ʼವಿಶ್ವ ಸಂಸ್ಕೃತಿ ಉತ್ಸವʼದಲ್ಲಿ ಭಾರತ..! 10 ಕಾರ್ಯಕ್ರಮಗಳ ವಿವರ ಇಲ್ಲಿದೆ

ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್‌ 1 ರ ವರೆಗೆ ವಿಶ್ವ ಸಂಸ್ಕೃತಿ ಉತ್ಸವ ನಡೆಯಲಿದೆ. 180 ದೇಶಗಳ  17000 ಜಾಗತಿಕ ಕಲಾವಿದರು ಒಂದೇ ವೇದಿಕೆಯಿಂದ ತಮ್ಮ ಪ್ರತಿಭೆಯ ಅಭೂತಪೂರ್ವ ಪ್ರದರ್ಶನ ನೀಡಲಿದ್ದಾರೆ.

Written by - Krishna N K | Last Updated : Sep 30, 2023, 04:02 PM IST
  • ವಾಷಿಂಗ್ಟನ್‌ ಡಿಸಿಯ ಐತಿಕಾಸಿಕ ನ್ಯಾಷನಲ್‌ ಮಾಲ್‌ನಲ್ಲಿ ನಡೆಯಲಿರುವ ವಿಶ್ವ ಸಂಸ್ಕೃತಿ ಉತ್ಸವ
  • 180 ದೇಶಗಳ 17000 ಜಾಗತಿಕ ಕಲಾವಿದರು ಒಂದೇ ವೇದಿಕೆಯಲ್ಲಿ ಕಲೆ ಪ್ರದರ್ಶನ
  • ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್‌ 1 ರ ವರೆಗೆ ನಡೆಯುವ ಉತ್ಸವ
ʼವಿಶ್ವ ಸಂಸ್ಕೃತಿ ಉತ್ಸವʼದಲ್ಲಿ ಭಾರತ..! 10 ಕಾರ್ಯಕ್ರಮಗಳ ವಿವರ ಇಲ್ಲಿದೆ  title=

World Culture Festival 2023 : ವಾಷಿಂಗ್ಟನ್‌ ಡಿಸಿಯ ಐತಿಕಾಸಿಕ ನ್ಯಾಷನಲ್‌ ಮಾಲ್‌ನಲ್ಲಿ ನಡೆಯಲಿರುವ ವಿಶ್ವ ಸಂಸ್ಕೃತಿ ಉತ್ಸವದಲ್ಲಿ 180 ದೇಶಗಳ  17000 ಜಾಗತಿಕ ಕಲಾವಿದರು ಒಂದೇ ವೇದಿಕೆಯಿಂದ ತಮ್ಮ ಪ್ರತಿಭೆಯ ಅಭೂತಪೂರ್ವ ಪ್ರದರ್ಶನ ನೀಡಲಿದ್ದಾರೆ. ಸಂಸ್ಕೃತಿ, ಸಂಪ್ರದಾಯ, ಕಲೆ ಮತ್ತು ಆಧ್ಯಾತ್ಮಿಕತೆಯ ಈ ಉತ್ಸವದಲ್ಲಿ ಅವರೆಲ್ಲರೂ ಹಿಪ್-ಹಾಪ್‌, ರೆಗ್ಗೇ, ಟ್ಯಾಂಗೋ, ಆಫ್ರಿಕನ್‌, ಉಕ್ರೇನಿಯನ್‌, ಚೈನೀಸ್‌, ಸೂಫಿ ಶೈಲಿ ಮುಂತಾದ ವಿವಿಧ ಕಲಾಪ್ರಕಾರಗಳಲ್ಲಿ ತಮಗಿರುವ ನೈಪುಣ್ಯವನ್ನು ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್‌ 1 ರ ವರೆಗೆ ನಡೆಯುವ ಉತ್ಸವದ ಪ್ರಧಾನ ವೇದಿಕೆಯಿಂದ ಪರಿಚಯಿಸಲಿದ್ದಾರೆ.

ಸುಮಾರು 4.5 ಲಕ್ಷ ಜನರು ಭಾಗವಹಿಸಲಿರುವ ಈ ಉತ್ಸವದಲ್ಲಿ ಸಾಂಸ್ಕೃತಿಕ ತಂಡಗಳು ಭಾರತದ ಕಲಾಶ್ರೀಮಂತಿಕೆಯನ್ನು ಜಗತ್ತಿಗೆ ತೆರೆದು ತೋರಿಸಿ ಜನರ ಹೃದಯಗಳನ್ನು ಗೆಲ್ಲಲು ಉತ್ಸುಕವಾಗಿವೆ.  ಭಾರತೀಯ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ ಮತ್ತು ಸಿಂಫನಿಯ ಜೊತೆಗೆ 10000 ನರ್ತಕರು ಚಂಡೆಯ ಲಯಬದ್ಧ ನಾದದ ಹಿನ್ನೆಲೆಯಲ್ಲಿ ಕಣ್ಮನ ಸೆಳೆಯುವ ಸಾಂಪ್ರದಾಯಿಕ ಗರ್ಬಾ ನೃತ್ಯದಲ್ಲಿ ಭಾಗವಹಿಸಲಿದ್ದಾರೆ.  ಭಾರತದ ಹತ್ತು ಪ್ರಮುಖ ದೇಸೀ ಆಕರ್ಷಣೆಗಳು ಮತ್ತು ಅತಿಥಿಗಳ ಪಟ್ಟಿ ಈ ಕೆಳಗಿನಂತಿದೆ.

1. ಪಂಚಭೂತಮ್‌ : 850 ಕಲಾವಿದರಿಂದ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಿಂಫನಿ ಕಾರ್ಯಕ್ರಮ

ಭಾರತದ ಶಾಸ್ತ್ರೀಯ ವಾದ್ಯಗಳ ಧ್ವನಿವೈವಿಧ್ಯ ಮತ್ತು ನೃತ್ಯಪ್ರಕಾರದ ಸಮ್ಮಿಲನ, ಈ ಪಂಚಭೂತಮ್‌ ಕಾರ್ಯಕ್ರಮ. ಮೊದಲ ದಿನ, 250ಕ್ಕೂ ಹೆಚ್ಚು ನುರಿತ ಸಿತಾರ್‌, ವೀಣೆ, ತಬಲ, ಮೃದಂಗ, ಕೊಳಲು, ಘಟ, ಮತ್ತು ವಯೋಲಿನ್‌  ವಾದಕರ ಜೊತೆಗೆ 600 ಜನ ನರ್ತಕರಿಂದ ಭರತನಾಟ್ಯ, ಕಥಕ್‌, ಒಡಿಸ್ಸಿ, ಕೂಚಿಪುಡಿ ಮತ್ತು ಮೋಹಿನಿಯಾಟ್ಟಂ ನೃತ್ಯಗಳ ಮೂಲಕ ಪ್ರಕೃತಿಯ ಪಂಚತತ್ತ್ವಗಳನ್ನು ಚಿತ್ರಿಸುವ ಪ್ರದರ್ಶನ.

2. ನಾದಸ್ವರ – ಶಹನಾಯಿ ಸ್ವರಮೇಳ

ಭಾರತದಲ್ಲಿ ಶುಭಕಾರ್ಯಗಳಲ್ಲಿ ನುಡಿಸುವ ಶಹನಾಯಿ ಮತ್ತು ನಾದಸ್ವರವಾದನ – 30 ಕಲಾವಿದರಿಂದ. ಈ ಸಂಗೀತವಾದ್ಯಗಳ ಅಲೌಕಿಕ ನಾದದ ತರಂಗಗಳಲ್ಲಿ ಲೀನವಾಗುವ ಸದವಕಾಶ.  

3. ಏಕತೆಗಾಗಿ 10000 ಜನರಿಂದ ಗರ್ಬಾ ನೃತ್ಯ.

ಏಕತೆಯನ್ನು ಪ್ರತಿಬಿಂಬಿಸುವ ಗರ್ಬಾ ನೃತ್ಯದಲ್ಲಿ 10000ಕ್ಕೂ ಹೆಚ್ಚು ಜನರು ಭಾಗವಹಿಸಿ ತಮ್ಮ ವೇಷಭೂಷಣಗಳು, ಹೊಂದಾಣಿಕೆಯ ಚಲನೆ, ಲಯಬದ್ಧ ಹೆಜ್ಜೆ ಮತ್ತು ಸಮಕಾಲೀನ ನೃತ್ಯಪ್ರಕಾರಗಳ ಸಂಯೋಜಿತ ಕಾರ್ಯಕ್ರಮದ ಮೂಲಕ ಬೆರಗುಗೊಳಿಸಲಿದ್ದಾರೆ. ಈ ನೃತ್ಯಪ್ರಕಾರವು ಹುಟ್ಟಿಸುವ ಅದಮ್ಯ ಶಕ್ತಿಯು ಗಡಿಗಳನ್ನು ಮೀರಿ ಸಮುದಾಯಗಳ ನಡುವೆ ಸಾಮರಸ್ಯವನ್ನು,  ಏಕತೆಯನ್ನು, ಪರಸ್ಪರ ಅರಿವನ್ನು ಮೂಡಿಸಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇಕ್ಷಕರಿಗೂ ಮುಕ್ತ ಆಹ್ವಾನವಿರುತ್ತದೆ.

4. ಭಾಂಗ್ರಾ ಸಂಭ್ರಮ

ಪಂಜಾಬಿ ಜಾನಪದ ಹಾಡುಗಳು ಮತ್ತು ಸಂಗೀತದ ಲಯಕ್ಕೆ ಹೆಜ್ಜೆ ಹಾಕುವ 200 ನರ್ತಕರು ವಾತಾವರಣಕ್ಕೆ ಚೈತನ್ಯ ತುಂಬಲಿದ್ದಾರೆ.

5. ಚಂಡೆ ಮೇಳ : ಕೇರಳದ ತಾಳವಾದ್ಯ ಮೇಳ

ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ತಾಳವಾದ್ಯ ಚಂಡೆಯ ನಿನಾದವನ್ನು ನಿಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಿರಿ. ನಿಮ್ಮ ಜ್ಞಾನೇಂದ್ರಿಯಗಳಿಗೆ ಅಪರೂಪದ ರಸದೌತಣ ಬಡಿಸುವ ಚಂಡೆಗಳ ಮೇಳದ ಆಕರ್ಷಣೆಯಿಂದ ನೀವು ತಪ್ಪಿಸಿಕೊಳ್ಳಲಾರಿರಿ.  

6. ವಂದೇ ಮಾತರಂ ಗಾಯನ

350 ಕೊರಳುಗಳಿಂದ ಏಕಕಾಲದಲ್ಲಿ ಹೊಮ್ಮುವ ಭಾರತದ ಮೈ ನವಿರೇಳಿಸುವ “ವಂದೇ ಮಾತರಂ” ರಾಷ್ಟ್ರೀಯ ಹಾಡನ್ನು ರಚಿಸಿದವರು ಬಂಕಿಂ ಚಂದ್ರ ಚಟರ್ಜೀ. ಇದನ್ನು ಗ್ರಾಮಿ ಪ್ರಶಸ್ತಿಗೆ ನಾಮಾಂಕಿತರಾಗಿದ್ದ ಚಂದ್ರಿಕಾ ಟಂಡನ್‌ ನೇತೃತ್ವದಲ್ಲಿ ಹಾಡಲಾಗುವುದು.

7. ಗುರುದೇವ ಶ್ರೀ ಶ್ರೀ ರವಿ ಶಂಕರರ ಜೊತೆ ಜಾಗತಿಕ ಧ್ಯಾನ

4.5 ಲಕ್ಷ ಜನರು ಏಕಕಾಲದಲ್ಲಿ ಮೌನವಾಗಿ ಧ್ಯಾನಮಾಡುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಉತ್ಸವದ ಧ್ವನಿ ಮತ್ತು ಸಂಗೀತದ ಅಬ್ಬರಗಳಿಗೆ ವ್ಯತಿರಿಕ್ತವಾಗಿ ಮೌನವಾಗಿ ಶಾಂತಿ ಮತ್ತು ಸಮರಸಭರಿತ ಜಗತ್ತಿಗಾಗಿ ಧ್ಯಾನ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ರವಿ‌ ಶಂಕರ್ ಸ್ವತಃ ನಡೆಸಿಕೊಡುತ್ತಾರೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ತಾವೂ ಭಾಗವಹಿಸಿ ವಿಶ್ವಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಮಾಡಿ.

8. 300 ಕಲಾವಿದರಿಂದ ವಸುಧೈವಕುಟುಂಬಕಂ ವೃಂದಗಾಯನ

ಇಡೀ ಜಗತ್ತೇ ಒಂದು ಕುಟುಂಬ ಎಂದು ಸಾರುವ ವಸುಧೈವಕುಟುಂಬಕಮ್‌ ಪರಿಕಲ್ಪನೆಯನ್ನು ಉಪನಿಷತ್ತುಗಳಲ್ಲಿ ಕಾಣಬಹುದು. ವಿದುಷಿ ಸುಜಾತಾ ಘಾಣೇಕರ್‌ ರಚಿಸಿ ಸ್ವರಸಂಯೋಜನೆ ಮಾಡಿರುವ ಗೀತೆಯನ್ನು 300 ಜನ ಗಾಯಕರು ಹಾಡಲಿದ್ದಾರೆ. ಈ ಗೀತೆಯು ಹಂಸಧ್ವನಿ ರಾಗದಲ್ಲಿ ಮೂಡಿಬರಲಿದೆ.

9. ಅಲೌಕಿಕ ಅನುಭವ ನೀಡುವ ಆರ್ಟ್‌ ಆಫ್‌ ಲಿವಿಂಗ್‌ ಭಜನೆಗಳು  

ಎಲ್ಲರೂ ಜೊತೆಗೂಡಿ ಹಾಡುವ ಕಾಲಾತೀತವಾದ ಪುರಾತನ ಭಜನೆಗಳು ಎಲ್ಲರನ್ನೂ ಅಧ್ಯಾತ್ಮದ ಆನಂದದಲ್ಲಿ ತೇಲಾಡಿಸುವುದರ ಜೊತೆಗೆ ಅತೀಂದ್ರಿಯ ಅನುಭವವನ್ನೂ ನೀಡುವುದರಲ್ಲಿ ಅನುಮಾನವಿಲ್ಲ. ಪಕ್ಕವಾದ್ಯ ಸಮೇತವಾದ ಉತ್ಕೃಷ್ಟ ಹಾಡುಗಾರಿಕೆಯು ಭಕ್ತಿಗೀತೆಗಳ ಲೋಕಕ್ಕೆ ತಮ್ಮನ್ನು ಕರೆದೊಯ್ಯುವುದರ ಜೊತೆಗೆ ಪ್ರಶಾಂತ ವಾತಾವರಣವನ್ನೂ ನಿರ್ಮಿಸುತ್ತದೆ.

ಬೋನಸ್:‌ ಹಾಡು ಮತ್ತು ಸಂಗೀತದ ಜೊತೆಗೆ ಭಾರತೀಯ ಮೂಲದ ಮುತ್ಸದ್ದಿಗಳು, ಧಾರ್ಮಿಕ ಮುಖಂಡರು ಕೂಡ ಉತ್ಸವದಲ್ಲಿ ಭಾಗವಹಿಸುತ್ತಾರೆ. ಇವರಲ್ಲಿ ಭಾರತದ ವಿದೇಶಾಂಗ ಸಚಿವ, ಶ್ರೀ ಎಸ್‌ ಜೈಶಂಕರ್‌, ಲೋಕಸಭೆಯ ಮಾಜಿ ಸಭಾಪತಿ, ಶ್ರೀಮತಿ ಸುಮಿತ್ರಾ ಮಹಾಜನ್‌, ಭಾರತದ ಮಾಜಿ ರಾಷ್ಟ್ರಪತಿ, ಶ್ರೀ ರಾಮನಾಥ್‌ ಕೋವಿಂದ್‌, ಅಮೆರಿಕದ ಪ್ರಧಾನ ಸರ್ಜನ್‌ ಡಾ. ವಿವೇಕ್‌ ಮೂರ್ತಿ, ನಾರ್ವೆ ದೇಶದ ಸಂಸದ ಹಿಮಾಂಶು ಗುಲಾಟಿ ಮುಂತಾದವರು ಸೇರಿದ್ದಾರೆ. ಇಡೀ ಜಗತ್ತು ಭಾರತದೆಡೆ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿಇವರೆಲ್ಲರೂ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.

 10. ಭಾರತದ ವಿದೇಶಾಂಗ ಮಂತ್ರಿ ಶ್ರೀ ಸುಬ್ರಹ್ಮಣ್ಯಂ ಜೈಶಂಕರ್‌ ಅವರಿಂದ ಭಾಷಣ

ನ್ಯಾಷನಲ್ ಮಾಲ್‌ನಲ್ಲಿ ನೇರವಾಗಿ ಮತ್ತು ಅಂತರ್ಜಾಲದ ಮೂಲಕ ನೂರು ಕೋಟಿಗೂ ಹೆಚ್ಚು ವೀಕ್ಷಕರು ಭಾರತದ ಹಿಂದಿನ ರಾಜತಾಂತ್ರಿಕ, ಇಂದಿನ ವಿದೇಶಾಂಗ ಮಂತ್ರಿ ಶ್ರೀ ಎಸ್‌ ಜೈಶಂಕರ್‌ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಉತ್ಸುಕರಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News