತಾನಕ್ಕೆ ಇನ್ನೂ ಕಷ್ಟಕರವಾಗಿರುತ್ತದೆ.
ಇಮ್ರಾನ್ ಖಾನ್ ಮನವಿ:
ಕರೋನಾ ವೈರಸ್ ಹೆಚ್ಚುತ್ತಿರುವ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕಳವಳ ವ್ಯಕ್ತಪಡಿಸಿದರು. ನಾವು ತುಂಬಾ ಕಷ್ಟದ ಸಮಯಗಳನ್ನು ಎದುರಿಸುತ್ತಿದ್ದೇವೆ ಎಂದಿರುವ ಇಮ್ರಾನ್, ನಾವು ಅಮೆರಿಕ ಮತ್ತು ಯುರೋಪಿನಂತೆ ಶ್ರೀಮಂತರಲ್ಲ. ಒಂದು ಕಡೆ ಕರೋನಾ ವೈರಸ್ ವಿರುದ್ಧ ಹೋರಾಡಲು ನಿಂತರೆ, ಇನ್ನೊಂದೆಡೆ ನಮ್ಮ ಜನರು ಹಸಿವಿನಿಂದ ಸಾಯಬೇಕಾಗುತ್ತದೆ ಎಂದು ಇಮ್ರಾನ್ ಖಾಂತ್ ಹೇಳಿದ್ದಾರೆ.
ಕರೋನಾ ತಡೆಗಟ್ಟುವ ಯಾವುದೇ ಯೋಜನೆಗಳಿಲ್ಲ:
ಕರೋನಾವನ್ನು ತಡೆಯುವ ಯಾವುದೇ ಯೋಜನೆಯನ್ನು ಪಾಕಿಸ್ತಾನ ಆಡಳಿತ ಹೊಂದಿಲ್ಲ. ಇರಾನ್‌ನಿಂದ ಬಲೂಚಿಸ್ತಾನಕ್ಕೆ ಬರುವ ಜನರಲ್ಲಿ ಕರೋನದ ಲಕ್ಷಣಗಳು ಇದ್ದರೂ, ಅವರನ್ನು ಪ್ರತ್ಯೇಕವಾಗಿರಿಸಲಾಗಲಿಲ್ಲ. ಬದಲಿಗೆ ಎಲ್ಲಾ ಶಂಕಿತ ರೋಗಿಗಳನ್ನು ಒಟ್ಟುಗೂಡಿಸಲಾಯಿತು ಮತ್ತು ಜನರು ಅಲ್ಲಿಂದ ಕರಾಚಿಯನ್ನು ತಲುಪಿದರು. ಜೊತೆಗೆ ಕರೋನಾವನ್ನು ಕರೆತಂದರು. ಈಗಲಾದರೂ ಪಾಕಿಸ್ತಾನ ಸರ್ಕಾರ ಕಣ್ತೆರೆಯದಿದ್ದರೆ ಶೀಘ್ರದಲ್ಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಪರಿಸ್ಥಿತಿ ಚೀನಾ, ಇಟಲಿ ಮತ್ತು ಇರಾನ್‌ಗಿಂತಲೂ ಭೀಕರವಾಗುತ್ತದೆ ಎಂದು ಪಾಕಿಸ್ತಾನ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರೋನಾ ಶಂಕಿತರು ಕಾಣೆಯಾಗಿದ್ದಾರೆ, ಸರ್ಕಾರಕ್ಕೆ ಯಾವುದೇ ಸುದ್ದಿ ಇಲ್ಲ:
ಒಟ್ಟಾರೆಯಾಗಿ, ಪಾಕಿಸ್ತಾನವು ಕರೋನಾ ಪರೀಕ್ಷೆಗೆ ಯಾವುದೇ ಸೌಲಭ್ಯವನ್ನು ಹೊಂದಿಲ್ಲ ಅಥವಾ ಆಸ್ಪತ್ರೆಗಳಲ್ಲಿ ಕರೋನಾ ರೋಗಿಗಳನ್ನು ನಿಭಾಯಿಸುವ ಸಿದ್ಧತೆಗಳನ್ನು ಹೊಂದಿಲ್ಲ. ಪಾಕಿಸ್ತಾನದೊಳಗೆ ಇನ್ನೂ 1700 ಶಂಕಿತ ಕರೋನಾ ರೋಗಿಗಳು ಕಾಣೆಯಾಗಿದ್ದಾರೆ. ಅವರು ಎಲ್ಲಿಗೆ ತಲುಪಿದರು ಎಂಬ ಬಗ್ಗೆ ಸರ್ಕಾರಕ್ಕೆ ಯಾವುದೇ ಮಾಹಿತಿ ಇಲ್ಲ. ಇವೆಲ್ಲವೂ ಪಾಕಿಸ್ತಾನದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿವೆ.