ಕನ್ನಡ ಚಿತ್ರರಂಗದ ಹಿರಿಯ ನಟಿ, 'ಅಭಿನಯ ಶಾರದೆ' ಜಯಂತಿ ಇನ್ನಿಲ್ಲ!

ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಂತಿ ನಿಧನರಾಗಿದ್ದಾರೆ.

Written by - Zee Kannada News Desk | Last Updated : Jul 26, 2021, 10:25 AM IST
  • ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ವಿಧಿವಶರಾಗಿದ್ದಾರೆ
  • ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ 76 ವರ್ಷ ವಯಸ್ಸಾಗಿತ್ತು
  • ಜಯಂತಿ ನಿಧನಕ್ಕೆ ಕನ್ನಡ ಚಿತ್ರರಂಗದ ಪ್ರಮುಖರು ಸೇರಿ ಅನೇಕ ಗಣ್ಯರ ಕಂಬನಿ
ಕನ್ನಡ ಚಿತ್ರರಂಗದ ಹಿರಿಯ ನಟಿ, 'ಅಭಿನಯ ಶಾರದೆ' ಜಯಂತಿ ಇನ್ನಿಲ್ಲ! title=
ಹಿರಿಯ ನಟಿ ಜಯಂತಿ ವಿಧಿವಶರಾಗಿದ್ದಾರೆ (Photo Courtesy: Twitter/@BSBommai)

ಬೆಂಗಳೂರು: ಕನ್ನಡ ಚಿತ್ರರಂಗದ 'ಅಭಿನಯ ಶಾರದೆ' ಎಂದು ಪ್ರಖ್ಯಾತಗೊಂಡಿದ್ದ ಹಿರಿಯ ನಟಿ ಜಯಂತಿ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ  ಅವರಿಗೆ 76 ವರ್ಷ ವಯಸ್ಸಾಗಿತ್ತು.

1963ರಲ್ಲಿ ತೆರೆಕಂಡ 'ಜೇನುಗೂಡು' ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಜಯಂತಿ ತಮ್ಮ ವಿಶಿಷ್ಟ ಹಾಗೂ‌ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು. ಜಯಂತಿ ಅವರ ನಿಧನದಿಂದ ಕನ್ನಡ ಚಿತ್ರರಂಗದ ಮಾಣಿಕ್ಯವೊಂದು ಮರೆಯಾಗಿದೆ.

ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿ ಆಗಿದ್ದ ಜಯಂತಿಯವರು ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು ೫೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಜಯಂತಿ ನಿಧನಕ್ಕೆ ಕನ್ನಡ ಚಿತ್ರರಂಗದ ಪ್ರಮುಖರು, ರಾಜಕೀಯ ಗಣ್ಯರು ಸೇರಿದಂತೆ ಅನೇಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗದ ಮೇರುನಟಿಯಾಗಿದ್ದ ಜಯಂತಿಯವರು ಜನವರಿ 6, 1945ರಲ್ಲಿ ಈಗಿನ ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದರು. 1960, 1970 ಮತ್ತು 1980ರ ದಶಕದದಲ್ಲಿ ತಮ್ಮ ವಿಶಿಷ್ಟ ನಟನೆಯ ಮೂಲಕ ಮನೆಮಾತಾಗಿದ್ದರು..1968ರಲ್ಲಿ ತೆರೆಕಂಡ ವೈ.ಆರ್.ಸ್ವಾಮಿ ನಿರ್ದೇಶನದ ‘ಜೇನುಗೂಡು’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು ಕಮಲ ಕುಮಾರಿ. ಜೇನುಗೂಡು ಚಿತ್ರಕ್ಕಿಂತಲೂ ಮುನ್ನ ‘ಜಗದೇಕ ವೀರನ ಕಥೆ’ ಚಿತ್ರದ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ಒಟ್ಟು 6 ಭಾಷೆ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದಲ್ಲಿ 190ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ನಿರ್ಮಾಪಕಿ, ನಿರ್ದೇಶಕಿಯೂ ಆಗಿದ್ದ ಅವರು 1965ರ ‘ಮಿಸ್ ಲೀಲಾವತಿ’ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಎರಡು ಮುಖ(1969), ಮನಸ್ಸಿನಂತೆ ಮಾಂಗಲ್ಯ(1976), ಧರ್ಮ ದಾರಿ ತಪ್ಪಿತು(1981), ಮಸಣದ ಹೂವು(1985) ಮತ್ತು ಆನಂದ್(1986) ಚಿತ್ರಗಳ ಅಭಿನಯಕ್ಕಾಗಿ 5 ಬಾರಿ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಅಭಿನಯವು ಜಯಂತಿಯವರಿಗೆ ಖ್ಯಾತಿ ತಂದುಕೊಟ್ಟಿತ್ತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News