ಕಿರುತೆರೆಯಿಂದ ಹಿರಿತೆರೆಯತ್ತ ಜನಪ್ರಿಯ ಧಾರಾವಾಹಿಗಳ ನಟಿ ಗಗನ ಕುಂಚಿ..!

Gagana Kunchi: ಕನ್ನಡ ಕಿರುತೆರೆಯಲ್ಲಿ ತನ್ನದೇ ಛಾಪು ಮೂಡಿಸಿರುವ ‘ದೊಡ್ಮನೆ ಸೊಸೆ’, ‘ಗಟ್ಟಿಮೇಳ’ ಮುಂತಾದ ಧಾರಾವಾಹಿಗಳ ಖ್ಯಾತಿಯ ನಟಿ ಗಗನ ಕುಂಚಿ, ಈಗ ಹಿರಿತೆರೆಗೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಎರಡು ಚಿತ್ರಗಳಲ್ಲಿ ಗಗನ ಕುಂಚಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಆ ಎರಡೂ ಚಿತ್ರಗಳು ಸದ್ಯದಲ್ಲೇ ಆರಂಭವಾಗಲಿದೆ.   

Written by - YASHODHA POOJARI | Edited by - Savita M B | Last Updated : Sep 30, 2023, 09:21 AM IST
  • ಗಗನ ಕುಂಚಿ ನಾಯಕಿಯಾಗಿ ನಟಿಸುತ್ತಿರುವ ಎರಡು ಚಿತ್ರಗಳು ಸುಗಮ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತದೆ
  • ಗಗನ ಕುಂಚಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟವರು.
  • 2009ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ಕಾಲಚಕ್ರ’ ಧಾರಾವಾಹಿಯಲ್ಲಿ ನಟಿಸಿದ್ದರು
ಕಿರುತೆರೆಯಿಂದ ಹಿರಿತೆರೆಯತ್ತ ಜನಪ್ರಿಯ ಧಾರಾವಾಹಿಗಳ ನಟಿ ಗಗನ ಕುಂಚಿ..! title=

Gagana Kunchi Movies: ಗಗನ ಕುಂಚಿ ನಾಯಕಿಯಾಗಿ ನಟಿಸುತ್ತಿರುವ ಎರಡು ಚಿತ್ರಗಳು ಸುಗಮ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತದೆ. ಪ್ರೊಡಕ್ಷನ್ ನಂ ೧ ಚಿತ್ರವನ್ನು ಗುರುಕುಮಾರ್ ಪಿ ನಿರ್ದೇಶಿಸುತ್ತಿದ್ದಾರೆ. ತೆಲುಗಿನ "ವಾಲ್ಟೇರ್ ವೀರಯ್ಯ" ಹಾಗೂ "ವೆಂಕಿಮಾಮ" ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಗುರುಕುಮಾರ್ ಕಾರ್ಯ ನಿರ್ವಹಿಸಿದ್ದಾರೆ. 

ಎರಡನೇ ಚಿತ್ರವನ್ನು ("ಪ್ರೊಡಕ್ಷನ್ ನಂ ೨" ) ವಿಜಯ್ ಆರ್ ನಿರ್ದೇಶಿಸುತ್ತಿದ್ದಾರೆ. "ಕಥಾರ್ ಭಾಷಾ ಎಂದ್ರಾ ಮುತ್ತುರಾಮಲಿಂಗಂ", "ಮಾವೀರನ್", " ವಿರುಮನ್", "ಆಕ್ಷನ್", " ಜೈ ಭೀಮ್" ಮುಂತಾದ ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಗುರುಕುಮಾರ್ ಹಾಗೂ ವಿಜಯ್ ಇಬ್ಬರಿಗೂ ಇದು ಮೊದಲ ನಿರ್ದೇಶನದ ಚಿತ್ರವಾಗಿದ್ದು, ಎರಡು ಚಿತ್ರಗಳೂ ಎರಡು ಭಾಗಗಳಲ್ಲಿ ಬರುತ್ತಿರುವುದು ವಿಶೇಷ.

ಗಗನ ಕುಂಚಿ ಬಾಲನಟಿಯಾಗಿ ಅಭಿನಯಿಸುವ ಮೂಲಕ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟವರು. 2009ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ಕಾಲಚಕ್ರ’ ಧಾರಾವಾಹಿಯಲ್ಲಿ ನಟಿಸಿದ ಅವರು, ಅದರ ಮರುವರ್ಷವೇ ರಮೇಶ್‍ ಅರವಿಂದ್‍ ಅಭಿನಯದ ‘ಹೆಂಡ್ತೀರ ದರ್ಬಾರ್" ಚಿತ್ರದಲ್ಲಿ ನಟಿಸಿದರು. ನಂತರ ಸುಮಾರು ಆರು ವರ್ಷಗಳ ಕಾಲ ಚಿಂಟು ಟಿವಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ ಗಗನ, 2017ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ‘ದೊಡ್ಮನೆ ಸೊಸೆ’ ಧಾರಾವಾಹಿಯ ನಾಯಕಿಯಾದರು. 

ಆ ನಂತರ ತಮಿಳಿನ ‘ಸುಬ್ರಹ್ಮಣ್ಯಪುರಂ’, ಕನ್ನಡದ ‘ಮಹಾದೇವಿ’, ‘ಗಟ್ಟಿಮೇಳ’ ಧಾರಾವಾಹಿಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವುದರ ಜೊತೆಗೆ, ಜೀ ಕನ್ನಡದಲ್ಲಿ ಪ್ರಸಾರವಾದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್’ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ.

ಇದನ್ನೂ ಓದಿ- 6.5 ಲಕ್ಷ ಲಂಚ ಕೇಳಿದ್ರು... ಸೆನ್ಸಾರ್ ಮಂಡಳಿ ವಿರುದ್ಧ ವಿಶಾಲ್ ಗಂಭೀರ ಆರೋಪ!

ಇದಲ್ಲದೆ, ಮಾಡಲಿಂಗ್‍ನಲ್ಲೂ ಗುರುತಿಸಿಕೊಂಡಿರುವ ಗಗನ, ‘ಮಿಸ್‍ ಕರ್ನಾಟಕ ಇಂಟರ್ ನ್ಯಾಷನಲ್‍’ ಸ್ಪರ್ಧೆಯ ಮೊದಲ ರನ್ನರ್ ಅಪ್‍ ಆಗಿ ಗೆದ್ದಿದ್ದಾರೆ. ಜೊತೆಗೆ ಕಾಲೇಜಿನಲ್ಲಿ ಓದುವಾಗ ‘ಬೆಂಗಳೂರು ಟೈಮ್ಸ್ ಫ್ರೆಶ್‍ ಫೇಸ್‍’ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇಷ್ಟೆಲ್ಲ ಅನುಭವದೊಂದಿಗೆ ಅವರು ಇದೀಗ ಸಿನಿಮಾದಲ್ಲಿ ನಾಯಕಿಯಾಗುವ ತಯಾರಿ ನಡೆಸಿದ್ದಾರೆ. ತಮ್ಮ ಹಿರಿತೆರೆ ಎಂಟ್ರಿಯ ಬಗ್ಗೆ ಮಾತನಾಡುವ ಗಗನ ಕುಂಚಿ, ‘ಈ ಹಿಂದೆಯೂ ಕೆಲವು ಅವಕಾಶಗಳು ಬಂದಿದ್ದವು. ಆದರೆ, ಕಥೆ ಮತ್ತು ಪಾತ್ರ ಇಷ್ಟವಾಗದ ಕಾರಣ, ಯಾವೊಂದು ಚಿತ್ರವನ್ನು ಒಪ್ಪಿರಲಿಲ್ಲ. 

ಈಗ ಒಪ್ಪಿರುವ ಕಥೆಗಳಲ್ಲಿ ನನ್ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್‍ ಇದೆ. ಒಬ್ಬ ನಟಿಯಾಗಿ ಎಲ್ಲ ತರಹದ ಪಾತ್ರಗಳನ್ನು ಮಾಡಬೇಕೆಂಬುದು ನನ್ನ ಇಷ್ಟ. ಈ ಚಿತ್ರಗಳಲ್ಲಿ ನನ್ನ ಪ್ರತಿಭೆ ತೋರಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಈ ಚಿತ್ರಗಳ ಮೂಲಕ ನಾಯಕಿಯಾಗಬೇಕೆಂಬ ಬಹಳ ವರ್ಷಗಳ ಕನಸು ನನಸಾಗಿದೆ’ ಎನ್ನುತ್ತಾರೆ.

ಧಾರಾವಾಹಿಗಳಲ್ಲಿ ತಮ್ಮ ಅಭಿನಯವನ್ನು ಇಷ್ಟಪಟ್ಟು ಪ್ರೋತ್ಸಾಹಿಸಿದ ಜನ, ಈ ಬಾರಿಯೂ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ ಎನ್ನುವ ಗಗನ, ‘ನನ್ನ ಕಿರುತೆರೆಯ ಪಾತ್ರಗಳನ್ನು ನೋಡಿ ಜನ ಬಹಳಷ್ಟು ಪ್ರೋತ್ಸಾಹಿಸಿದ್ದರು. ನನ್ನ ಅಭಿನಯವನ್ನು ಮೆಚ್ಚಿ ಇನ್‍ಸ್ಟಾಗ್ರಾಂನಲ್ಲಿ ಮೆಸೇಜ್‍ ಮಾಡುತ್ತಿದ್ದರು.  

ಅವರ ಪ್ರೀತಿ ನೋಡಿ ಖುಷಿಯಾಗುತ್ತದೆ. ನನ್ನ ಹಿರಿತೆರೆಯ ಪ್ರಯಾಣಕ್ಕೂ ಅವರೆಲ್ಲರ ಬೆಂಬಲ ಮತ್ತು ಆಶೀರ್ವಾದ ಇರುತ್ತದೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಗಗನ ಕುಂಚಿ.

ಇದನ್ನೂ ಓದಿ- ಕಾವೇರಿ ಕೂಗಿಗೆ ಧ್ವನಿಗೂಡಿಸದ ರಾಜ್‌, ರಿಷಬ್‌, ರಕ್ಷಿತ್‌ ಶೆಟ್ಟಿ : ನೆಟಿಜನ್ಸ್‌ ಆಕ್ರೋಶ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.  

Trending News