ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ನಟ ಜಗ್ಗೇಶ್ 'ಇದು ಬಯಸದೆ ಬಂದ ಭಾಗ್ಯ' ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತೀಯ ಜನತಾ ಪಕ್ಷದ ಎಲ್ಲಾ ಮುಖಂಡರೂ ನನ್ನಲ್ಲಿ ಧೈರ್ಯ ತುಂಬಿ, ಟಿಕೆಟ್ ಬಯಸದೆ ಇದ್ದ ನನಗೆ ಯಶವಂತಪುರದ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡಿ ಹಾರೈಸಿದ್ದಾರೆ. ನೀವೂ ಹಾರೈಸಿ, ಜನಮೆಚ್ಚುವ, ಶ್ರೀ ರಾಯರು ಮೆಚ್ಚುವ ಕೆಲಸಗಳನ್ನು ಮಾಡುತ್ತೇನೆ ಎಂದಿದ್ದಾರೆ.
ಸ್ನೇಹಿತರೆ ಭಾ.ಜ.ಪ ಪಕ್ಷದ ಎಲ್ಲಾ ಮುಖಂಡರು ದೈರ್ಯತುಂಬಿ ಬಯಸದೆ ಇದ್ದ ನನ್ನನ್ನು ಯಶವಂತಪುರದ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡಿ ಹಾರೈಸಿದ್ದಾರೆ..ನನ್ನ ಪ್ರೀತಿ ಪಾತ್ರರಾದ ಅಭಿಮಾನಿಗಳಿಗೆ ಹಾಗು ಮಾಧ್ಯಮದ ಮಿತ್ರರಿಗೆ ಮಾಹಿತಿ..ಹರಸಿ ಬಂಧುಗಳೆ..ಹೃದಯದಿಂದ ರಾಯರು ಜನ ಮೆಚ್ಚುವಂತೆ ಕಾರ್ಯಮಾಡುವೆ..
ಜೈಹಿಂದ್.. pic.twitter.com/eUlOvtd1pg— ನವರಸನಾಯಕ ಜಗ್ಗೇಶ್ (@Jaggesh2) April 23, 2018
ರಾಜ್ಯ ವಿಧಾನಸಭೆ ಚುನಾವಣೆಗೆ ಇಂದು ಬಿಜೆಪಿ ಪ್ರಕಟಿಸಿದ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ನಟ ಜಗ್ಗೇಶ್'ಗೆ ಟಿಕೆಟ್ ನೀಡಲಾಗಿದೆ. ಆದರೆ, ಇದುವರೆಗೂ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದೇ ಹೇಳುತ್ತಿದ್ದ ಜಗ್ಗೇಶ್ ಗೆ ನಿಜಕ್ಕೂ ಇದು ಬಯಸದೆ ಬಂದ ಭಾಗ್ಯವೇ ಸರಿ.
2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ತವರೂರಾದ ತುರುವೇಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಜಗ್ಗೇಶ್ ಜಯಗಳಿಸಿದ್ದರು. ನಂತರ ಕೆಲವು ಕಾರಣಗಳಿಂದಾಗಿ ಜಗ್ಗೇಶ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆದರೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಜಗ್ಗೇಶ್ ಎಲ್ಲಿಯೂ ವ್ಯಕ್ತಪಡಿಸಿರಲಿಲ್ಲ. ಆದರೀಗ ಬಿಜೆಪಿ ಮುಖಂಡರ ಒತ್ತಾಯದ ಮೇರೆಗೆ ಅನಿವಾರ್ಯವಾಗಿ ಸ್ಪರ್ಧಿಸಬೇಕಿದೆ.
ಈ ಹಿಂದೆ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದ್ದ ಸಂಸದೆ ಶೋಭಾ ಕರಂದ್ಲಾಜೆಗೆ ಬಿಜೆಪಿ ಮತ್ತೊಮ್ಮೆ ಸ್ಪರ್ಧಿಸಲು ಅವಕಾಶ ನೀಡಲಿದೆ ಎನ್ನಲಾಗಿತ್ತು. ಆದರೆ ಇದೀಗ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಯಶವಂತಪುರ ಜನತೆ ಜಗ್ಗೇಶ್ ಅವರನ್ನು ಹರಸಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.