ಬೆಂಗಳೂರು : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ 31ನೇ ಆರೋಪಿಯಾಗಿರುವ ಡಿವೈಎಸ್ಪಿ ಶಾಂತಕುಮಾರ್ ಬೆಂಗಳೂರಿನ ಕೃಷಿ ಭವನದ ಮುಂದಿರುವ ಫುಟ್‌ಪಾತ್ ರಸ್ತೆಯಲ್ಲೇ 1 ಕೋಟಿ ರೂ ಪಡೆದಿದ್ದರು ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ. ಒಎಂಆರ್ ಉತ್ತರ ಪತ್ರಿಕೆಗಳ ಅಂಕವನ್ನು ಸ್ಕ್ಯಾನಿಂಗ್ ಮಾಡಿದ್ದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬ ತನ್ನ ಸಹದ್ಯೋಗಿಗೆ ಅಂಕಗಳ ಮಾಹಿತಿಯನ್ನು ಮೇಲ್ ಮೂಲಕ ರವಾನಿಸಿದ್ದ ಎಂಬ ಅಂಶವನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಡಿವೈಎಸ್ಪಿ ಶಾಂತಕುಮಾರ್ ಮತ್ತಿತರರ ವಿಚಾರಣೆಗೆ ಪೂರ್ವಾನುಮತಿ ನೀಡುವ ಸಂಬಂಧ ಕಾನೂನು ಇಲಾಖೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ಆರೋಪಿಗಳ ಬಗ್ಗೆ ಅನೇಕ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಿ ಮನೆಗೆ ಹೋಗಲಿ: ಸಿದ್ದರಾಮಯ್ಯ
ಒಎಂಆರ್ ಶೀಟ್‌ಗಳಲ್ಲಿನ ಕಾಲಂ 4ನ್ನು ತಿದ್ದಿ ಆಯ್ಕೆಯಾದ ಅನರ್ಹ ಅಭ್ಯರ್ಥಿಗಳು ನೀಡಿದ್ದ ಪೆನ್, ಒನ್‌ಟೈಂ ಲಾಕ್, ಡಬಲ್ ಸೈಡ್ ಗಮ್ಮಿಂಗ್ ಟೇಪನ್ನು ನಾಶಪಡಿಸಿ ತಿದ್ದಿರುವ ಒಎಂಆರ್ ಶೀಟ್‌ಗಳನ್ನೇ ಅಭ್ಯರ್ಥಿಯ ನೈಜ ಪ್ರತಿ ಎಂದು ಬಿಂಬಿಸಿದ್ದರು ಎಂದು ಉಲ್ಲೇಖಿಸಲಾಗಿದೆ.
29ನೇ ಆರೋಪಿ ಹರ್ಷ ಡಿ ಎಂಬಾತ ಡಿವೈಎಸ್ಪಿ ಶಾಂತಕುಮಾರ್‌ಗೆ ಬೆಂಗಳೂರು ನಗರದ ಹಡ್ಸನ್ ಸರ್ಕಲ್ ಬಳಿ ಇರುವ ಕೃಷಿ ಭವನದ ಮುಂದಿನ ಫುಟ್‌ಪಾತ್ ರಸ್ತೆಯಲ್ಲಿ 1,35 ಕೋಟಿ ರೂ.ಗಳನ್ನು ನೀಡಿದ್ದ ಎಂಬುದನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಒಎಂಆರ್ ಉತ್ತರ ಪತ್ರಿಕೆಗಳ ಅಂಕವನ್ನು ಸ್ಕ್ಯಾನಿಂಗ್ ಮಾಡಿದ್ದ ಟಿಆರ್‌ಎಸ್ ಕಂಪನಿಯ ಶಶಿಧರ್ ಎಂಬಾತ ಒಎಂಆರ್ ಉತ್ತರ ಪತ್ರಿಕೆಗಳ ಅಂಕಗಳ ಮಾಹಿತಿಯನ್ನು ತನ್ನ ಮೇಲ್ ಮೂಲಕ ತನ್ನದೇ ಕಂಪನಿಯ ಉದ್ಯೋಗಿಯಾದ ಶ್ಯಾಮ್ ಎಂಬಾತನಿಗೆ ಕಳುಹಿಸಿದ್ದ ಎಂದು ತಿಳಿದು ಬಂದಿದೆ.
31ನೇ ಆರೋಪಿ ಡಿವೈಎಸ್ಪಿ ಶಾಂತಕುಮಾರ್, ಶ್ರೀಧರ್ ಹೆಚ್ (ಆರೋಪಿ 28), ಹರ್ಷ ಡಿ (ಆರೋಪಿ 29) ಇವರ ಸೇವಾ ವಿವರಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಿರುವ ಸಿಐಡಿ ತನಿಖಾಧಿಕಾರಿಗಳು ಸರ್ಕಾರಿ ನೌಕರರಾದ ಆರೋಪಿ ಟಿ ಸಿ ಶ್ರೀನಿವಾಸ, ಲೋಕೇಶಪ್ಪ ಆರ್ ಮಂಜುನಾಥ್, ಗುರು ಬಸವರಾಜು, ಮಧು ಎಸ್ ವಿ, ಹರೀಶ್ ಕೆ ಅವರ ಸೇವಾ ವಿವರಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ಲಗತ್ತಿಸಿಲ್ಲ. ಬೆಳ್ಳಂದೂರಿನ ಹಾರಿಝನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದ ಕಾಲೇಜ್‌ನ ಕಿಟ್ ಬಾಕ್ಸ್‌ನ್ನು 35ನೇ ಆರೋಪಿ ಎಡಿಜಿಪಿ ಅಮೃತ್‌ಪೌಲ್ 31ನೇ ಆರೋಪಿ ಡಿವೈಎಸ್ಪಿಗೆ ನೀಡಿದ್ದರು. ಕೀ ಬಳಸಿ ಬಾಕ್ಸ್ ಓಪನ್ ಮಾಡಿದ್ದ ಆರೋಪಿಗಳು ಮಧ್ಯವರ್ತಿಗಳ ಮೂಲಕ 29ನೇ ಆರೋಪಿ ಪ್ರಥಮದರ್ಜೆ ಸಹಾಯಕ ಹರ್ಷ ಡಿ ಎಂಬಾತನಿಗೆ ನೀಡಿದ್ದರು. ಒಎಂಆರ್ ಕಾರ್ಬನ್ ಕಾಪಿ ಹಾಗೂ ಪೆನ್ ಬಳಸಿಕೊಂಡು ಆರೋಪಿಗಳು ಉತ್ತರಿಸದೇ ಖಾಲಿ ಬಿಟ್ಟಿದ್ದ ಪ್ರಶ್ನೆಗಳನ್ನು ತುಂಬಿದ್ದರು. ಅಲ್ಲದೇ ಒಎಂಆರ್ ಶೀಟ್‌ನ ನಂ 4ರಲ್ಲಿ ಪ್ರಯತ್ನಿಸಿದ್ದ ಪ್ರಶ್ನೆಗಳ ಸಂಖ್ಯೆಗಳನ್ನು ತಿದ್ದಿದ್ದರು ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ನ.11ಕ್ಕೆ ಪ್ರಧಾನಿ ಮೋದಿಯಿಂದ ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಲೋಕಾರ್ಪಣೆ
ಅದೇ ರೀತಿ ಕೆಆರ್ ಪುರಂನ ಕೇಂಬ್ರಿಡ್ಜ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಮತ್ತು ಕೋರಮಂಗಲದ ಕರ್ನಾಟಕ ರೆಡ್ಡಿ ಜನಸಂಘ ಕಾಲೇಜಿನಲ್ಲಿ ನಡೆದ ಪರೀಕ್ಷೆಯ ಕಿಟ್ ಬಾಕ್ಸ್ ನ್ನು ಅಮೃತ್‌ಪೌಲ್ ಸೂಚನೆ ಮೇರೆಗೆ ಡಿವೈಎಸ್ಪಿ ಶಾಂತಕುಮಾರ್ ಮೂಲಕ ತೆರೆಯಲಾಗಿತ್ತು. ಮಧ್ಯವರ್ತಿಗಳ ಮೂಲಕ ಆರೋಪಿಗೆ ನೀಡಿದ್ದ ಒಎಂಆರ್ ಕಾರ್ಬನ್ ಕಾಪಿ ಬಳಸಿಕೊಂಡು ಆರೋಪಿ ಉತ್ತರಿಸದೇ ಖಾಲಿ ಬಿಟ್ಟಿದ್ದ ಪ್ರಶ್ನೆಗಳನ್ನು ಭರ್ತಿ ಮಾಡಲಾಗಿತ್ತು. ಒಎಂಆರ್ ಶೀಟ್‌ನ ಕಾಲಂ 4ರಲ್ಲಿ ದಶಕದ ಸ್ಥಾನದಲ್ಲಿ ಇದ್ದ '1' ಸಂಖ್ಯೆಯನ್ನು '9' ಎಂದು ತಿದ್ದಿ ಬಿಡಿ ಸ್ಥಾನದಲ್ಲಿ ಇರುವ ಸಂಖ್ಯೆಯನ್ನು ತಿದ್ದಿ ಅಕ್ರಮವಾಗಿ ಆಯ್ಕೆಯಾಗಲು ಸಹಕರಿಸಿದ್ದರು. ಪೊಲೀಸ್ ಇಲಾಖೆಯ ಲಿಪಿಕ ಸಿಬ್ಬಂದಿ ಆರ್ ಮಂಜುನಾಥ್ ಆರೋಪಿ 30-ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಚೇರಿಯ ಶಾಖಾಧೀಕ್ಷಕ. ಈತ ತನ್ನ ಪರಿಚಯಸ್ಥ ಹನುಮಂತಪ್ಪ, ಯಶವಂತಗೌಡ ಎಂಬಾತನಿಗೆ ಪಿಎಸ್‌ಐ ಹುದ್ದೆ ಕೊಡಿಸುವ ಸಂಬಂಧ ಎಫ್‌ಡಿಎ ಹರ್ಷ ಎಂಬಾತನಿಗೆ ಪರಿಚಯಿಸಿ 50 ಲಕ್ಷ ರೂಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಪೈಕಿ 45 ಲಕ್ಷ ರೂಗಳನ್ನು ಪಡೆದು ಲಾಭ ಮಾಡಿಕೊಂಡಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.