Zee Kannada News Explainer: ಕೊರೊನಾಗಿಂತ ಅಪಾಯಕಾರಿಯಾಗಿದೆಯೇ ಮಂಕಿಪಾಕ್ಸ್? ಇಲ್ಲಿದೆ ವಿಸ್ತೃತ ವರದಿ

Explainer On Monkeypox - ಯುರೋಪಿನಲ್ಲಿ ಮಂಕಿಪಾಕ್ಸ್ ಅಂದರೆ ಮಂಗನ ಕಾಯಿಲೆಯ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಡ್ವೈಸರಿ ಕೂಡ ಜಾರಿಗೊಳಿಸಿದೆ. ಹಾಗಾದರೆ, ಏನಿದು ಮಂಕಿಪಾಕ್ಸ್ ಕಾಯಿಲೆ? ನಿಜಕ್ಕೂ ಇದು ಕೊವಿಡ್ -19 ಗಿಂತ ಅಪಾಯಕಾರಿಯಾಗಿದೆಯಾ? ಇದಕ್ಕೆ ಲಸಿಕೆ ಅಥವಾ ಚಿಕಿತ್ಸೆಯೇ ಇಲ್ಲವೇ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಈ  Zee Kannada Explainer,  

Written by - Nitin Tabib | Last Updated : May 24, 2022, 05:26 PM IST
  • ಯುರೋಪ್ ಹಾಗೂ ಏಷ್ಯಾದ ಕೆಲ ಭಾಗಗಳಲ್ಲಿ ಮಂಕಿಪಾಕ್ಸ್ ಅಂದರೆ ಮಂಗನ ಕಾಯಿಲೆ ಭಾರಿ ಆತಂಕಕ್ಕೆ ಕಾರಣವಾಗಿದೆ.
  • ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಅಡ್ವೈಸರಿ ಕೂಡ ಜಾರಿಗೊಳಿಸಿದೆ.
  • ಹಾಗಾದರೆ ಕೊರೊನಾಗಿಂತ ಮಂಕಿಪಾಕ್ಸ್ ಅಪಾಯಕಾರಿಯಾಗಿದೆಯೇ? ಬನ್ನಿ ತಿಳಿದುಕೊಳ್ಳೋಣ
Zee Kannada News Explainer: ಕೊರೊನಾಗಿಂತ ಅಪಾಯಕಾರಿಯಾಗಿದೆಯೇ ಮಂಕಿಪಾಕ್ಸ್? ಇಲ್ಲಿದೆ ವಿಸ್ತೃತ ವರದಿ title=
Monkeypox Explainer

Explainer On Monkeypox  - ಯುರೋಪ್ ಹಾಗೂ ಏಷ್ಯಾದ ಕೆಲ ಭಾಗಗಳಲ್ಲಿ ಮಂಕಿಪಾಕ್ಸ್ ಅಂದರೆ ಮಂಗನ ಕಾಯಿಲೆ ಭಾರಿ ಆತಂಕಕ್ಕೆ ಕಾರಣವಾಗಿದೆ. ಮಂಕಿಪಾಕ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಇದೀಗ ಯುರೋಪ್ ನ ಅನೇಕ ದೇಶಗಳು ಈ ಕಾಯಿಲೆಯ ಹಿಡಿತಕ್ಕೆ ಸಿಲುಕಿಕೊಳ್ಳುತ್ತಿವೆ. ಸುಮಾರು 100ಕ್ಕೂ ಅಧಿಕ ಜನರು ಈ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಅಲರ್ಟ್ ಜಾರಿಗೊಳಿಸಿದೆ.

ಅಮೆರಿಕ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು WHO ಆತಂಕ ವ್ಯಕ್ತಪಡಿಸಿದೆ. ಇನ್ನೊಂದೆಡೆ, ಕೋವಿಡ್ ಸಾಂಕ್ರಾಮಿಕ ರೋಗಕ್ಕಿಂತ ಮಂಕಿಪಾಕ್ಸ್ ಸೋಂಕು ಹೆಚ್ಚು ಅಪಾಯಕಾರಿ ಸಾಬೀತಾಗಬಹುದೇ ಎಂಬ ಆತಂಕದಲ್ಲಿ ಆರೋಗ್ಯ ತಜ್ಞರಿದ್ದಾರೆ.

ಈ ಕುರಿತು ಮಾತನಾಡುವ ಮಕ್ಕಳ ತಜ್ಞ ಡಾ.ವಿನಯ್ ಮಿಶ್ರಾ ಅವರು, ಮಂಗನ ಕಾಯಿಲೆ ಮತ್ತು ಕೋವಿಡ್ ಸಾಂಕ್ರಾಮಿಕದ ಸ್ವರೂಪದಲ್ಲಿ ವ್ಯತ್ಯಾಸವಿದೆ ಎನ್ನುತ್ತಾರೆ. ಮಂಕಿಪಾಕ್ಸ್ ಸಾಂಕ್ರಾಮಿಕವಲ್ಲ ಮತ್ತು ಕೋವಿಡ್ ಸೋಂಕು ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ಮಂಕಿಪಾಕ್ಸ್ ಕೂಡ ವೈರಲ್ ಕಾಯಿಲೆಯಾಗಿದೆ ಆದರೆ ಇದು ಹೆಚ್ಚು ಸಾಂಕ್ರಾಮಿಕ ರೋಗಗಳ ಪಟ್ಟಿಯಲ್ಲಿ ಬರುವುದಿಲ್ಲ ಎಂದು ಅವರು ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.

ಮಂಗನ ಕಾಯಿಲೆ ಪ್ರಮುಖವಾಗಿ ಮಧ್ಯ ಮತ್ತು ಪಶ್ಚಿಮ ಆಪ್ರಿಕಾದ ದೇಶಗಳಲ್ಲಿ ಕಂಡು ಬರುವ ಸ್ಥಳೀಯ ಕಾಯಿಲೆಯಾಗಿದೆ. WHO ಪ್ರಕಾರ, ಉಷ್ಣವಲಯದ ಮಳೆಕಾಡು ಪ್ರದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತವೆ. ಆದರೆ, ಕಳೆದ ಕೆಲವು ದಿನಗಳಿಂದ ಜಗತ್ತಿನ ಹಲವೆಡೆ ಮಂಗನ ಕಾಯಿಲೆಯ ಪ್ರಕರಣಗಳು ವರದಿಯಾಗುತ್ತಿರುವುದು ಒಂದು ಆತಂಕಕಾರಿ ಸಂಗತಿಯಾಗಿದೆ.

ಕೊವಿಡ್ -19ಗಿಂತ ಅಪಾಯಕಾರಿಯಾಗಿದೆಯೇ ಮಂಕಿಪಾಕ್ಸ್?
ಒಟಾಗೋ ವಿಶ್ವವಿದ್ಯಾನಿಲಯದಲ್ಲಿ ಜೈವಿಕ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿರುವ ಕರ್ಟ್ ಕ್ರೌಸ್ ಅವರ ಪ್ರಕಾರ, ಕೋವಿಡ್‌ನಂತೆ ಮಂಕಿಪಾಕ್ಸ್ ಅಪಾಯಕಾರಿ ಕಾಯಿಲೆ ಅಲ್ಲ ಎನ್ನಲಾಗಿದೆ. ಇದುವರೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ದೃಢೀಕರಿಸಲ್ಪಟ್ಟ ಒಟ್ಟು 92 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, 28 ರೋಗಿಗಳು ಶಂಕಿತ ರೋಗಿಗಳಾಗಿದ್ದಾರೆ. ಅವರಲ್ಲಿಯೂ ಇದು ದೃಢಪಡಬಹುದು ಎಂದು WHO ಆತಂಕ ವ್ಯಕ್ತಪಡಿಸಿದೆ. ಮಂಕಿಪಾಕ್ಸ್ ಬಿಕ್ಕಟ್ಟು ವ್ಯಾಪಕವಾಗಿ ಹರಡದಂತೆ ದೇಶಗಳು ನಿಗಾ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಪ್ರೊ.ಕರ್ಟ್ ಪ್ರಕಾರ, ಮಂಕಿಪಾಕ್ಸ್ ಸ್ಮಾಲ್ ಪಾಕ್ಸ್ ಅಥವಾ ಚಿಕನ್ ಪಾಕ್ಸ್ ರೀತಿಯ ಒಂದು ಕಾಯಿಲೆಯಾಗಿದೆ. ಈ ಕಾಯಿಲೆಗೆ ತುತ್ತಾದ ಜನರು ಬೇಗನೆ ಗುಣಮುಖರಾಗಬಹುದು. ಇದೊಂದು ವೇಗವಾಗಿ ಹರಡುವ ಕಾಯಿಲೆ ಅಲ್ಲದಿದ್ದರೂ ಕೂಡ ಒಂದು ವಿಶೇಷ ಕ್ಷೇತ್ರದ ಜನರು ಇದರ ಬಾಧೆಗೆ ಒಳಗಾಗುವ ಸಾಧ್ಯತೆ ಇದೆ. ಒಬ್ಬರಿಂದ ಮತ್ತೊಬ್ಬರಿಗೆ ಇದು ವೇಗವಾಗಿ ಹರಡುವುದಿಲ್ಲ.

ಕೋವಿಡ್‌ನಿಂದ ಸಂಭವಿಸಿದ ಸಾವು-ನೋವುಗಳನ್ನು ಮಂಕಿಪಾಕ್ಸ್‌ಗೆ ಹೋಲಿಸಿದರೆ, ಇದರ ಸಾವಿನ ಪ್ರಮಾಣವು ಶೇ.1ರಷ್ಟಾಗಿದೆ. ಕೊವಿಡ್ ವಿಷಯದಲ್ಲಿ ಈ ಸಂಖ್ಯೆ 6,7 ಮತ್ತು ಕೆಲವೊಮ್ಮೆ 8ಕ್ಕೂ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಇದುವರೆಗಿನ ಅಂಕಿಅಂಶಗಳ ಪ್ರಕಾರ, ಕೋವಿಡ್‌ಗಿಂತ ಮಂಕಿಪಾಕ್ಸ್ ಹೆಚ್ಚು ಅಪಾಯಕಾರಿ ಅಲ್ಲ ಎಂದೇ ಹೇಳಬಹುದು. ಆದರೆ, ಮಂಕಿಪಾಕ್ಸ್ ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕಿಸಬೇಕು ಅಥವಾ ಕ್ವಾರಂಟೈನ್ ಮಾಡಬೇಕು, ಇದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಮಂಕಿಪಾಕ್ಸ್‌ನ ಲಕ್ಷಣಗಳೇನು?
ಐರೋಪ್ಯ ಪ್ರದೇಶದಲ್ಲಿನ ಯುಎನ್ ಹೆಲ್ತ್ ಏಜೆನ್ಸಿಯ ನಿರ್ದೇಶಕ ಡಾ ಹ್ಯಾನ್ಸ್ ಕ್ಲೂಗೆ ಪ್ರಕಾರ, ಜ್ವರ, ಚರ್ಮದ ದದ್ದು ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ರೋಗಲಕ್ಷಣಗಳು ಸಾಮಾನ್ಯವಾಗಿ ಈ ರೋಗದಲ್ಲಿ ಕಂಡುಬರುತ್ತವೆ. ಹಲವು ಬಾರಿ ದೇಹದಲ್ಲಿ ನೋವಿನ ಅನುಭವ ಉಂಟಾಗುತ್ತದೆ ಮತ್ತು ಚರ್ಮದ ಮೇಲೆ ಬೊಬ್ಬೆಗಳು ಹೊರಬರುತ್ತದೆ. ದೇಹದ ಮೇಲೆ ಕೆಂಪು ಕಲೆಗಳು ಸಹ ಕಾಣಿಸಿಕೊಳ್ಳುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ಸೋಂಕಿತ ರೋಗಿಗಳು ಯಾವುದೇ ಚಿಕಿತ್ಸೆಯಿಲ್ಲದೆ ಚೇತರಿಸಿಕೊಳ್ಳುತ್ತಾರೆ ಎನ್ನಲಾಗಿದೆ. 

ಯಾವ ರೋಗಿಗಳಿಗೆ ಹೆಚ್ಚು ಅಪಾಯಕಾರಿ?
ಡಾ. ಹ್ಯಾನ್ಸ್ ಕ್ಲೂಗ್ ಹೇಳುವ ಪ್ರಕಾರ, ಮಂಕಿಪಾಕ್ಸ್ನ ಹೆಚ್ಚಿನ ಪ್ರಕರಣಗಳಲ್ಲಿ, ಸೋಂಕಿತರು ಯಾವುದೇ ಚಿಕಿತ್ಸೆಯಿಲ್ಲದೆ ಕೆಲವೇ ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ, ಆದರೆ ರೋಗವು ಹೆಚ್ಚು ಗಂಭೀರವಾಗಬಹುದು. ಈ ರೋಗವು ಚಿಕ್ಕ ಮಕ್ಕಳು, ಗರ್ಭಿಣಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಅಪಾಯಕಾರಿ ಸಾಬೀತಾಗಬಹುದು ಎಂದು ಅವರು ಹೇಳುತ್ತಾರೆ. 

ಮೊಟ್ಟಮೊದಲು ಈ ಕಾಯಿಲೆ ಎಲ್ಲಿ ಕಾಣಿಸಿಕೊಂಡಿದೆ?
ಮಂಕಿಪಾಕ್ಸ್ ಎಂಬ ಹೆಸರು 1958 ರಲ್ಲಿ ಡ್ಯಾನಿಶ್ ಪ್ರಯೋಗಾಲಯದಲ್ಲಿ ಮಂಗಗಳಲ್ಲಿನ ವೈರಸ್ನ ಆರಂಭಿಕ ಆವಿಷ್ಕಾರದಿಂದ ಹುಟ್ಟಿಕೊಂಡಿದೆ. ಆದರೆ ಮಾನವರಲ್ಲಿ ಈ ವೈರಸ್‌ನ ಮೊದಲ ಪ್ರಕರಣವು 1970 ರಲ್ಲಿ ಕಾಂಗೋ ಗಣರಾಜ್ಯದ 9 ವರ್ಷದ ಹುಡುಗನಲ್ಲಿ ಪತ್ತೆಯಾಗಿತ್ತು. 1980 ರಲ್ಲಿ ಲಸಿಕೆ ಮೂಲಕ ಸ್ಮಾಲ್ ಪಾಕ್ಸ್ ಅಥವಾ ಸಿಡುಬು ರೋಗವನ್ನು ಇಡೀ ವಿಶ್ವದಿಂದಲೇ ಹೊರಹಾಕಲ್ಪಟ್ಟರೂ, ಮಂಕಿಪಾಕ್ಸ್ ಪ್ರಕರಣಗಳು ಇನ್ನೂ ಅನೇಕ ಮಧ್ಯ ಆಫ್ರಿಕನ್ ಮತ್ತು ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ಕಂಡುಬರುತ್ತಲೇ ಇವೆ. ಇದುವರೆಗೆ ಮಂಗನ ಕಾಯಿಲೆಯ ಅತಿ ಹೆಚ್ಚು ಪ್ರಕರಣಗಳು ಗ್ರಾಮೀಣ, ಮಳೆ ಪೀಡಿತ ಪ್ರದೇಶಗಳಿಂದ ವರದಿಯಾಗಿವೆ.

ಈ ಕಾಯಿಲೆಗೆ ಹಲವು ಪ್ರಾಣಿಗಳು ಕಾರಣ
ಅನೇಕ ಪ್ರಾಣಿ ಪ್ರಜಾತಿಗಳನ್ನು ಮಂಗನ ಕಾಯಿಲೆಗೆ ಕಾರಣವೆಂದು ಪರಿಗಣಿಸಲಾಗಿದೆ. ಈ ಪ್ರಾಣಿಗಳಲ್ಲಿ ಇಲಿಗಳು, ಅಳಿಲುಗಳು, ಡಾರ್ಮೌಸ್ ಗಳು ಶಾಮೀಲಾಗಿವೆ. ಅಂದರೆ ಮಾನವರಲ್ಲದ ಸಸ್ತನಿಗಳು ಇದರಲ್ಲಿ ಶಾಮೀಲಾಗಿವೆ. ಈ ವೈರಸ್ ಪ್ರಾಣಿಗಳಿಂದ ಮಾನವ ದೇಹವನ್ನು ಮುಖ್ಯವಾಗಿ ಮೂರು ರೀತಿಯಲ್ಲಿ ಪ್ರವೇಶಿಸುತ್ತದೆ. ಮೊದಲಿಗೆ, ಮೇಲೆ ತಿಳಿಸಲಾದ ಯಾವುದೇ ಪ್ರಾಣಿಗಳು ಮನುಷ್ಯರನ್ನು ಕಚ್ಚಿದಾಗ ಈ ಕಾಯಿಲೆ ಮನುಷ್ಯರಲ್ಲಿ ಹರಡುತ್ತದೆ. ಎರಡನೆಯದಾಗಿ, ಈ ಪ್ರಾಣಿಗಳು ತನ್ನ ಉಗುರುಗಳಿಂದ ಮನುಷ್ಯನ ಚರ್ಮವನ್ನು ಪರಚಿದಾಗ ಮತ್ತು ಮೂರನೆಯದಾಗಿ, ಬುಷ್ ಮಾಂಸವನ್ನು (ಈ ಪ್ರಾಣಿಗಳ ಬೇಟೆಯಿಂದ ಸಂಗ್ರಹಿಸಲಾದ ಮಾಂಸ) ಸೇವಿಸಿದಾಗ ಈ ಕಾಯಿಲೆ ಮನುಷ್ಯರಲ್ಲಿ ಹರಡುತ್ತದೆ. ಮಂಕಿಪಾಕ್ಸ್ ಹರಡುವಿಕೆಯು ಪ್ರಾಣಿಗಳಿಂದ ಮನುಷ್ಯರಿಗೆ ಸಂಭವಿಸುತ್ತದೆ, ಆದರೆ ಈ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ಇದುವರೆಗೆ ದೃಢಪಡಿಸಲಾಗಿಲ್ಲ. ಆದರೂ ಕೂಡ ಮಂಕಿಪಾಕ್ಸ್ ವೈರಸ್ ಸೋಂಕಿತ ವ್ಯಕ್ತಿಯಾ ಸಂಪರ್ಕಕ್ಕೆ ಬರುವ ಮೂಲಕ, ಚರ್ಮ, ಶ್ವಾಸನಾಳ, ಕಣ್ಣು, ಮೂಗು ಮತ್ತು ಬಾಯಿಯ ಮೂಲಕವೂ ಇದು ಹರಡುವ ಎಲ್ಲಾ ಸಾಧ್ಯತೆಗಳು ಇದೆ. 

ಇದನ್ನೂ ಓದಿ-Monkeypox: ಬ್ರಿಟನ್ ನಲ್ಲಿ ಮಂಗನ ಕಾಯಿಲೆಯ ಸಮುದಾಯ ಹರಡುವಿಕೆ ಆರಂಭ, ಕಟ್ಟೆಚ್ಚರ ಮೋಡ್ ನಲ್ಲಿ ಸರ್ಕಾರ

ಇದನ್ನು ಹರಡುವುದರಿಂದ ತಡೆಗಟ್ಟುವುದು ಹೇಗೆ?
ಎಲ್ಲಕ್ಕಿಂತ ಮೊದಲು ಮೇಲೆ ಸೂಚಿಸಲಾಗಿರುವ ಪ್ರಾಣಿಗಳು ಅಥವಾ ಅವುಗಳ ಮಾಂಸ ಸೇವನೆಯಿಂದ ದೂರ ಉಳಿಯಿರಿ. ಎರಡನೆಯದಾಗಿ ಮಂಕಿಪಾಕ್ಸ್ ಕಾಯಿಲೆಗೆ ಗುರಿಯಾದ ಯಾವುದೇ ಓರ್ವ ರೋಗಿ ನಿಮ್ಮ ಮುಂದೆ ಇದ್ದರೆ ಅಥವಾ ಮಂಕಿ ಪಾಕ್ಸ್ ಪ್ರಕರಣಗಳು ಹೆಚ್ಚಾಗಿರುವ ಪ್ರದೇಶದಲ್ಲಿ ನೀವು ವಾಸಿಸುತಿದ್ದರೆ, ಮಾಸ್ಕ್ ಧರಿಸಿ. ಚರ್ಮದ ಜೊತೆಗೆ ಸಂಪರ್ಕ ಕಡಿಮೆಗೊಳಿಸಿ. ಕನ್ನಡಕ ಧರಿಸಿ, ಅಲ್ಕೋಹಾಲ್ ಯುಕ್ತ ಸ್ಯಾನಿಟೈಸರ್ ನಿಂದ ಆಗ್ಗಾಗ ನಿಮ್ಮ ಕೈಗಳನ್ನು ಶುಚಿಗೊಳಿಸಿ. 

ಇದನ್ನೂ ಓದಿ-Monkeypox: ವಿಶ್ವದ ಹಲವು ದೇಶಗಳಲ್ಲಿ ಹರಡಿದ ಮಂಕಿಪಾಕ್ಸ್, ಭಾರತದ ವಿಮಾನ ನಿಲ್ದಾಣಗಳಲ್ಲಿಯೂ ಕೂಡ ಕಟ್ಟೆಚ್ಚರ

ಇದರ ಚಿಕಿತ್ಸೆ ಹೇಗೆ?
ಮಂಕಿಪಾಕ್ಸ್ ನ ಆರಂಭಿಕ ಲಕ್ಷಣಗಳು ಕಂಡು ಬಂದರೆ ತಕ್ಷಣವೆ ವೈದ್ಯರನ್ನು ಸಂಪರ್ಕಿಸಿ. ಜೊತೆಗೆ ರಕ್ತ ತಪಾಸಣೆಗೆ ಒಳಗಾಗಿ. ತಜ್ಞರು ಹೇಳುವ ಪ್ರಕಾರ, ಸ್ಮಾಲ್ ಪಾಕ್ಸ್ ಗೆ ಬಳಸಲಾಗುವ ವ್ಯಾಕ್ಸಿನ್, ಮಂಕಿಪಾಕ್ಸ್ ನಿಂದ ಕೂಡ ರಕ್ಷಣೆ ಒದಗಿಸುತ್ತದೆ ಎನ್ನಲಾಗಿದೆ. ಸ್ಮಾಲ್ ಪಾಕ್ಸ್ ನ ಚಿಕಿತ್ಸೆಗಾಗಿ ಬಳಸಲಾಗುವ MVA-BN ಲಸಿಕೆಗೆ 2019 ರಲ್ಲಿ ಮಂಕಿಪಾಕ್ಸ್ ಚಿಕಿತ್ಸೆಯ ಬಳಕೆಗೂ ಕೂಡ ಅನುಮೋದನೆ ದೊರೆತಿದೆ. ಆದರೆ, ಮಂಕಿಪಾಕ್ಸ್ ಅನ್ನು ವ್ಯಾಪಕ ರೂಪದಲ್ಲಿ ತಡೆಗಟ್ಟಲು ಯಾವುದೇ ವ್ಯಾಕ್ಸಿನ್ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಈ ವೈರಸ್ ಅನ್ನು ಮಟ್ಟಹಾಕಲು ಇಂದಿಗೂ ಕೂಡ ಅಧ್ಯಯನಗಳು ಮುಂದುವರೆದಿರುವುದು ಮಾತ್ರ ನಿಜ.

ಇದನ್ನೂ ನೋಡಿ - 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News