ಉಕ್ರೇನ್-ರಷ್ಯಾ ಯುದ್ಧದ 2ನೇ ದಿನ ಏನಾಯಿತು? ಉಕ್ರೇನ್ ನಾಗರಿಕರಿಂದ ಭಾರತ ಏನು ಕಲಿಯಬಹುದು?

ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿ 2 ದಿನಗಳು ಕಳೆದಿವೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಕೂಡ ವರದಿಯಾಗಿದೆ.

Written by - Puttaraj K Alur | Last Updated : Feb 26, 2022, 08:08 AM IST
  • ರಷ್ಯಾದ ಸೈನ್ಯವು ರಾಜಧಾನಿ ಕೀವ್‌ನಲ್ಲಿ ಉಕ್ರೇನಿಯನ್ ಸೈನ್ಯದೊಂದಿಗೆ ಹೋರಾಡುತ್ತಿದೆ
  • ದಾಳಿಯ ಭೀತಿಯಿಂದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು ಗುಪ್ತಚರ ಬಂಕರ್‌ಗೆ ಸ್ಥಳಾಂತರಿಸಲಾಗಿದೆ
  • ಶುಕ್ರವಾರವೂ ರಷ್ಯಾದ 2 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದ್ದೇವೆಂದು ಉಕ್ರೇನ್ ಹೇಳಿಕೊಂಡಿದೆ
ಉಕ್ರೇನ್-ರಷ್ಯಾ ಯುದ್ಧದ 2ನೇ ದಿನ ಏನಾಯಿತು? ಉಕ್ರೇನ್ ನಾಗರಿಕರಿಂದ ಭಾರತ ಏನು ಕಲಿಯಬಹುದು? title=
ಬಂಕರ್ಗೆ ಸ್ಥಳಾಂತರಗೊಂಡ ಉಕ್ರೇನಿಯನ್ ಅಧ್ಯಕ್ಷ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿ 2 ದಿನಗಳು ಕಳೆದಿವೆ. ರಷ್ಯಾದ ಸೇನೆಯು ಶುಕ್ರವಾರ ಉಕ್ರೇನ್ ರಾಜಧಾನಿ ಕೀವ್‌(Russia Ukraine War)ನೊಳಗೆ ತಲುಪಿದ್ದು, ಇದೀಗ ವಸತಿ ಪ್ರದೇಶಗಳು ಮತ್ತು ನಾಗರಿಕರನ್ನು ಗುರಿಯಾಗಿಸಲು ಪ್ರಾರಂಭಿಸಿದೆ.

ರಾಜಧಾನಿ ಕೀವ್‌ಗೆ ರಷ್ಯಾದ ಟ್ಯಾಂಕ್‌ಗಳು  

ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ(Russia Ukraine Crisis) ಆರಂಭವಾಗಿ ಹಲವು ಗಂಟೆಗಳು ಕಳೆದಿವೆ. ಉತ್ತರ ಉಕ್ರೇನ್, ಪೂರ್ವ ಉಕ್ರೇನ್ ಮತ್ತು ಈಶಾನ್ಯ ಉಕ್ರೇನ್ ಮೇಲೆ ತಮ್ಮ ನಿಯಂತ್ರಣವನ್ನು ಬಿಗಿಗೊಳಿಸಿದ್ದೇವೆಂದು ರಷ್ಯಾ ಹೇಳಿಕೊಂಡಿದೆ. ರಷ್ಯಾದ ಪಡೆಗಳು ಮತ್ತು ಯುದ್ಧ ಟ್ಯಾಂಕರ್ ಗಳು ರಾಜಧಾನಿ ಕೀವ್‌ಗೆ ತಲುಪಿವೆ ಮತ್ತು ಉತ್ತರ ಕೀವ್‌ನ ಪ್ರದೇಶಗಳಲ್ಲಿ ರಷ್ಯಾದ ರಾಕೆಟ್ ದಾಳಿಗಳನ್ನು ನಡೆಸಲಾಗಿದೆ ಎಂದು ಉಕ್ರೇನ್ ವರದಿ ಮಾಡಿದೆ. ಉಕ್ರೇನ್ ತಾನು ಗಾಳಿಯಲ್ಲಿ ಹಲವಾರು ರಾಕೆಟ್‌ಗಳನ್ನು ಹೊಡೆದುರುಳಿಸಿದ್ದೇವೆಂದು ಹೇಳಿಕೊಂಡರೂ ರಷ್ಯಾದ ಕೆಲವು ಟ್ಯಾಂಕ್‌ಗಳನ್ನು ನಾಶಪಡಿಸುವ ಬಗ್ಗೆಯೂ ಮಾತನಾಡಿದೆ.

ಈ ಸಂಘರ್ಷದ ನಡುವೆಯೇ ರಷ್ಯಾವು ಉಕ್ರೇನ್‌ನ ಚೆರ್ನೋಬಿಲ್‌ನಲ್ಲಿರುವ ಪರಮಾಣು ವಿದ್ಯುತ್ ಸ್ಥಾವರ(Chernobyl)ವನ್ನು ವಶಪಡಿಸಿಕೊಂಡಿದೆ. ಇದೇ ಪರಮಾಣು ವಿದ್ಯುತ್ ಸ್ಥಾವರವಾಗಿದ್ದು, 1986ರಲ್ಲಿ ಸಂಭವಿಸಿದ ಇದುವರೆಗಿನ ಅತಿದೊಡ್ಡ ಪರಮಾಣು ದುರಂತವೆಂದು ಕುಖ್ಯಾತಿ ಗಳಿಸಿದೆ. ರಷ್ಯಾದ ಸೇನೆಯು ಚೆರ್ನೋಬಿಲ್ ನಗರದ ಮೇಲೆ ತನ್ನ ನಿಯಂತ್ರಣ ಸಾಧಿಸಲು ಮತ್ತು ಸಾಮಾನ್ಯವಾಗಿ ಸುಮಾರು 3 ಸಾವಿರ ಉಕ್ರೇನಿಯನ್ ಸೇನೆಯನ್ನು ಎದುರಿಸಲು ಈ ವಿದ್ಯುತ್ ಸ್ಥಾವರದ ವಿಕಿರಣ ಮಟ್ಟವನ್ನು ಹೆಚ್ಚಿಸಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಇದೀಗ ಅದು 90 ಸಾವಿರ ದಾಟಿದೆ ಎಂದು ತಿಳಿದುಬಂದಿದೆ. ಆದಾಗ್ಯೂ ಸಕ್ರಿಯ ಧೂಳಿನ ಕಾರಣದಿಂದ ಈ ವಿಕಿರಣದ ಮಟ್ಟ ಹೆಚ್ಚಾಗಿದೆ ಅಂತಾ ರಷ್ಯಾ ಹೇಳಿದೆ.

ಇದನ್ನೂ ಓದಿ: Russia-Ukraine Crisis: ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ನಡುವಿನ ಜಾಡನ್ನು ಹುಡುಕುತ್ತಾ...

1986ರಲ್ಲಿ ಚೆರ್ನೋಬಿಲ್ ಸ್ಥಾವರ ಸ್ಫೋಟ 

ಸೋವಿಯತ್ ಒಕ್ಕೂಟದ ಕೊನೆಯ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರು 1986ರ ಈ ಅಪಘಾತವನ್ನು ಸೋವಿಯತ್ ಒಕ್ಕೂಟದ ವಿಘಟನೆಗೆ ದೊಡ್ಡ ಕಾರಣವೆಂದು ಪರಿಗಣಿಸಿದ್ದಾರೆ. ಈ ದುರಂತವು ಸೋವಿಯತ್ ಒಕ್ಕೂಟವು ತಾಂತ್ರಿಕ ಅಭಿವೃದ್ಧಿಯಲ್ಲಿ ಪಾಶ್ಚಿಮಾತ್ಯ ದೇಶಗಳಿಗಿಂತ ತುಂಬಾ ಹಿಂದುಳಿದಿದೆ ಮತ್ತು ಅದರ ಪರಮಾಣು ವಿದ್ಯುತ್ ಸ್ಥಾವರವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿಲ್ಲವೆಂಬ ಭಾವನೆಯನ್ನು ಸೃಷ್ಟಿಸಿತು.

ಚೆರ್ನೋಬಿಲ್ ನಗರವನ್ನು ಹೊರತುಪಡಿಸಿ, ಈ ಸಮಯದಲ್ಲಿ ಪೂರ್ವ ಉಕ್ರೇನ್‌ನಲ್ಲಿ ಸಾಕಷ್ಟು ಉದ್ವಿಗ್ನತೆಯಿದೆ. ಅಲ್ಲಿ ನಿರಂತರವಾಗಿ ಬಾಂಬ್ ಸ್ಫೋಟದ ಸದ್ದು ಕೇಳಿಬರುತ್ತಿವೆ. ಮಾರಿಯೋಪೋಲ್ ನಲ್ಲಿ ಶುಕ್ರವಾರ ಕ್ಷಿಪಣಿ ದಾಳಿ ನಡೆಸಲಾಗಿದ್ದು, ವಸತಿ ಕಟ್ಟಡವು ಹಾನಿಗೊಳಗಾಗಿದೆ. ಈ ಯುದ್ಧದಲ್ಲಿ ಇದುವರೆಗೆ ತಮ್ಮ ಅನೇಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದು, 169 ಮಂದಿಗೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಆರೋಗ್ಯ ಸಚಿವರು ತಿಳಿಸಿದ್ದಾರೆ.

ಬಂಕರ್‌ಗೆ ಸ್ಥಳಾಂತರಗೊಂಡ ಉಕ್ರೇನಿಯನ್ ಅಧ್ಯಕ್ಷ

ಪ್ರಸ್ತುತ ರಷ್ಯಾದ ಸೈನ್ಯವು ರಾಜಧಾನಿ ಕೀವ್‌ನಲ್ಲಿ ಉಕ್ರೇನಿಯನ್ ಸೈನ್ಯದೊಂದಿಗೆ ಹೋರಾಡುತ್ತಿದೆ. ದಾಳಿಯ ಭೀತಿಯಿಂದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯನ್ನು(Volodymyr Zelenskyy) ಗುಪ್ತಚರ ಬಂಕರ್‌ಗೆ ಸ್ಥಳಾಂತರಿಸಲಾಗಿದೆ. ರಷ್ಯಾದ ಪ್ರಬಲ ಸೈನ್ಯವು ಉಕ್ರೇನ್‌ನಲ್ಲಿ ವಿನಾಶವನ್ನುಂಟುಮಾಡುತ್ತಿದೆ. ಮತ್ತೊಂದೆಡೆ ಬಲದಲ್ಲಿ ರಷ್ಯಾಕ್ಕಿಂತ ದುರ್ಬಲವಾಗಿದ್ದರೂ ಉಕ್ರೇನ್ ಸೈನ್ಯವು ತೀವ್ರವಾಗಿ ಹೋರಾಡುತ್ತಿದೆ.

ರಷ್ಯಾದ ಟ್ಯಾಂಕ್‌ಗಳು ರಾಜಧಾನಿ ಕೀವ್‌ನ ಪ್ರದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ, ಉಕ್ರೇನಿಯನ್ ಸೈನಿಕನೊಬ್ಬ ಸ್ಫೋಟಕಗಳೊಂದಿಗೆ ಅಲ್ಲಿಯೇ ಇದ್ದನು. ರಷ್ಯಾದ ಟ್ಯಾಂಕ್‌ಗಳು ಈ ಪ್ರದೇಶಕ್ಕೆ ಪ್ರವೇಶಿಸದಂತೆ ತಡೆಯಲು ಆತ ಸರೋವರದ ಮೇಲಿನ ಸೇತುವೆಯ ಬಳೀ ಸ್ವತಃ ಸ್ಫೋಟಿಸಿಕೊಂಡಿದ್ದಾನೆಂದು ತಿಳಿದುಬಂದಿದೆ. ಈ ಉಕ್ರೇನಿಯನ್ ಸೈನಿಕ ತೋರಿದ ಧೈರ್ಯದ ಬಗ್ಗೆ ಸುದ್ದಿಯಾಗಿದೆ.   

ಉಕ್ರೇನಿಯನ್ ಸೈನಿಕರ ಶೌರ್ಯದ ಮತ್ತೊಂದು ಸ್ಟೋರಿ ಸ್ನೇಕ್ ಐಲ್ಯಾಂಡ್ನಿಂದ ಹೊರಬಿದ್ದಿದೆ. ಈ ದ್ವೀಪವು ಕ್ರೈಮಿಯಾ ಬಳಿ ಕಪ್ಪು ಸಮುದ್ರದಲ್ಲಿದೆ ಮತ್ತು ಇದನ್ನು ಝಮಿನಿ ದ್ವೀಪ ಎಂತಲೂ ಕರೆಯುತ್ತಾರೆ. ರಷ್ಯಾದ ಸೇನೆ ಇಲ್ಲಿ ದಾಳಿ ನಡೆಸಿದಾಗ ಒಟ್ಟು 13 ಉಕ್ರೇನ್ ಸೈನಿಕರು ಇಲ್ಲಿದ್ದರು. ದಾಳಿಗೆ ಮುನ್ನ ಎಚ್ಚರಿಕೆ ನೀಡಿದ್ದ ರಷ್ಯಾದ ಸೈನಿಕರು ಉಕ್ರೇನಿಯನ್ ಸೈನಿಕರು ಶರಣಾಗದಿದ್ದರೆ ಅವರನ್ನು ಕೊಲ್ಲಲಾಗುವುದು ಎಂದು ಹೇಳಿದರು. ಆದರೆ ಉಕ್ರೇನಿಯನ್ ಸೈನಿಕರು ಯಾವುದಕ್ಕೂ ಹೆದರದೆ ರಷ್ಯಾದ ಸೈನಿಕರಿಗೆ ಸವಾಲು ಹಾಕಿದ್ದಾರೆ. ಬಳಿಕ ಅವರನ್ನು ರಷ್ಯಾದ ಸೈನಿಕರು ಹತ್ಯೆ ಮಾಡಿದ್ದಾರೆಂದು ವರದಿಯಾಗಿದೆ.

ಇದನ್ನೂ ಓದಿ: Russia-Ukraine conflict: ಸಪ್ತ ಪ್ರಶ್ನೆಗಳ ಮೂಲಕ ರಷ್ಯಾ-ಉಕ್ರೇನ್ ಸಂಘರ್ಷದ ಇತಿಹಾಸವನ್ನು ತಿಳಿಯಿರಿ....

ರಷ್ಯಾದ 2 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಲಾಗಿದೆ

ಶುಕ್ರವಾರವೂ ರಷ್ಯಾದ 2 ಹೆಲಿಕಾಪ್ಟರ್‌ಗಳನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್(Ukraine) ಹೇಳಿಕೊಂಡಿದೆ. ಅಲ್ಲದೆ ಅವರ ರಾಕೆಟ್ ದಾಳಿಯನ್ನು ವಿಫಲಗೊಳಿಸಿದೆ. ಈಗ ಉಕ್ರೇನ್‌ನಲ್ಲಿ ಸಮರ ಕಾನೂನನ್ನು ಜಾರಿಗೆ ತರಲಾಗಿದ್ದು, ಇದರಡಿ 18 ರಿಂದ 60 ವರ್ಷ ವಯಸ್ಸಿನ ಪುರುಷ ನಾಗರಿಕರು ಸಹ ಸೇನೆಯೊಂದಿಗೆ ಯುದ್ಧಕ್ಕೆ ಹೋಗಬೇಕಾಗುತ್ತದೆ. ಅಲ್ಲಿನ ಜನಸಾಮಾನ್ಯರು ಸಂತೋಷದಿಂದ ತಮ್ಮ ದೇಶಕ್ಕಾಗಿ ಪ್ರಾಣ ಕೊಡಲು ಸಿದ್ಧರಾಗಿದ್ದಾರೆ.

ನಿಜವಾದ ಪ್ರಜೆ ಕೂಡ ದೇಶಕ್ಕಾಗಿ ತೆರಿಗೆಯನ್ನು ಪಾವತಿಸುತ್ತಾನೆ ಮತ್ತು ಅಗತ್ಯವಿದ್ದಾಗ ತನ್ನ ಪ್ರಾಣವನ್ನೂ ನೀಡುತ್ತಾನೆ ಎಂಬುದನ್ನು ಭಾರತದ ಜನರು ಉಕ್ರೇನ್ ಜನರಿಂದ ಕಲಿಯಬೇಕಾಗಿದೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ದೇಶದ ಗಡಿಗಳನ್ನು ರಕ್ಷಿಸುವುದು ಸೇನೆಯ ಕೆಲಸವೆಂದು ಭಾವಿಸಲಾಗಿದೆ. ಸಾಮಾನ್ಯ ನಾಗರಿಕರು ತಮ್ಮ ಭದ್ರತೆ ತಮ್ಮ ಮೂಲಭೂತ ಹಕ್ಕು ಅಂತಾ ಪರಿಗಣಿಸಿರುತ್ತಾರೆ.  

ಉಕ್ರೇನಿಯನ್ ಪುರುಷರು ತಮ್ಮ ಕುಟುಂಬಗಳು ಮತ್ತು ಮಕ್ಕಳನ್ನು ಬಸ್‌ಗಳಲ್ಲಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸುವ ಮತ್ತು ರಷ್ಯಾದ ಸೈನ್ಯದೊಂದಿಗೆ ಹೋರಾಡಲು ತಯಾರಿ ನಡೆಸುತ್ತಿರುವ ಅನೇಕ ಭಾವನಾತ್ಮಕ ಚಿತ್ರಗಳು ಹೊರಬಿದ್ದಿವೆ. ಈ ಎಲ್ಲಾ ಜನರಿಗೆ ಈಗ ಅವರು ತಮ್ಮ ಕುಟುಂಬಸ್ಥರನ್ನು ಮತ್ತೆ ಭೇಟಿಯಾಗಬಹುದೇ ಅಥವಾ ಇಲ್ಲವೇ ಎನ್ನುವುದೇ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕುಟುಂಬಗಳ ಸುರಕ್ಷತೆಗೆ ಒತ್ತು ನೀಡಲಾಗುತ್ತಿದೆ

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ಬಳಿಕ ಮನಕಲಕುವ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ತನ್ನ ಮಗಳು ಮತ್ತು ಹೆಂಡತಿಯನ್ನು ನಗರದಿಂದ ಸುರಕ್ಷಿತ ಸ್ಥಳಕ್ಕೆ ಕಳುಹಿಸಲು ತಂದೆಯೊಬ್ಬರು ಬಸ್ ಹತ್ತಿಸಲು ಬಂದಾಗ ಅವರ ಕಣ್ಣುಗಳು ತೇವವಾಗಿದ್ದವು. ಬಹುಶಃ ಇದರ ನಂತರ ಅವರು ತಮ್ಮ ಮಗಳು ಮತ್ತು ಹೆಂಡತಿಯನ್ನು ಮತ್ತೆ ನೋಡಬಹುದೇ ಅನ್ನೋ ಆಲೋಚನೆ ಮೂಡಿದೆ. ಯುದ್ಧದ ದುರಂತ ಮತ್ತು ಅದರ ನೋವು ಎಷ್ಟು ಭಯಾನಕವಾಗಿದೆ ಎಂದು ಒಂದು ಸಲ ಯೋಚಿಸಿನೋಡಿ. ಇಲ್ಲಿ ಉಕ್ರೇನ್‌ನ ಸಾಮಾನ್ಯ ಪ್ರಜೆಯಾಗಿರುವ ತಂದೆಯೇ ತನ್ನ ದೇಶವನ್ನು ರಕ್ಷಿಸಲು ತನ್ನ ಕುಟುಂಬದಿಂದ ಬೇರ್ಪಡಬೇಕಾಯಿತು ಮತ್ತು ಈಗ ಈ ಬಿಕ್ಕಟ್ಟಿನಲ್ಲಿ ತನ್ನ ದೇಶದ ಸ್ವಾಭಿಮಾನಕ್ಕಾಗಿ ಹೋರಾಡಬೇಕಾಗಿದೆ.

ಇದನ್ನೂ ಓದಿ: Russia-Ukraine War: ಉಕ್ರೇನ್ ಮೇಲೆ ರಷ್ಯಾ ದಾಳಿಯ ನಡುವೆ 'ಉಕ್ರೇನ್ ಅನ್ನು ಆಕ್ರಮಿಸುವುದಿಲ್ಲ' ಎಂದ Vladimir Putin

ಈಗ ನೀವೇ ಊಹಿಸಿ ನಮ್ಮ ದೇಶದಲ್ಲಿ(ಭಾರತದಲ್ಲಿ) ಇಂತಹ ಎಷ್ಟು ಜನರನ್ನು ನೀವು ಕಾಣಬಹುದು? ಯಾರು ತಮ್ಮ ದೇಶವನ್ನು ರಕ್ಷಿಸಲು ತಮ್ಮ ಕುಟುಂಬವನ್ನು ಹೀಗೆ ಬಿಡಲು ಸಿದ್ಧರಾಗುತ್ತಾರೆ? ಬಹುತೇಕರು ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ದೇಶ ರಕ್ಷಿಸುವ ಜವಾಬ್ದಾರಿಯು ಸೈನ್ಯ ಮತ್ತು ಭದ್ರತಾ ಪಡೆಗಳ ಸೈನಿಕರ ಮೇಲಿದ್ದು, ನಾವೇಕೆ ಮನೆ ಮತ್ತು ಕುಟುಂಬವನ್ನು ತೊರೆಯಬೇಕು ಅಂತಾ ಕೇಳುತ್ತಾರೆ. ಆದರೆ ಉಕ್ರೇನ್‌ನಲ್ಲಿ ಈ ರೀತಿಯ ಪರಿಸ್ಥಿತಿ ಇಲ್ಲ. ಉಕ್ರೇನ್‌ನಲ್ಲಿರುವ ಜನರು ಹೃದಯವನ್ನು ಗಟ್ಟಿ ಮಾಡಿಕೊಂಡು ತಮ್ಮ ಕುಟುಂಬದಿಂದ ಬೇರ್ಪಡುತ್ತಿದ್ದಾರೆ ಮತ್ತು ಯಾವುದೇ ತರಬೇತಿಯಿಲ್ಲದೆ ರಷ್ಯಾದ ವಿರುದ್ಧ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋರಾಡಲು ಸಿದ್ಧರಾಗಿದ್ದಾರೆ.

ಉಕ್ರೇನ್ ನಾಗರಿಕರಿಗೆ ರೈಫಲ್ ಗಳ ವಿತರಣೆ

ಶುಕ್ರವಾರವೇ ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ನಾಗರಿಕರಿಗೆ 10,000 ಅಸಾಲ್ಟ್ ರೈಫಲ್‌ಗಳನ್ನು ನೀಡಲಾಗಿದೆ. ಅಂದರೆ ಈ ಬಿಕ್ಕಟ್ಟಿನಲ್ಲಿ ಈಗ ಉಕ್ರೇನಿಯನ್ ಸೈನ್ಯವು ರಷ್ಯಾದೊಂದಿಗೆ ಹೋರಾಡುತ್ತಿಲ್ಲ. ಆದರೆ ಉಕ್ರೇನ್‌ನ ಸಾಮಾನ್ಯ ನಾಗರಿಕರು ಅಂದರೆ ನಮ್ಮಂತಹ ಜನರು ಸಹ ದೇಶಕ್ಕಾಗಿ ಸರ್ವವನ್ನೂ ತ್ಯಾಗ ಮಾಡಲು ಸಿದ್ಧರಾಗಿದ್ದಾರೆ.   

ಆದರೆ ಉಕ್ರೇನ್ ತನ್ನ ನಾಗರಿಕರಿಗೆ ಶಸ್ತ್ರಾಸ್ತ್ರಗಳನ್ನು ನೀಡುತ್ತಿದೆ ಮತ್ತು ಈ ಯುದ್ಧದಲ್ಲಿ ಮಾನವ ಗುರಾಣಿಯಾಗಿ ಬಳಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ರಷ್ಯಾದ ಸೈನ್ಯವು ಉಕ್ರೇನಿಯನ್ ಸೈನ್ಯದೊಂದಿಗೆ ಸ್ಪರ್ಧಿಸುತ್ತಿಲ್ಲ, ಆದರೆ ಅದು ರಾಷ್ಟ್ರೀಯವಾದಿ ನಿಯೋ ನಾಜಿ ಮತ್ತು ರಾಷ್ಟ್ರೀಯತಾವಾದಿ ಗುಂಪುಗಳನ್ನು ಎದುರಿಸುತ್ತಿದೆ ಎಂದು ಅವರು ಹೇಳುತ್ತಾರೆ. ಉಕ್ರೇನ್ ರಾಜಧಾನಿ ಕೀವ್ ಮತ್ತು ಇತರ ಪ್ರದೇಶಗಳಲ್ಲಿ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಪ್ರಸ್ತುತ ಬಂಕರ್‌ಗಳು ಮತ್ತು ಸುರಂಗಮಾರ್ಗಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಜನರು ಬಂಕರ್‌ಗಳಲ್ಲಿ ಆಶ್ರಯ ಪಡೆಯಬೇಕಾಯಿತು

ಮಾರಿಯೋಪೋಲ್ ನಲ್ಲಿರುವ ಬಂಕರ್‌ನೊಳಗೆ ಅಡಗಿರುವ ಕುಟುಂಬಗಳ ಕಥೆ ಕರುಣಾಜನಕವಾಗಿದೆ. ಅಲ್ಲಿ 4 ವರ್ಷದ ಬಾಲಕಿ ಕಣ್ಣೀರು ಸುರಿಸಿದ್ದಾಳೆ. ಯುದ್ಧದ ಪರಿಸ್ಥಿತಿಯಿಂದ ಆ ಹುಡುಗಿಗೆ ಏನಾಗಿರಬೇಡವೆಂದು ಯೋಚಿಸಿ? ಆ ಹುಡುಗಿಗೆ ಈ ಯುದ್ಧ ಬೇಕಿತ್ತಾ ಅಥವಾ ತನ್ನ ದೇಶದಲ್ಲಿ ತನ್ನ ಮನೆಯಲ್ಲಿ ಏನಾಗುತ್ತಿದೆ ಎಂದು ಆಕೆಗೆ ತಿಳಿದಿಲ್ಲವೇ ಎಂಬ ಪ್ರಶ್ನೆಯೂ ಮೂಡಿದೆ.

ನಮ್ಮ ದೇಶದಲ್ಲಿ ತುಂಬಾ ಜನರಿಗೆ ರಾಷ್ಟ್ರೀಯ ಸಮಸ್ಯೆಗಳ ಗಂಭೀರತೆ(Russia Ukraine War) ಅರ್ಥವಾಗುವುದಿಲ್ಲ. ಚೀನಾ ಭಾರತ ಸರ್ಕಾರದ ಶತ್ರು ಎಂದು ಅವರು ಭಾವಿಸುತ್ತಾರೆ ಮತ್ತು ಪಾಕಿಸ್ತಾನ ಮತ್ತು ಅಲ್ಲಿಂದ ಬರುವ ಭಯೋತ್ಪಾದಕರ ವಿರುದ್ಧ ಹೋರಾಡುವ ಜವಾಬ್ದಾರಿ ಸೇನೆಗೆ ಮಾತ್ರ ಇದೆ ಎಂಬು ಭಾವಿಸಿರುತ್ತಾರೆ. ಬೆಳಗಿನ ದಿನಪತ್ರಿಕೆಯಲ್ಲಿ ಮಾತ್ರ ಈ ಬಗ್ಗೆ ಸುದ್ದಿ ಓದಿ ದಿನನಿತ್ಯದ ಜೀವನ ನಡೆಸುತ್ತಿದ್ದಾರೆ. ಆದರೆ ಉಕ್ರೇನ್‌ನ ಈ ನಾಗರಿಕರ ನೋವನ್ನು ಅರ್ಥಮಾಡಿಕೊಳ್ಳಿ, ಒಂದು ದೇಶವು ದಾಳಿ ಮಾಡಿದಾಗ ಇಡೀ ದೇಶವು ಹೇಗೆ ಹೋರಾಡಬೇಕು ಎಂಬುದನ್ನು ಅದು ಜಗತ್ತಿನ ಮುಂದೆ ತೋರಿಸಿಕೊಡುತ್ತಿದೆ.

ಯುದ್ಧವನ್ನು ನಿಲ್ಲಿಸಲು ಪುಟಿನ್ ಗೆ ಒತ್ತಾಯ

ಮತ್ತೊಂದೆಡೆ ಕಳೆದ 24 ಗಂಟೆಗಳಲ್ಲಿ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿಯವರ ಪರಿಸ್ಥಿತಿ ಬದಲಾಗಿದೆ. ಗುರುವಾರ ರಷ್ಯಾ ದಾಳಿ ಬಳಿಕ ಪತ್ರಿಕಾಗೋಷ್ಠಿ ನಡೆಸಲು ಬಂದಿದ್ದ ಅವರು ಕೋಟ್ ಧರಿಸಿದ್ದರು. ಆದರೆ ಇಂದು ಪತ್ರಿಕಾಗೋಷ್ಠಿಗೆ ಬಂದಾಗ ಟೀಶರ್ಟ್‌ನಲ್ಲಿಯೇ ಇದ್ದರು. ಝೆಲೆನ್ಸ್ಕಿಯ ಮೇಲೆ ಎಷ್ಟು ಒತ್ತಡವಿದೆ ಎಂಬುದನ್ನು ಇದರಿಂದ ನೀವು ಅರ್ಥಮಾಡಿಕೊಳ್ಳಬಹುದು ಮತ್ತು ಈ ಒತ್ತಡವು ಅವರ ಇಂದಿನ ಹೇಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimir Putin)ಅವರಿಗೆ ಮನವಿ ಮಾಡಿದ್ದು, ಅವರೊಂದಿಗೆ ಮಾತನಾಡಲು ಇನ್ನೂ ಕಾಯುತ್ತಿದ್ದಾರೆ. ಈ ಯುದ್ಧವನ್ನು ಇಲ್ಲಿಗೆ ನಿಲ್ಲಿಸಬೇಕೆಂದು ಅವರು ಬಯಸುತ್ತಿದ್ದಾರೆಂದು ವರದಿಯಾಗಿದೆ.

ಇದಲ್ಲದೇ ಈಗ ಝೆಲೆನ್ಸ್ಕಿ ಕೂಡ ನ್ಯಾಟೋ ದೇಶಗಳ ಬಗ್ಗೆ ಮನಸೋತಿದ್ದಾರೆ. ಶುಕ್ರವಾರ ನ್ಯಾಟೋ ದೇಶಗಳು ದೊಡ್ಡ ಭರವಸೆಗಳನ್ನು ನೀಡಿವೆ ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಆದರೆ ನ್ಯಾಟೋ ದೇಶಗಳು ಇನ್ನೂ ಸಹಾಯಕ್ಕೆ ಬಂದಿಲ್ಲ. ಮತ್ತೊಂದೆಡೆ ನ್ಯಾಟೋ ದೇಶಗಳು ಯುದ್ಧದ 2ನೇ ದಿನದ ಚಮತ್ಕಾರವನ್ನು ಮೌನವಾಗಿ ನೋಡುತ್ತಿದ್ದವು. ಮಿಲಿಟರಿ ಸಹಾಯವನ್ನು ಹೊರತುಪಡಿಸಿ ಸಹಾಯ ಮಾಡಲು ಸಿದ್ಧ ಎಂದು ಅವರು ಉಕ್ರೇನ್‌ಗೆ ಹೇಳುತ್ತಲೇ ಇದ್ದರು. ಅಂದರೆ ಅವರು ಉಕ್ರೇನ್‌ಗೆ ನೈತಿಕ ಬೆಂಬಲವನ್ನು ನೀಡುತ್ತಿದ್ದಾರೆ, ಆದರೆ ಮಿಲಿಟರಿ ಸಹಾಯವನ್ನು ನೀಡಲು ಸಿದ್ಧರಿಲ್ಲ.

ಇದನ್ನೂ ಓದಿ: ರಷ್ಯಾದಿಂದ ರಾಜಧಾನಿ ಕೀವ್ ಉಳಿಸಲು ಹೆಣಗಾಡುತ್ತಿರುವ ಉಕ್ರೇನ್ ರಸ್ತೆಗಳ ಸ್ಥಿತಿ ಹೇಗಿದೆ..?

ಉಕ್ರೇನ್‌ಗೆ ಶರಣಾಗುವಂತೆ ರಷ್ಯಾ ಕೇಳುತ್ತಿದೆ

ಉಕ್ರೇನ್ ಶರಣಾಗುವವರೆಗೂ ಈ ಯುದ್ಧ ನಿಲ್ಲುವುದಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟಪಡಿಸಿದ್ದಾರೆ. ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸುವ ದೇಶಗಳಿಗೆ ಪುಟಿನ್ ಅವರು ಬಲವಾದ ಪದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ರಷ್ಯಾದ ಕ್ರಮದ ಮಧ್ಯದಲ್ಲಿ ಬರುವ ದೇಶಗಳ ವಿರುದ್ಧವೂ ಇಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದೂ ಹೇಳಿದ್ದಾರೆ, ಇದನ್ನು ಇತಿಹಾಸವೂ ನೆನಪಿಸಿಕೊಳ್ಳುತ್ತದೆ.

ಈಗ ಯೋಚಿಸಿ ಯುದ್ಧ(Russia Ukraine Crisis) ಪ್ರಾರಂಭವಾಗಿ 2 ದಿನಗಳು ಕಳೆದಿವೆ, ಹಾಗಾದರೆ ಪ್ರಪಂಚದ ದೊಡ್ಡ ಮಹಾಶಕ್ತಿಗಳು ಏನು ಮಾಡುತ್ತಿವೆ? ಪೋಲೆಂಡ್, ಬ್ರಿಟನ್ ಮತ್ತು ಫಿನ್‌ಲ್ಯಾಂಡ್‌ನಂತಹ ದೇಶಗಳು ಶುಕ್ರವಾರ ಉಕ್ರೇನ್‌ಗೆ ಹಣಕಾಸಿನ ನೆರವು ಘೋಷಿಸಿವೆ. ಫಿನ್‌ಲ್ಯಾಂಡ್ 50 ಮಿಲಿಯನ್ ಡಾಲರ್ ಅಂದರೆ 375 ಕೋಟಿ ರೂ. ಮತ್ತು ವಿಶ್ವಸಂಸ್ಥೆ 20 ಮಿಲಿಯನ್ ಡಾಲರ್ ಅಂದರೆ 150 ಕೋಟಿ ರೂ. ನೀಡುವುದಾಗಿ ಘೋಷಿಸಿದೆ. ಇದಲ್ಲದೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಕೂಡ ವರದಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News