ʻಬಂಗಾರದ ಮನುಷ್ಯʼ ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದ್ದೆಷ್ಟು? ಅಣ್ಣಾವ್ರು ಪಡೆದ ಸಂಭಾವನೆ ಗೊತ್ತಾ!

Bangarada Manushya: ಅದೊಂದು ಸಿನಿಮಾ ಕೇವಲ ಜನರನ್ನು ರಂಜಿಸಿದ್ದು ಮಾತ್ರವಲ್ಲ, ಅನೇಕ ಮಂದಿಯ ಬಾಳಲ್ಲಿ ಬದಲಾವಣೆಯನ್ನೇ ತಂದಿತು. ಸಿಟಿಯ ಜಂಜಾಟ ಬಿಟ್ಟು ರೈತನಾಗುವಂತೆ ಮಾಡಿತು.. ಅರ್ಧ ಶತಮಾನ ಕಳೆದರೂ ಈ ಚಿತ್ರದ ಗತ್ತು ಗಮ್ಮತ್ತು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಯಾವ ಸಿನಿಮಾ ಬಗ್ಗೆ ಹೇಳ್ತಿದ್ದೀವಿ ಎಂಬ ಕುತೂಹಲವೇ... ಇಲ್ಲಿದೆ ನೋಡಿ ಆ ಗೋಲ್ಡನ್‌ ಸಿನಿಮಾದ ಇಂಟರೆಸ್ಟಿಂಗ್‌ ಕಹಾನಿ...

Written by - Chetana Devarmani | Last Updated : Jun 5, 2022, 03:59 PM IST
  • ಅದೆಷ್ಟೋ ಜನರ ಬದುಕು ಬದಲಿಸಿದ ʻಸಿನಿಮಾʼ
  • ʻಬಂಗಾರದ ಮನುಷ್ಯʼ ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದ್ದೆಷ್ಟು?
  • ಹಿಟ್‌ ಚಿತ್ರ ಕೊಟ್ಟಾಗ ಅಣ್ಣಾವ್ರು ಪಡೆಯುತ್ತಿದ್ದ ಸಂಭಾವನೆ ಗೊತ್ತಾ!?
ʻಬಂಗಾರದ ಮನುಷ್ಯʼ ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದ್ದೆಷ್ಟು? ಅಣ್ಣಾವ್ರು ಪಡೆದ ಸಂಭಾವನೆ ಗೊತ್ತಾ!  title=
ಅಣ್ಣಾವ್ರು

Bangarada Manushya: ಅದು ಬ್ಲ್ಯಾಕ್‌ ಆಂಡ್‌ ವೈಟ್‌ ಸಿನಿಮಾಗಳ ಕಾಲ.. ಆದರೂ ಮನರಂಜನೆಗೆ ಮಾತ್ರ ಕೊರತೆ ಇರಲಿಲ್ಲ. ಜನರನ್ನು ರಂಜಿಸುವ ಜೊತೆಗೆ ಸಮಾಜಮುಖಿ ಸಂದೇಶ ರವಾನಿಸುವ ಕೆಲಸ ಮಾಡಿತ್ತಿದ್ದವು ಸಿನಿಮಾಗಳು. ಅಂತಹ ಅತ್ಯುತ್ತಮ ಸಂದೇಶವನ್ನು ಹೊತ್ತು ಬಂದ ಸಿನಿಮಾವೇ ಬಂಗಾರದ ಮನುಷ್ಯ. ಕಪ್ಪು ಬಿಳಿನ ಬಣ್ಣದಲ್ಲೂ ಗೋಲ್ಡನ್‌ ಸಂದೇಶ ಸಾರಿದ ಚಿತ್ರವಿದು. ರಿಲೀಸ್‌ ಆಗಿ ಐವತ್ತು ವರ್ಷಗಳು ಕಳೆದರೂ ಇನ್ನೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿರುವ ಚಿತ್ರ ಬಂಗಾರದ ಮನುಷ್ಯ.

ಕನ್ನಡ ಚಿತ್ರರಂಗಕ್ಕೆ ಡಾ. ರಾಜ್​ಕುಮಾರ್ ಕೊಡುಗೆ ಅಪಾರ. ಒಂದಕ್ಕಿಂತ ಒಂದು ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದರು. ಡಾ.ರಾಜ್‌ಕುಮಾರ್ ಮತ್ತು ನಿರ್ದೇಶಕ ಸಿದ್ದಲಿಂಗಯ್ಯ ಕಾಂಬಿನೇಷನ್‌ನಲ್ಲಿ ಮೂಡಿಬಂದ ಬಂಗಾರದ ಮನುಷ್ಯ ಸಿನಿಮಾ ತೆರೆಕಂಡು ಭರ್ತಿ 50 ವರ್ಷ ತುಂಬಿದೆ.  ಅಣ್ಣಾವ್ರ ಅಭಿನಯದ 206 ಸಿನಿಮಾಗಳಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವ ಸಿನಿಮಾ ಬಂಗಾರದ ಮನುಷ್ಯ. ಡಾ.ರಾಜ್ ವೃತ್ತಿ ಬದುಕಿನಲ್ಲಿ ಮಾತ್ರವಲ್ಲ, ಕನ್ನಡ ಚಿತ್ರರಂಗದ ಸಾರ್ವಕಾಲಿಕ ಹಿಟ್ ಸಿನಿಮಾಗಳಲ್ಲಿ ಬಂಗಾರದ ಮನುಷ್ಯ ಕೂಡ ಒಂದು. 1972ರ ಮಾರ್ಚ್ 31ರಂದು ತೆರೆಕಂಡ ಈ ಚಿತ್ರ ಈಗ ಸುವರ್ಣ ವರ್ಷದ ಸಂಭ್ರಮದಲ್ಲಿದೆ. 

ರಾಜ್‌ಕುಮಾರ್ ನಟಿಸಿರುವ ಸಿನಿಮಾಗಳಲ್ಲಿ ಸಮಾಜಕ್ಕೊಂದು ಉತ್ತಮ ಸಂದೇಶ ಇರುತ್ತಿತ್ತು. ಇದೇ ಕಾರಣಕ್ಕೆ ಡಾ.ರಾಜ್​ಕುಮಾರ್​ ಎಂದರೆ ಕನ್ನಡಿಗರ ಪಾಲಿಗೆ ಆದರ್ಶ. ರಾಜ್‌ಕುಮಾರ್​ ನಟಿಸಿದ ಪಾತ್ರಗಳನ್ನ ಅನುಸರಿಸಿದರೂ ಸಾಕು, ಬಾಳಿಗೊಂದು ಅತ್ಯುತ್ತಮ ಮಾರ್ಗದರ್ಶನ ಸಿಗುತ್ತದೆ, ಆ ವ್ಯಕ್ತಿ ಊತ್ತಮನಾಗುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂತಹ ಮೌಲ್ಯಯುತವಾದ ಸಿನಿಮಾಗಳನ್ನು ಈ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ ಡಾ. ರಾಜ್‌.

ಇದನ್ನೂ ಓದಿ: 'ನಿಮ್ಮ ನಿಮ್ಮ ಚಡ್ಡಿ ನೀವು ಉದರಿಸಿಕೊಳ್ಳಿ, ರಾಜ್ಯದ ಜನರ ಚಡ್ಡಿ ಉದರಿಸಬೇಡಿ'

ಅಂತಹ ಅಪ್ರತಿಮ ಸಿನಿಮಾಗಳ ಸಾಲಿಗೆ ಸೇರುವುದೇ ಅವರು ಅಭಿನಯಿಸಿದ  ಬಂಗಾರದ ಮನುಷ್ಯ. ಇದು ಗ್ರಾಮೀಣ ಬದುಕಿನ ಕುರಿತ ಮಹತ್ವದ ಸಂದೇಶ ನೀಡುವ ಸಿನಿಮಾ. ಸಿಟಿಯಿಂದ ಹಳ್ಳಿಗೆ ಬಂದು ಬರಡು ಭೂಮಿಯಲ್ಲಿ ಕೃಷಿ ಮಾಡುವ ರಾಜೀವನ ಪಾತ್ರ ಆ ಕಾಲಕ್ಕೆ ಸಾವಿರಾರು ಯುವಕರಿಗೆ ಸ್ಪೂರ್ತಿ ತುಂಬಿತ್ತು. ದುಡಿಮೆ ಮಾಡಲು ನಗರ ಸೇರಿದ್ದ ಎಷ್ಟೋ ಮಂದಿ ತಮ್ಮ ತಮ್ಮ ಹಳ್ಳಿಗಳಿಗೆ ಮರಳಿ, ಕೃಷಿ ಮಾಡಿ ಬದುಕಿನಲ್ಲಿ ಯಶಸ್ಸು ಕಂಡಿದ್ದು ಈಗ ಇತಿಹಾಸ. ಇಂತಹ ಮಹತ್ತರ ಸಮಾಜ ಮುಖಿ ಸಂದೇಶದೊಂದಿಗೆ ಬಂದಿದ್ದು ಬಂಗಾರದ ಮನುಷ್ಯ ಸಿನಿಮಾ. 

ಅಣ್ಣಾವ್ರ ಚಿತ್ರರಂಗದ ಇತಿಹಾಸದಲ್ಲಿ ಈ ಸಿನಿಮಾ ಮಾಡಿದಷ್ಟು ಹೆಸರನ್ನು ಮತ್ಯಾವ ಸಿನಿಮಾ ಕೂಡ ಮಾಡಲಿಲ್ಲ ಎಂದರೆ ತಪ್ಪಾಗಲಾರದು. ಹಲವು ವರ್ಷಗಳ ಕಾಲ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಆ ಕಾಲಕ್ಕೆ ಈ ಸಿನಿಮಾ ದೊಡ್ಡ ದಾಖಲೆಯನ್ನೇ ಕ್ರಿಯೇಟ್‌ ಮಾಡಿತ್ತು. ಜನರ ಮನ ಗೆಲ್ಲುವಲ್ಲಿ ಮಾತ್ರವಲ್ಲ ಬಾಕ್ಸ್​ ಆಫೀಸ್​ನಲ್ಲಿ ದಾಖಲೆ ಬರೆಯುವಲ್ಲಿಯೂ ಬಂಗಾರದ ಮನುಷ್ಯ ಚಿತ್ರ ಮೈಲಿಗಲ್ಲು ಸ್ಥಾಪಿಸಿತ್ತು. 

ಗಲ್ಲಾಪೆಟ್ಟಿಗೆಯಲ್ಲಿ ಬಾಚಿಕೊಂಡಿದ್ದೆಷ್ಟು?

ಕನ್ನಡ ಚಿತ್ರರಂಗದಲ್ಲಿ ಬಂಗಾರದ ಮನುಷ್ಯ  ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ. ಆ ಕಾಲಕ್ಕೆ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಕನ್ನಡ ಸಿನಿಮಾ ಎಂಬ ಖ್ಯಾತಿ ಬಂಗಾರದ ಮನುಷ್ಯ ಚಿತ್ರಕ್ಕಿದೆ. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಸತತ ಎರಡು ವರ್ಷಗಳ ಕಾಲ ಅಮೋಘ ಪ್ರದರ್ಶನ ಕಂಡಿತ್ತು. ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಂದಕ್ಕಿಂತ ಹೆಚ್ಚು ವರ್ಷಗಳ ಕಾಲ ಯಶಸ್ವಿಯಾಗಿ ಪ್ರದರ್ಶನಗೊಂಡಿತು.  

ಬೆಂಗಳೂರಿನ ಭೂಮಿಕಾ ಚಿತ್ರಮಂದಿರದಲ್ಲಿ ಸತತ 2 ವರ್ಷಗಳ ಕಾಲ ಈ ಚಿತ್ರ ಪ್ರದರ್ಶನ ಕಂಡಿತ್ತು. ಇಂದಿಗೂ ಅದು ದಾಖಲೆಯಾಗಿಯೇ ಉಳಿದಿದೆ. ಇದಲ್ಲದೇ ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರಗಳ ಕಾಲ ಪ್ರದರ್ಶನ ಕಂಡ ದಾಖಲೆ ಬಂಗಾರದ ಮನುಷ್ಯ ಚಿತ್ರಕ್ಕಿದೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಂದು ವರ್ಷಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿದ್ದು ಮತ್ತೊಂದು ದಾಖಲೆ.  

ಟಿ.ಕೆ. ರಾಮಾರಾವ್ ಅವರು ಬರೆದ ಕಾದಂಬರಿ ಆಧರಿಸಿ 'ಬಂಗಾರದ ಮನುಷ್ಯ' ಸಿನಿಮಾ ತಯಾರಾಗಿತ್ತು. ಈ ಚಿತ್ರಕ್ಕೆ ಸಿದ್ದಲಿಂಗಯ್ಯನವರ ನಿರ್ದೇಶನವಿದ್ದು, ಭಾರತಿ ನಾಯಕಿಯಾಗಿದ್ದರೆ, ಶ್ರೀನಾಥ್, ವಜ್ರಮುನಿ, ಬಾಲಕೃಷ್ಣ, ಎಂ.ಪಿ. ಶಂಕರ್, ಬಿವಿ ರಾಧಾ, ಆದವಾನಿ ಲಕ್ಷ್ಮೀದೇವಿ, ಶನಿ ಮಹದೇವಪ್ಪ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಚಿತ್ರಕ್ಕೆ ಜಿ.ಕೆ. ವೆಂಕಟೇಶ್ ಸಂಗೀತ ನೀಡಿದ್ದರು. ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ ಧ್ವನಿಯಲ್ಲಿ ಅದ್ಭುತವಾಗಿ ಹಾಡುಗಳು ಮೂಡಿ ಬಂದಿದ್ದವು. 

ಮತ್ತೊಂದು ವಿಶೇಷ ಎಂದರೆ, ಈ ಸಿನಿಮಾ 1988ರಲ್ಲಿ ಮರು ಬಿಡುಗಡೆ ಆಗಿತ್ತು. ಆಗಲೂ ಕೂಡ ಬಂಗಾರದ ಮನುಷ್ಯ ಸಿನಿಮಾ 25 ವಾರಗಳ ಕಾಲ ಪ್ರದರ್ಶನ ಕಂಡಿದ್ದು ಮತ್ತೊಂದು ದಾಖಲೆ ಆಗಿದೆ. ಈಗಲೂ ಕೂಡ ಈ ಚಿತ್ರ ಟಿವಿಯಲ್ಲಿ ಪ್ರಸಾರವಾದರೆ ಗಮನವಿಟ್ಟು ನೋಡುವ ಪ್ರೇಕ್ಷಕರಿದ್ದಾರೆ. ಈಗಲೂ ಕೂಡ ಈ ಚಿತ್ರದ ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಹಾಡು ಇಂದಿಗೂ ಸ್ಫೂರ್ತಿದಾಯಕವಾಗದೆ. ಈ ಸಿನಿಮಾದ ನಗು ನಗುತಾ ನಲಿ.., ಬಾಳ ಬಂಗಾರ ನೀನು.., ಆಹಾ ಮೈಸೂರು ಮಲ್ಲಿಗೆ.., ಆಗದು ಎಂದು ಕೈ ಕಟ್ಟಿ ಕುಳಿತರೆ.. ಗೀತೆಗಳು ಎವರ್​ಗ್ರೀನ್​ ಆಗಿ ಉಳಿದುಕೊಂಡಿವೆ.  

ಇದನ್ನೂ ಓದಿ: ಇದೇನಿದು ಉರ್ಫಿ ಜಾವೇದ್ ಅವತಾರ! ಗೋಣಿಚೀಲದಲ್ಲಿ ಬಟ್ಟೆ ಮಾಡಿಕೊಂಡ ನಟಿ!

ಅರ್ಧ ಶತಮಾನ ಕಳೆದರೂ ಕೂಡ ಈ ಚಿತ್ರದ ಚಾರ್ಮ್​ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ದುಡಿಮೆ ಮಾಡಲು ನಗರ ಸೇರಿದ್ದ ಎಷ್ಟೋ ಮಂದಿ ಯುವಕರು ಮರಳಿ ತಮ್ಮ ತಮ್ಮ ಹಳ್ಳಿಗಳಿಗೆ ಹೋಗಿ, ಕೃಷಿ ಮಾಡಿ ಬದುಕಿನಲ್ಲಿ ಯಶಸ್ಸು ಕಾಣುವಂತೆ ಪ್ರೇರೆಪಿಸಿತ್ತು ಈ ಸಿನಿಮಾ. 

ಡಾ.ರಾಜ್‌ಕುಮಾರ್ ಸಂಭಾವನೆ ಎಷ್ಟಿತ್ತು? 

ಡಾ. ರಾಜ್‌ಕುಮಾರ್ ನಟಿಸಿದ ಸಿನಿಮಾಗಳ ಸಂಖ್ಯೆ 206. ಅದು ಭಾರತೀಯ ಚಿತ್ರರಂಗದ ಮಟ್ಟಿಗೆ ದಾಖಲೆಯೇ ಸರಿ. ಅದರಲ್ಲೂ ಆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರೇ ನಾಯಕರು ಎನ್ನುವುದು ಎವರ್‌ಗ್ರೀನ್‌ ರೆಕಾರ್ಡ್‌. ಇನ್ನೂ ವಿಶೇಷ ಏನೆಂದರೆ ಅವರು ನಟಿಸಿದ್ದ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹೆಚ್ಚಿನವು ಸೂಪರ್ ಹಿಟ್ ಎಂಬುದು ಮತ್ತೊಂದು ವಿಶೇಷ . ಹೀಗಿರುವಾಗ ಭಾರತೀಯ ಚಿತ್ರರಂಗದ ದಂತಕಥೆ, ಕನ್ನಡ ಕಣ್ಮಣಿ, ನಟ ಸಾರ್ವಭೌಮ, ಹಿಟ್‌ ಮೇಲೆ ಹಿಟ್ ಚಿತ್ರಗಳನ್ನು ಕೊಟ್ಟ ಡಾ.ರಾಜ್‌ಕುಮಾರ್ ಅವರ ಸಂಭಾವನೆ ಎಷ್ಟಿತ್ತು? ಹಿಟ್‌ ಚಿತ್ರಗಳನ್ನು ಕೊಟ್ಟಾಗ ಅವರಿಗೆ ಸಿಕ್ಕಿದ ಹಣವೆಷ್ಟು? ಅಣ್ಣಾವ್ರ ಸ್ಯಾಲರಿಯ ಸೀಕ್ರೆಟ್ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಆಸಕ್ತಿ ಇದ್ದೇ ಇರುತ್ತದೆ. ಇದಕ್ಕೆ ನಾವು ಉತ್ತರ ಹೇಳ್ತೀವಿ.. 

ಈಗ ಒಬ್ಬ ಹೀರೋ ಒಂದು ಚಿತ್ರದ ನಂತರ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಆಗ ಹಾಗಿರಲಿಲ್ಲವಂತೆ. ಕೆಲವರು ಹೇಳುವ ಪ್ರಕಾರ, ಆಗ ರಾಜ್‌ಕುಮಾರ್‌ ಒಂದು ಚಿತ್ರಕ್ಕೆ ಪಡೆಯುತ್ತಿದ್ದ ಸಂಭಾವನೆ 5,000 ರೂಪಾಯಿಯಂತೆ. 10,000ಕ್ಕೆ ಸಂಭಾವನೆ ಏರಿಕೆಯಾಗಲು ಅವರು 10 ಚಿತ್ರಗಳನ್ನು ಮಾಡಬೇಕಾಯಿತಂತೆ. ಡಾ.ರಾಜ್ ಸಂಪೂರ್ಣ ಚಿತ್ರಕ್ಕೆ 5,000 ಸಂಭಾವನೆ ಪಡೆಯುತ್ತಿದ್ದರಂತೆ. ಆಗ ಸುಮಾರು 9 ತಿಂಗಳು ಚಿತ್ರದ ಕೆಲಸಗಳು ನಡೆದರೆ ಅಷ್ಟಕ್ಕೂ ಸೇರಿಸಿ 5,000 ಪಡೆಯುತ್ತಿದ್ದರಂತೆ. ಆದರೆ ಡಾ.ರಾಜ್ ಹಲವು ಚಿತ್ರಗಳಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಆ ಕಾರಣ, ಅವರಿಗೆ ಅಷ್ಟು ಬೇಡಿಕೆ ಇತ್ತಂತೆ. 

ಡಾ. ರಾಜ್  ಅವರ ಪತ್ನಿ, ಹಿರಿಯ ನಿರ್ಮಾಪಕಿ, ದಿ. ಪಾರ್ವತಮ್ಮ ಅವರ ಜೀವನಾಧರಿತ ಪುಸ್ತಕ 'ನಾನು ಪಾರ್ವತಿ' ಯಲ್ಲಿ ಖ್ಯಾತ ಲೇಖಕ ಜೋಗಿಯವರು ದಾಖಲಿಸಿದ ಪ್ರಕಾರ, 'ಬಂಗಾರದ ಮನುಷ್ಯ' ಸಿನಿಮಾಕ್ಕಾಗಿ ಅಣ್ಣಾವ್ರು ಪಡೆದಿದ್ದು, 30 ಸಾವಿರ ರೂಪಾಯಿ ಸಂಭಾವನೆಯಂತೆ. ಎರಡು ವರ್ಷ ಪ್ರದರ್ಶನಗೊಂಡ ಚಿತ್ರ ಹಲವು ದಾಖಲೆ ಬರೆಯಿತು. ಆದರೆ ಆ ಸಿನಿಮಾದಲ್ಲೂ ರಾಜ್‌ಕುಮಾರ್ ಪಡೆದಿದ್ದು ಸ್ವಲ್ಪ ಹಣ ಅಷ್ಟೇ.. 

ಕಥಾವಸ್ತುವಿನಲ್ಲಿ ಬಂಗಾರದ ಮನುಷ್ಯ ಸಿನಿಮಾಗೆ ಸಾಟಿ ಬೇರೆ ಇಲ್ಲ. ಟಿ.ಕೆ. ರಾಮರಾವ್‌ ಅವರ ಕಾದಂಬರಿಯನ್ನಾಧರಿಸಿ ಮಾಡಿದ ಈ ಸಿನಿಮಾದ ಚಿತ್ರಕಥೆ, ಸ್ಥಳೀಯತೆಯ ಅಭಿವ್ಯಕ್ತಿ, ಸಂಭಾಷಣೆ ಎಲ್ಲವೂ ಅದ್ಭುತ. ಕನ್ನಡ ನೆಲದ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ, ಈ ನೆಲದ ಸಂಸ್ಕೃತಿ, ಭಾಷೆ, ಜೀವನಶೈಲಿಯನ್ನು ತೆರೆದಿಟ್ಟ ಚಿತ್ರವೇ ಕನ್ನಡದ ಕಣ್ಮಣಿ ಅಣಾವ್ರು ಅಭಿನಯಿಸಿದ ಬಂಗಾರದ ಮನುಷ್ಯ ಸಿನಿಮಾ. ವಿಶೇಷವೆಂದರೆ ಇದನ್ನು ಅನ್ಯ ಭಾಷೆಗಳಿಗೆ ರೀಮೇಕ್‌ ಮಾಡಿದಾಗ ಎಲ್ಲೂ ಅಷ್ಟೊಂದು ಹಿಟ್‌ ಕೊಡಲಿಲ್ಲ. ಆ ಮಟ್ಟಿಗಿನ ನೇಟಿವಿಟಿ ಇತ್ತು ಈ ಸಿನಿಮಾದಲ್ಲಿ. 

ಇದನ್ನೂ ಓದಿ: 160 ಭಾಷೆಗಳಲ್ಲಿ ರಿಲೀಸ್..! ತನ್ನದೇ ದಾಖಲೆ ಉಡೀಸ್ ಮಾಡುತ್ತಾ 'ಅವತಾರ್‌-2'..?

ಬಂಗಾರದ ಮನುಷ್ಯ ಸಿನಿಮಾ ತೆಲುಗಿನಲ್ಲಿ 'ದೇವುಡುಲಾಂಟಿ ಮನಿಷಿ' ಹೆಸರಿನಲ್ಲಿ ರಿಮೇಕ್ ಆಗಿತ್ತು. 'ಸೂಪರ್ ಸ್ಟಾರ್' ಕೃಷ್ಣ ಈ ಚಿತ್ರದಲ್ಲಿ ಹೀರೋ ಆಗಿದ್ದರು. ಆದರೆ ಪರಭಾಷೆಗಳಲ್ಲಿ ಈ ಚಿತ್ರ ಹೇಳಿಕೊಳ್ಳುವಂತಹ ಹಿಟ್‌ ಏನು ಕೊಡಲಿಲ್ಲ. ಕನ್ನಡದಲ್ಲಿ ಮಾತ್ರ ಅನೇಕ ಯುವಕರ ಮನ ಬದಲಿಸಿತ್ತು ಈ ಚಿತ್ರ. 

ವಿಶೇಷ ಎಂದರೆ, ಸಿದ್ದಲಿಂಗಯ್ಯ ಮತ್ತು ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಸತತವಾಗಿ ಮೂಡಿಬಂದ ಆರನೇ ಸಿನಿಮಾ ಇದಾಗಿತ್ತು. ಈ ಸಿನಿಮಾ ಬರೀ ರಾಜ್‌ಕುಮಾರ್‌ ಅವರ ಸಿನಿ ಕೆರಿಯರ್ ಅಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೇ ಅತ್ಯುತ್ತಮ ಸಿನಿಮಾಗಳ ಪಟ್ಟಿಗೆ ಸೇರಿತು.  

ಕನ್ನಡ ಚಿತ್ರರಂಗದ ಐಕಾನ್‌ ಆದ ಮುತ್ತುರಾಜ್‌ ಇಂದು ಬರಿಯ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ ನಟ ಮಾತ್ರವಲ್ಲ. ಓರ್ವ ಸಾಂಸ್ಕೃತಿಕ ಐಕಾನ್‌. ಸಮಾಜದ ಮೇಲೆ ಪ್ರಭಾವ ಬೀರಿ ಹೋದ, ಇಂದಿಗೂ ಹೆಸರು ಮಾತ್ರದಿಂದಲೇ ಪ್ರಭಾವಿಸುತ್ತಿರುವ ಸಾಮಾಜಿಕ ಶಕ್ತಿ. ಅವರು ಮಾಡಿದ ನೂರಾರು ಸಿನಿಮಾಗಳಲ್ಲಿ ಗೋಲ್ಡನ್‌ ಚಿತ್ರವೇ ಬಂಗಾರದ ಮನುಷ್ಯ. ಇಂತಹ ಅದ್ಭುತ ಸಿನಿಮಾ ಶತ ಶತಮಾನಗಳೇ ಕಳೆದರೂ, ಅದೆಷ್ಟೇ ಜನರೇಷನ್‌ ಬದಲಾದರೂ ಎಂದೆಂದಿಗೂ ಅಮರ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News