ಲಂಡನ್: ಸಾಮಾನ್ಯವಾಗಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಸ್ನಾಯುಗಳು ದುರ್ಬಲಗೊಂಡು ಕಾರ್ಯಗಳನ್ನು ನಿರ್ವಹಿಸಲು ತೊಂದರೆಯಾಗುವುದನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ. ಆದರೀಗ ಆ ಸ್ನ್ಯಾಯು ದೌರ್ಬಲ್ಯ ಸಮಸ್ಯೆಗೆ ವಿಟಮಿನ್ ಡಿ ಕೊರತೆಯೇ ಕಾರಣ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.
ಜೀವನದುದ್ದಕ್ಕೂ ಎಲುಬಿನ ಗೂಡಿನ ಸ್ನಾಯುಗಳ ಶಕ್ತಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ನಿಮಗೆ ಸ್ವಾತಂತ್ರ್ಯ, ಚಲನಶೀಲತೆ, ಜೀವನದ ಗುಣಮಟ್ಟವನ್ನು ಹೆಚ್ಚುಸುವಲ್ಲಿ ಸಹಾಯ ಮಾಡುತ್ತದೆ. ಪ್ರತಿರೋಧ ವ್ಯಾಯಾಮವು ಸ್ನಾಯುಗಳನ್ನು ಬಲಪಡಿಸಿದರೂ ಸಹ, ಸಾಕಷ್ಟು ವಿಟಮಿನ್ ಡಿ ಅಂಶ ಸ್ನಾಯುಗಳಿಗೆ ಶಕ್ತಿ ನೀಡುತ್ತದೆ.
ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾದಲ್ಲಿ ವಯಸ್ಸಾದಂತೆ ಸ್ನಾಯುಗಳು ಬಲವಿಲ್ಲದೆ, ದೈಹಿಕ ಚಟುವಟಿಕೆಗಳು ಕುಂಠಿತವಾಗುತ್ತದೆ ಎಂದು ಐರ್ಲೆಂಡ್ನ ಟ್ರಿನಿಟಿ ಕಾಲೇಜ್ ಡಬ್ಲಿನ್ನಲ್ಲಿ ಪೌಷ್ಠಿಕಾಂಶದ ಸಹಾಯಕ ಪ್ರಾಧ್ಯಾಪಕರಾದ ಮಾರಿಯಾ ಒ ಸುಲ್ಲಿವಾನ್ ಹೇಳಿದ್ದಾರೆ.
ಇಂಗ್ಲಿಷ್ ಲಾಂಗಿಟ್ಯೂಡಿನಲ್ ಸ್ಟಡಿ ಆಫ್ ಏಜಿಂಗ್ (ಇಎಲ್ಎಸ್ಎ) ಸಂಗ್ರಹಿಸಿದ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 4,000 ಕ್ಕೂ ಹೆಚ್ಚು ವಯಸ್ಕರ ಮಾಹಿತಿಯ ವಿಶ್ಲೇಷಣೆಯನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದ್ದು, ವಿಟಮಿನ್ ಡಿ ಸಮರ್ಪಕತೆಗೆ ಹೋಲಿಸಿದರೆ ವಿಟಮಿನ್ ಡಿ ಕೊರತೆಯಿರುವ ವಯಸ್ಸಾದವರಲ್ಲಿ ಸ್ನಾಯು ದೌರ್ಬಲ್ಯತೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಅಂತಾರಾಷ್ಟ್ರೀಯ ಜರ್ನಲ್ ಕ್ಲಿನಿಕಲ್ ಇಂಟರ್ವೆನ್ಶನ್ಸ್ ಇನ್ ಏಜಿಂಗ್ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಬಹಿರಂಗಪಡಿಸಿದೆ.