ಬೀಜಿಂಗ್: ಚೀನಾದ ಕಮ್ಯುನಿಸ್ಟ್ ಪಕ್ಷದ ಮಾಜಿ ಉನ್ನತ ಅಧಿಕಾರಿಯ ವಿರುದ್ಧ ಲೈಂಗಿಕ ಕಿರುಕುಳ(Sexual Harrasment) ಆರೋಪ ಮಾಡಿದ್ದ ಖ್ಯಾತ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್(Peng Shuai) ನಿಗೂಢವಾಗಿ ಕಣ್ಮರೆಯಾಗಿ 15 ದಿನಗಳ ಮೇಲಾಯ್ತು. ಆಕೆಯ ಬಗ್ಗೆ ಒಂದೇ ಒಂದು ಸುದ್ದಿಯೇ ಇಲ್ಲ. ಆಕೆ ಎಲ್ಲಿದ್ದಾಳೆ..? ಏನು ಮಾಡುತ್ತಿದ್ದಾಳೆ. ಇದ್ದಕ್ಕಿದ್ದಂತೆ ಕಣ್ಮರೆಯಾದ ಆಕೆಗೆ ಏನಾಯ್ತು..? ಅನ್ನೋ ಪ್ರಶ್ನೆಗಳಿಗೆ ಉತ್ತರವೇ ಸಿಗುತ್ತಿಲ್ಲ. ಚೀನಾದಲ್ಲಿ ಇತ್ತೀಚಿಗೆ ಸೆಲೆಬ್ರಿಟಿಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.
ಚೀನಾ ಅಧ್ಯಕ್ಷ ಜಿನ್‌ಪಿಂಗ್(Xi Jinping) ನೇತೃತ್ವದ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಯಾರೇ ಮಾತನಾಡಲಿ ಅಂತವರು ನಿಗೂಢವಾಗಿ ಕಾಣೆಯಾಗಿಬಿಡುತ್ತಾರೆ. ಇದರಲ್ಲಿ ಸಿನಿಮಾ ಕ್ಷೇತ್ರದವರು, ಉದ್ಯಮಿಗಳು ಮತ್ತು ಇತರ ಸೆಲೆಬ್ರಿಟಿಗಳು(China Celebrities)ಇದ್ದಾರೆ. ಇವರ ನಿಗೂಢ ನಾಪತ್ತೆಗೆ ಯಾವೊಬ್ಬ ಚೀನೀ ಅಧಿಕಾರಿಯೂ ಸ್ಪಷ್ಟನೆ ನೀಡಿಲ್ಲ.
ಇದನ್ನೂ ಓದಿ: Taliban: ಅಫ್ಘಾನ್ ಹುಡುಗಿಯರಿಗೆ ಸಿಹಿ ಸುದ್ದಿ, ಭೀಕರ ದೌರ್ಜನ್ಯದ ನಡುವೆ ಉತ್ತಮ ಕೆಲಸ ಮಾಡಿದ ತಾಲಿಬಾನ್
ಪೆಂಗ್ ಶುವಾಯ್ ಗೆ ಏನಾಯಿತು?
ಚೀನಾದಲ್ಲಿ ಈಗ ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವ ಖ್ಯಾತ ಟೆನಿಸ್ ಆಟಗಾರ್ತಿ ಪೆಂಗ್ ಶುವಾಯ್(Peng Shuai)ಗೆ ಏನಾಯ್ತು ಅನ್ನೋದರ ಬಗ್ಗೆ ಸುಳಿವೇ ಇಲ್ಲ. ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದ ಪೆಂಗ್ ಅಕ್ಟೋಬರ್ 2ರಿಂದ ನಾಪತ್ತೆಯಾಗಿದ್ದಾಳೆ. ಚೀನಾದ ಮಾಜಿ ಉಪಾಧ್ಯಕ್ಷ ಮತ್ತು ಕಮ್ಯುನಿಷ್ಟ ಪಕ್ಷದ ಅತ್ಯಂತ ಶಕ್ತಿಶಾಲಿ ಪೊಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸದಸ್ಯರಾದ ಜಾಂಗ್ ಗೌಲಿ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪೆಂಗ್ ಆರೋಪ ಮಾಡಿದ್ದರು. ಚೀನಾದ ಅಧಿಕಾರಿಗಳು ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಚಾಂಪಿಯನ್ ಪೆಂಗ್ ಅವರ ಆನ್‌ಲೈನ್ ಆರೋಪಗಳಿಗೆ ಯಾವುದೇ ಗಮನ ಹರಿಸಲಿಲ್ಲ. ಟೆನಿಸ್ ಪ್ರಪಂಚ ಮತ್ತು ಜಾಗತಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಚೀನೀ ಅಧಿಕಾರಿಗಳು ಇದಕ್ಕೆ ಸೊಪ್ಪು ಹಾಕಿಲ್ಲ. ಇದ್ದಕ್ಕಿದ್ದಂತೆ ಕಾಣೆಯಾಗಿರುವ ಪೆಂಗ್ ಗಾಗಿ ಆಕೆಯ ಕುಟುಂಬಸ್ಥರು ಸೇರಿದಂತೆ ಅನೇಕು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಆಕೆಯ ಸುಳಿವೇ ಸಿಗುತ್ತಿಲ್ಲ.
ಅಗ್ರ ಟೆನಿಸ್ ಆಟಗಾರ್ತಿಯ ನಾಪತ್ತೆ ಆತಂಕ ಮೂಡಿಸಿದೆ
2013ರಲ್ಲಿ ವಿಂಬಲ್ಡನ್ ಮತ್ತು 2014ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಮಹಿಳೆಯರ ಡಬಲ್ಸ್ ನಲ್ಲಿ ಗೆದ್ದಿದ್ದ ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಪೆಂಗ್ (35) ಅವರು 3 ಬಾರಿ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ್ದಾರೆ. ವಿಂಟರ್ ಗೇಮ್ಸ್ ಫೆಬ್ರವರಿ 4ರಿಂದ ಬೀಜಿಂಗ್‌ನಲ್ಲಿ ಪ್ರಾರಂಭವಾಗಲಿದ್ದು, ಈ ಹಿನ್ನೆಲೆ ಪೆಂಗ್ ಕಣ್ಮರೆಯಾಗುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿಯೂ ಪ್ರಶ್ನಿಸಲಾಗುತ್ತಿದೆ. ನ.2 ರಂದು ಪೆಂಗ್ ಸುದೀರ್ಘ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದರು. 3 ವರ್ಷಗಳ ಹಿಂದೆ ಜಾಂಗ್ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಬಂಧ ಹೊಂದಲು ಪ್ರಯತ್ನಿಸಿದ್ದ. ಆದರೆ ಇದಕ್ಕೆ ಪೆಂಗ್ ಪ್ರತಿರೋಧ ಒಡ್ಡಿ ಪದೇ ಪದೇ ನಿರಾಕರಿಸಿದ್ದಳು. ಆದಾಗ್ಯೂ ಈ ಪೋಸ್ಟ್ ಅನ್ನು ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊದಲ್ಲಿದಿಂದ ತೆಗೆದುಹಾಕಲಾಯಿತು. ಆದರೆ ಇದರ ಸ್ಕ್ರೀನ್‌ಶಾಟ್‌ಗಳು ಚೀನಾದಲ್ಲಿ ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: Corona ವಿರುದ್ಧದ ಹೋರಾಟದಲ್ಲಿ ಮಹತ್ವದ ಹೆಜ್ಜೆ ಇಟ್ಟ US, Covid-19 Vaccine Booster Dose ನೀಡಲು ಅನುಮೋದನೆ
ಚೀನಾದಲ್ಲಿ ಸೆಲೆಬ್ರಿಟಿಗಳು ಕಣ್ಮರೆಯಾಗಲು ಕಾರಣವೇನು?
ಚೀನಾದ ಆಡಳಿತವು ಕಮ್ಯುನಿಸ್ಟ್ ಪಕ್ಷದ ಹಿಡಿತದಲ್ಲಿದೆ. ಪತ್ರಿಕಾ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರದ ನೇರ ನಿಯಂತ್ರಣವಿದೆ. ಇಂತಹ ಪರಿಸ್ಥಿತಿಯಲ್ಲಿ ಚೀನೀ ಸರ್ಕಾರದ ವಿರುದ್ಧ ಯಾರೇ ಮಾತನಾಡಿ ಅಂತವರ ವಿರುದ್ಧ ಕ್ಸಿ ಜಿನ್ ಪಿಂಗ್ ಸರ್ಕಾರ ಕಾನೂನು ಕ್ರಮ ಜರುಗಿಸುತ್ತದೆ. ಯಾರಾದರೂ ಸೆಲೆಬ್ರಿಟಿಗಳು ನಾಪತ್ತೆಯಾದರೂ ಇಲ್ಲಿ ಸುದ್ದಿಯಾಗುವುದೇ ಇಲ್ಲ. ಪೆಂಗ್‌ಗೆ ಮುಂಚೆಯೇ ಚೀನಾದ ಟೆಕ್ ದೈತ್ಯ ಅಲಿಬಾಬಾ ಸಂಸ್ಥಾಪಕ ಹಾಗೂ ಕೋಟ್ಯಾಧಿಪತಿ ಜಾಕ್ ಮಾ(Jack Maa) ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಇದಲ್ಲದೆ ಜನಪ್ರಿಯ ನಟಿ ಫ್ಯಾನ್ ಬಿಂಗ್‌ಬಿಂಗ್(Fan Bingbing) ಸೇರಿದಂತೆ ಅನೇಕ ಪ್ರಸಿದ್ಧ ಜನರು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾರೆ..
ಚೀನಾದಲ್ಲಿ ಸೆಲೆಬ್ರಿಟಿಗಳ ಕಣ್ಮರೆ ಸಾಮಾನ್ಯ
ಜಾಕ್ ಮಾ(Jack Maa) ಅವರು ಅಕ್ಟೋಬರ್ 2020ರಲ್ಲಿ ಮಾಡಿದ ತಮ್ಮ ಭಾಷಣದಲ್ಲಿ ಚೀನಾ(China)ದ ಆಡಳಿತ ಮುಖ್ಯಸ್ಥ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಟೀಕಿಸಿದ್ದರು. ಅಂದಿನಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 2 ತಿಂಗಳ ನಂತರ ಜನವರಿ 2021ರಲ್ಲಿ ಅವರು ಅಲಿಬಾಬಾ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು. ಆದರೆ ಅವರು ಕಣ್ಮರೆಯಾದ ಬಗ್ಗೆ ಏನನ್ನೂ ಹೇಳಲಿಲ್ಲ. ಅಂತೆಯೇ ಸುಮಾರು 3 ತಿಂಗಳ ಕಾಲ ಫ್ಯಾನ್ ಬಿಂಗ್‌ಬಿಂಗ್ ನಾಪತ್ತೆಯಾದರು. ನಂತರ ತೆರಿಗೆ ಅಧಿಕಾರಿಗಳು ಅವರ ಕಂಪನಿಗಳಿಗೆ 130 ಮಿಲಿಯನ್ ಅಮೆರಿಕನ್ ಡಾಲರ್ ತೆರಿಗೆ ಮತ್ತು ದಂಡ ವಿಧಿಸಿದ್ದರು ಎಂದು ಸುದ್ದಿಯಾಗಿತ್ತು. ಇದಲ್ಲದೆ 2017ರಲ್ಲಿ ಮಹಿಳಾ ಉದ್ಯಮಿ ಡುವಾನ್ ವೈಹಾಂಗ್ ಕೂಡ ನಾಪತ್ತೆಯಾಗಿದ್ದರು. ಕೊರೊನಾವನ್ನು ಸರಿಯಾಗಿ ನಿಭಾಯಿಸದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಟೀಕಿಸಿದ ನಂತರ ರಿಯಲ್ ಎಸ್ಟೇಟ್ ಉದ್ಯಮಿ ರೆನ್ ಝಿಕಿಯಾಂಗ್ ಮಾರ್ಚ್ 2020 ರಲ್ಲಿ ಕಣ್ಮರೆಯಾದರು. ನಂತರ ಅದೇ ವರ್ಷದಲ್ಲಿ ಅವರು ಭ್ರಷ್ಟಾಚಾರಕ್ಕಾಗಿ 18 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.