KGF Chapter 2: ಸಂಜಯ್ ದತ್ ಹುಟ್ಟುಹಬ್ಬಕ್ಕೆ ‘ಅಧೀರ’ನ ಖಡಕ್ ಪೋಸ್ಟರ್ ರಿಲೀಸ್..!

ಕೆಜಿಎಫ್ ಚಿತ್ರತಂಡ  62ನೇ ವಸಂತಕ್ಕೆ ಕಾಲಿಟ್ಟ ಸಂಜಯ್ ದತ್ ಅವರಿಗೆ ಸರ್ಪ್ರೈಜ್ ಉಡುಗೊರೆ ನೀಡಿದೆ.

Written by - Puttaraj K Alur | Last Updated : Jul 29, 2021, 12:52 PM IST
  • ಸಂಜಯ್ ದತ್ 62ನೇ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಿತ್ರತಂಡದಿಂದ ಭರ್ಜರಿ ಉಡುಗೊರೆ
  • ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ‘ಅಧೀರ’ ಪಾತ್ರದ ಖಡಕ್ ಪೋಸ್ಟರ್ ರಿಲೀಸ್
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಆದ ‘ಅಧೀರ’ನ ಪೋಸ್ಟರ್
KGF Chapter 2: ಸಂಜಯ್ ದತ್ ಹುಟ್ಟುಹಬ್ಬಕ್ಕೆ ‘ಅಧೀರ’ನ ಖಡಕ್ ಪೋಸ್ಟರ್ ರಿಲೀಸ್..!  title=
‘ಅಧೀರ’ನ ಖಡಕ್ ಲುಕ್ ನಲ್ಲಿ ಸಂಜಯ್ ದತ್ (Photo Courtesy: Twitter/@prashanth_neel)

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಬಾಲಿವುಡ್ ಮುನ್ನಾಬಾಯ್ ಸಂಜಯ್ ದತ್ ವಿಲನ್ ಆಗಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಕೆಜಿಎಫ್ ಚಿತ್ರವು ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದು ಸಖತ್ ಸೌಂಡ್ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಇಡೀ ಭಾರತೀಯ ಚಿತ್ರರಂಗವೇ ತಲೆಬಾಗಿತ್ತು. ಹೀಗಾಗಿ ಕೆಜಿಫ್ ಚಾಪ್ಟರ್ 2 ಚಿತ್ರದ ಮೇಲೆ ಭಾರಿ ನಿರೀಕ್ಷೆ ಮೂಡಿದೆ. ಯಾವಾಗ ಈ ಸಿನಿಮಾ ರಿಲೀಸ್ ಆಗುತ್ತೋ ಅಂತಾ ಅಭಿಮಾನಿಗಳು ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಾರೆ.

ಇದೀಗ ಕೆಜಿಎಫ್ ಚಿತ್ರತಂಡ ಮತ್ತೊಂದು ಹೊಸ ಸುದ್ದಿಯನ್ನು ನೀಡಿದೆ. ಗುರುವಾರ 62ನೇ ವಸಂತಕ್ಕೆ ಕಾಲಿಟ್ಟ ಸಂಜಯ್ ದತ್ ಅವರಿಗೆ ಸರ್ಪ್ರೈಜ್ ಆಗಿ ಉಡುಗೊರೆ ನೀಡಿದೆ. ಹೌದು, ಕೆಜಿಎಫ್ ಚಾಪ್ಟರ್ 2(KGF Chapter 2)ನಲ್ಲಿ ಸಂಜಯ್ ದತ್ ಅವರ ‘ಅಧೀರ’ನ ಪಾತ್ರ(Adheera Poster)ದ ಖಡಕ್ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಈ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.

ನಿರ್ದೇಶಕ ಪ್ರಶಾಂತ್ ನೀಲ್(Prashanth Neel) ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ‘ಅಧೀರ’ನ ಪೋಸ್ಟರ್ ಹಂಚಿಕೊಂಡಿದ್ದಾರೆ. ‘ಯುದ್ಧ ಇರುವುದೇ ಪ್ರಗತಿಗಾಗಿ. ನನ್ನ ಈ ಮಾತನ್ನು ರಣಹದ್ದುಗಳು ಕೂಡ ಒಪ್ಪಿಕೊಳ್ಳುತ್ತವೆ’ ಎಂಬ ಡೈಲಾಗ್ ಜೊತೆಗೆ #Adheera ಹ್ಯಾಷ್ ಟ್ಯಾಗ್ ಬಳಸಿ ‘ಜನ್ಮದಿನದ ಶುಭಾಶಯಗಳು ಸಂಜಯ್ ದತ್ ಸರ್’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಮೇಲೆ ಮೂರು ಲಕ್ಷ ದಂಡ ಹಾಕಿದ SEBI

ಸಂಜಯ್​ ದತ್​ ಆಗಮನದಿಂದ ಯಶ್​ ಅಭಿನಯದ ‘ಕೆಜಿಎಫ್​ ಚಾಪ್ಟರ್​ 2’  ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಹೊಸ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಆ ನಿರೀಕ್ಷೆಯನ್ನು ಚಿತ್ರತಂಡ ದುಪ್ಪಟ್ಟು ಮಾಡಿದೆ. ಖಡ್ಗವನ್ನು ಹಿಡಿದುಕೊಂಡು ಬರುತ್ತಿರುವ ‘ಅಧೀರ’ನ ಪಾತ್ರದಲ್ಲಿ ಸಂಜಯ್ ದತ್ ಖಡಕ್ ಲುಕ್ ಗೆ. ಅಭಿಮಾನಿಗಳು ಫಿದಾ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಅಧೀರ’ನ ಪಾತ್ರದ ಪೋಸ್ಟರ್ ಟ್ರೆಂಡಿಂಗ್ ಆಗುತ್ತಿದೆ.    

ಸಂಜಯ್ ದತ್(Sanjay Dutt)ಅವರ ‘ಅಧೀರ’ನ ಪಾತ್ರ ತುಂಬಾ ಕ್ರೂರವಾಗಿರಲಿದೆ ಅಂತಾ ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿಕೊಂಡಿದ್ದರು. ಈಗ ರಿವೀಲ್ ಮಾಡಿರುವ ಪೋಸ್ಟರ್ ನೋಡಿದರೆ ಕೆಜಿಎಫ್ ಚಾಪ್ಟರ್ 2 ನಲ್ಲಿ ಸಂಜಯ್ ದತ್ ಪಾತ್ರ ಹೇಗಿರಲಿದೆ ಎಂಬುದು ಮನವರಿಕೆಯಾಗುತ್ತದೆ. ಸಂಜಯ್ ದತ್ ಕೂಡ ತಮ್ಮ ಟ್ವೀಟರ್ ಖಾತೆಯಲ್ಲಿ ‘ಅಧೀರ’ನ ಪೋಸ್ಟರ್ ಹಂಚಿಕೊಂಡಿದ್ದಾರೆ.  

ಹೊಂಬಾಳೆ ಫಿಲಂ ಸಂಸ್ಥೆಯ ಬ್ಯಾನರ್ ನಡಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ನಿರ್ಮಾಪಕ ವಿಜಯ್ ಕಿರಂಗದೂರು, ಕಾರ್ತಿಕ್ ಗೌಡ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಯಶ್, ಸಂಜಯ್ ದತ್ ಜೊತೆಗೆ ರವೀನಾ ಟಂಡನ್(Raveena Tandon), ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಮುಂತಾದವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರದ ಹಿಂದಿ ರೈಟ್ಸ್ ಬಹುದೊಡ್ಡ ಮೊತ್ತಕ್ಕೆ ಮಾರಾಟವಾಗಿರುವ ಬಗ್ಗೆಯೂ ವರದಿಯಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ.

ಇದನ್ನೂ ಓದಿ: GR in VR: ‘ವಿಕ್ರಾಂತ್ ರೋಣ’ದ ಜಾಕ್ವೆಲಿನ್ ಫರ್ನಾಂಡಿಸ್ ಫಸ್ಟ್ ಲುಕ್ ರಿಲೀಸ್..!

ಚಿತ್ರವನ್ನು ದಸರಾ ಹಬ್ಬದ ಪ್ರಯುಕ್ತ 2020ರ ಅಕ್ಟೋಬರ್ 23ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಮೊದಲು ಹೇಳಿಕೊಂಡಿತ್ತು. ಆದರೆ ಕೋವಿಡ್-19(COVID-19)ನಿಂದ ಮುಂದೂಡಿಕೆಯಾಯಿತು. ಬಳಿಕ 2021ರ ಜುಲೈ 16ಕ್ಕೆ ಬಿಡುಗಡೆ ಅಂತಾ ಘೋಷಿಸಲಾಗಿತ್ತು. ಆದರೆ ಕೋವಿಡ್-19 2ನೇ ಅಲೆ ಕಾರಣ ಮತ್ತೆ ಚಿತ್ರ ಬಿಡುಗಡೆಗೆ ವಿಳಂಬವಾಯಿತು. ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎನ್ನವ ನಿಖರ ಮಾಹಿತಿಯನ್ನು ಇನ್ನಷ್ಟೇ ಚಿತ್ರತಂಡ ಘೋಷಿಸಬೇಕಾಗಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

Trending News