ದೇಶದೆಲ್ಲೆಡೆ ಸೋತಿದ್ದರೂ ಸಹ ಕಾಂಗ್ರೆಸ್ ಈ ಪರಿ ವಿಚಲಿತಗೊಂಡಿರಲಿಲ್ಲ- ಮೋದಿ

ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿಯಾದರೂ ತಮ್ಮ ತಮ್ಮ ಜೇಬುಗಳನ್ನು ತುಂಬಿಕೊಳ್ಳುವುದು ಕಾಂಗ್ರೆಸ್ ಸಂಸ್ಕೃತಿ. 

Last Updated : May 5, 2018, 02:44 PM IST
ದೇಶದೆಲ್ಲೆಡೆ ಸೋತಿದ್ದರೂ ಸಹ ಕಾಂಗ್ರೆಸ್ ಈ ಪರಿ ವಿಚಲಿತಗೊಂಡಿರಲಿಲ್ಲ- ಮೋದಿ title=

ಗದಗ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಗದಗ ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇಶದೆಲ್ಲೆಡೆ ಕಾಂಗ್ರೆಸ್ ಮಣ್ಣುಮುಕ್ಕಿದ್ದರೂ ಸಹ ಈ ಪರಿ ವಿಚಲಿತಗೊಂಡಿರಲಿಲ್ಲ. ಆದರೆ, ಕರ್ನಾಟಕದ ಸೋಲು ಅವರಿಗೆ ಅರಗಿಸಿಕೊಳ್ಳಲು ಆಗುವುದಿಲ್ಲ. ಏಕೆಂದರೆ, ಇಲ್ಲಿಂದ ಬರುತ್ತಿರುವ ಆದಾಯ ನಿಂತು ಹೋದರೆ, ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರನ್ನು ಸಂತೃಪ್ತಗೊಳಿಸುವದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ ಎಂದು ಮೋದಿ ಕಾಂಗ್ರೆಸ್ ಅನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದರು.

ಮೇ 15 ರಂದು ಕಾಂಗ್ರೆಸ್ ಸೋತ ನಂತರ, ಕಾಂಗ್ರೆಸ್ INC ಬದಲು,  PPP ಕಾಂಗ್ರೆಸ್ ಅಂದ್ರೆ "ಪಂಜಾಬ್, ಪುಡಿಚರಿ, ಪರಿವಾರ" ಪಾರ್ಟಿಯಾಗಿ ಬದಲಾಗಲಿದೆ ಎಂದು ಮೋದಿ ಇದೇ ವ್ಯಂಗ್ಯವಾಡಿದರು.

ಕಪ್ಪತಗುಡ್ಡ ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ ಷಡ್ಯಂತ್ರ
ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿಯಾದರೂ ತಮ್ಮ ತಮ್ಮ ಜೇಬುಗಳನ್ನು ತುಂಬಿಕೊಳ್ಳುವುದು ಕಾಂಗ್ರೆಸ್ ಸಂಸ್ಕೃತಿ. ಕಪ್ಪತಗುಡ್ಡ ಅರಣ್ಯಗಳಲ್ಲಿ ಅಕ್ರಮ ಗಣಿಗಾರಿಕೆ  ಮಾಡಬಹುದು ಅಂತ ಇಲ್ಲಿನ ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಾದ ಕೂಡಲೇ ಗಣಿಗಾರಿಕೆ ಆರಂಭಿಸಲು ಷಡ್ಯಂತ್ರ ರೂಪಿಸಿತು. ಆದರೆ ಯಾವಾಗ ಬಿಜೆಪಿ ಮತ್ತು ಇಲ್ಲಿನ ಜನರು ಅದನ್ನು ವಿರೋಧಿಸಿದರೋ, ಒಂದೇ ವರ್ಷದೊಳಗೆ ಕಾಂಗ್ರೆಸ್ಸಿನ ಆ ಅಕ್ರಮ ಗಣಿಗಾರಿಕೆಯ ಆಟ ನಿಂತಿತು ಎಂದು ಮೋದಿ ಹೇಳಿದರು.

ಮಹದಾಯಿ ಹೆಸರಿನಲ್ಲಿ ಕಾಂಗ್ರೆಸ್ ಜನರನ್ನು ದಾರಿತಪ್ಪಿಸುತ್ತಿದೆ
ಮಹದಾಯಿ ವಿಷಯದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಗೊಂದಲದ ಎಳೆಎಳೆಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತೇನೆ. ಗೋವಾದಲ್ಲಿ ಸೋನಿಯಾ ಗಾಂಧಿಯವರು 2007 ರಲ್ಲಿ "ಯಾವುದೇ ಕಾರಣಕ್ಕೂ ಮಹದಾಯಿ ನೀರಿನ ಒಂದು ಹನಿಯನ್ನೂ ಕೂಡ ಕರ್ನಾಟಕಕ್ಕೆ ಹರಿಸುವುದಿಲ್ಲ" ಎಂಬ ಮಾತು ಮರೆತುಹೋಯಿತೇ ಮುಖ್ಯಮಂತ್ರಿಗಳೇ? ಎಂದು ಮೋದಿ ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ಮಹದಾಯಿ ಹೆಸರಿನಲ್ಲಿ ಕಾಂಗ್ರೆಸ್ ಜನರನ್ನು ದಾರಿತಪ್ಪಿಸುತ್ತಿದೆ. ಕಾಂಗ್ರೆಸ್ ಏನು ಮಾಡುತ್ತಿದೆ ಎಂಬುದು ಕಾಂಗ್ರೆಸಿನ ನಿಜವಾದ ಪಾತ್ರವನ್ನು ತೋರಿಸುತ್ತಿದೆ. ಜನರು ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಮೋ ತಿಳಿಸಿದರು.

Trending News