ಬೆಂಗಳೂರು: 2A ಮೀಸಲಾತಿಗಾಗಿ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪಂಚಮ ಸಾಲಿಗಳ ಧರಣಿ 31ನೇ ದಿನಕ್ಕೆ ಕಾಲಿಟ್ಟಿದೆ. 2A ಮೀಸಲಾತಿಗಾಗಿ ಪಟ್ಟು ಹಿಡಿದಿರುವ ಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ 30 ದಿನಗಳಿಂದ 2A ಮೀಸಲಾತಿಗಾಗಿ ಫ್ರೀಡಂ ಪಾರ್ಕ್ ಬಳಿ ಹೋರಾಟ ಮಾಡ್ತಿದ್ದೇವೆ. ನಾವು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡ್ತಿದ್ದೇವೆ. ಪ್ರಧಾನಿ ಮೋದಿಯವರನ್ನು ಸೆಳೆಯೋಮಟ್ಟಿಗೆ ನಮ್ಮ ಪಂಚಮಸಾಲಿ ಸಮುದಾಯ ಹೋರಾಟ ಮಾಡ್ತಿದೆ. ಇಂತಹ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಚಾಣಾಕ್ಷ್ಯದಿಂದ ಉತ್ತರ ಕೊಟ್ಟಿದ್ದರು.
ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ, ಪ್ರಧಾನಿ ಮೋದಿ ವಿರುದ್ಧ ಕೆಸಿಆರ್ ವಾಗ್ದಾಳಿ
ಆಯೋಗದ ರಿಪೋರ್ಟ್ ಬಂದ ಮೇಲೆ ಮೀಸಲಾತಿ ಕೊಡ್ತೀವಿ ಅಂದಿದ್ದರು. ನಾವೂ ಕಾನೂನು ಮೂಲಕವೇ ಬರಲಿ ಅಂತಾ ಸುಮ್ಮನಿದ್ವಿ. ಆದ್ರೆ ಅವರು ಈ ರೀತಿ ಆಯೋಗದ ಹೆಸರಲ್ಲಿ ನಮ್ಮ ಹೋರಾಟ ಹತ್ತಿಕ್ಕುತ್ತಿದ್ದಾರೆ. ಅಧಿವೇಶನ ಸಮಯದಲ್ಲಿ ಯಾರೂ ಮಾಡದಂತಹ ಪ್ರಮಾಣ ಮಾಡಿದ್ರು. ಡಿಸೆಂಬರ್ ನಲ್ಲಿ ಕೂಡ ಆಣೆ ಮಾಡಿದ್ರು. ನಮ್ಮ ಸಮುದಾಯದವರಿಗೆ ಎಮೋಷನಲ್ ಆಗಿ ಪ್ರಮಾಣ ಮಾಡಿದ್ದರು. ದೇವರ ಮೇಲೆ ಆಣೆ ಮಾಡಿದ್ರು, ಕೊನೆಗೆ ತಮ್ಮ ತಾಯಿ ಮೇಲೆಯೂ ಆಣೆ ಮಾಡಿ ವಿಧಾನಸೌದಕ್ಕೆ ಮುತ್ತಿಗೆ ಹಾಕ್ಬೇಡಿ ಅಂದಿದ್ದರು ಎಂದು ಕಿಡಿಕಾರಿದ್ದಾರೆ.
ಸಿಎಂ ಬೊಮ್ಮಾಯಿ ಮಾತು ಕೇಳಿ ನಾವು ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವು. ಸಚಿವ ಸಂಪುಟದಲ್ಲೂ ಅವರು 2ಎ ಮೀಸಲಾತಿ ಬಗ್ಗೆ ಮಾತನಾಡಲಿಲ್ಲ. ಇಷ್ಟೆಲ್ಲಾ ಆದ್ಮೇಲೆ ನಾವು ಮತ್ತೆ ಚಳುವಳಿ ಶುರು ಮಾಡಿದ್ದೇವೆ. ಕಳೆದ 30 ದಿನಗಳಿಂದ ಶುರು ಮಾಡಿದ್ದೇವೆ. ಇವತ್ತಿಗೆ 31ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಸರ್ಕಾರದ ಸಚಿವರು, ಸಿಎಂ ಇದರ ಬಗ್ಗೆ ತುಟಿಕ್ ಪಿಟಿಕ್ ಅಂತಿಲ್ಲ. ಹಿಂಗೇ ಮಾಡಿದ್ರೆ ಮುಂದೆ ಎಲೆಕ್ಷನ್ನಲ್ಲಿ ನಿಮಗೆ ಹೊಡೆತ ಬೀಳುತ್ತೆ. ನಮಗೆ ಅನ್ಯಾಯ ಮಾಡಿದ್ರೆ ಗಂಡಾಂತರ ತಪ್ಪಿದ್ದಲ್ಲವೆಂದು ಸರ್ಕಾರಕ್ಕೆ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ ಹೇಳಿಕೆಗಾಗಿ ರಾಹುಲ್ ಗಾಂಧಿಗೆ ನೋಟಿಸ್..!
ನಾವು 2 ವರ್ಷದಿಂದ ನಂಬಿದ್ದೀವಿ. ತಾಯಿ ಮೇಲೆ ಆಣೆ ಮಾಡಿದ್ರೂ ಮೋಸ ಮಾಡಿದ್ರಿ. 224ಕ್ಷೇತ್ರದಲ್ಲೂ ನಮ್ಮ ಸಮುದಾಯದವರು ಇದ್ದೇವೆ. ಕರ್ನಾಟಕದಲ್ಲಿ ಶೇ.15ರಷ್ಟು ಮತದಾರರಿದ್ದೀವಿ. ನಮಗೆ ಮೀಸಲಾತಿ ಕೊಡದಿದ್ರೆ ನಿಮಗೆ ವೋಟಿನ ಮೂಲಕ ಉತ್ತರ ಕೊಡ್ತೀವಿ. ಕಳೆದ ಬಾರಿ ನಮ್ಮ ಸಮುದಾಯ ನಿಮಗೆ ಸಪೋರ್ಟ್ ಮಾಡಿದೆ. ಆದ್ರೆ ಈ ಬಾರಿ ನಮ್ಮ ಕೈಬಿಟ್ರೆ ನಾವೂ ನಿಮ್ಮ ಕೈ ಬಿಡ್ತೀವಿ ಎಂದು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ನಾವು ಪ್ರಧಾನಿ ಮೋದಿಯವರಿಗೆ ಮನವಿ ಮಾಡ್ತಿದ್ದೀವಿ. ಪ್ರಧಾನಿ ಮೋದಿ, ಅಮಿತ್ ಶಾರಿಗೆ ಇದಕ್ಕೆ ಮಧ್ಯಸ್ಥಿಕೆ ವಹಿಸಲು ಮನವಿ ಮಾಡ್ತಿದ್ದೀವಿ. ಮೋದಿ ನೋಡಿ ನಾವು ಪಕ್ಷಕ್ಕೆ ವೋಟ್ ಹಾಕಿದ್ದೀವಿ. ನೀವೇ ಇದರ ಬಗ್ಗೆ ಗಮನ ವಹಿಸಬೇಕು. ಈ ಅಧಿವೇಶನ ಮುಗಿಯುವುದರೊಳಗೆ ನಮ್ಮ ಹೋರಾಟಕ್ಕೆ ಪ್ರತಿಫಲ ಬೇಕು. ನಮಗೆ 2A ಮೀಸಲಾತಿ ಕೊಡಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.