ಬಾಡಿ ಬಿಲ್ಡ್ ಮಾಡಲು ಬಯಸುವವರಿಗೆ, ಹಾಗೇ ತೂಕ ಕಡಿಮೆ ಮಾಡಿಕೊಳ್ಳಬೇಕು ಅನ್ನೋರಿಗೆ ಎಲ್ಲರೂ ಮೊದಲು ಸಲಹೆ ನೀಡುವುದು ಚಿಕನ್. ಯಾಕಂದ್ರೆ ಚಿಕನ್'ನಲ್ಲಿ ಅತಿ ಕಡಿಮೆ ಕೊಬ್ಬಿನಂಶ ಇದ್ದು, ಹೆಚ್ಚು ಪ್ರೊಟೀನುಗಳಿವೆ ಎಂದೇ ನಂಬಲಾಗಿದೆ. ಹಾಗಾಗಿ ಚಿಕನ್ ಆರೋಗ್ಯಕ್ಕೆ ಒಳ್ಳೆಯ ಅಹಾರವೇ. ಆದರೆ ಅತ್ಯುತ್ತಮ ಆಹಾರವಲ್ಲ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
ಹಾಗಂತ ಚಿಕನ್'ನಲ್ಲಿ ಒಳ್ಳೆಯ ಅಂಶಗಳಿಲ್ಲ ಎಂದಲ್ಲ. ಇದರಲ್ಲಿ ವಿಟಮಿನ್ ಬಿ, ಸಿ, ಸೇಲೆನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಜಿಂಕ್, ಮೆಗ್ನಿಶಿಯಂ ಮೊದಲಾದ ಅಂಶಗಳಿವೆ. ಆದರೆ, ನೀವು ಸೇವಿಸುವ ತರಕಾರಿಗಳು ಮತ್ತು ಮೀನಿಗಿಂತ ಉತ್ತಮ ಆಹಾರವಲ್ಲ ಎನ್ನಲಾಗಿದೆ. ಚಿಕನ್ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದೇ ಆದರೂ, ಬಹಳಷ್ಟು ಅಡ್ಡ ಪರಿಣಾಮಗಳಿವೆ.
ಚಿಕನ್ (ಕೋಳಿ ಮಾಂಸ) ಸೇವನೆಯಿಂದಾಗುವ ದುಷ್ಪರಿಣಾಮಗಳು
1. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ
ಒಂದು ಕೋಳಿ ಪ್ರೌಢಾವಸ್ಥೆಗೆ ಬರಲು ಕನಿಷ 50 ದಿನಗಳಾದರೂ ಬೇಕು. ಆದರೆ ಅವುಗಳನ್ನು ಬಲವಂತವಾಗಿ ಅತಿ ಕಡಿಮೆ ಅವಧಿಯಲ್ಲಿ ಪ್ರೌಢಾವಸ್ಥೆಗೆ ಬರುವಂತೆ ಮಾಡಲಾಗುತ್ತದೆ. ಅಲ್ಲದೆ, ಅವುಗಳ ಆಹಾರ ಮತ್ತು ವಾಸಿಸುವ ಸ್ಥಳದ ಬಗ್ಗೆ ಹೆಚ್ಚಿನ ನಿಗಾ ವಹಿಸದ ಕಾರಣ ಕೋಳಿಗಳು ತಮ್ಮಲ್ಲಿನ ಪೌಷ್ಟಿಕತೆ ಕಳೆದುಕೊಳ್ಳುವುದರಿಂದ, ಮುಂದೆ ಇದನ್ನು ಸೇವಿಸುವ ಜನರು ಹಲವು ರೋಗಗಳಿಗೆ ತುತ್ತಾಗುತ್ತಾರೆ. ಅದರಲ್ಲೂ ಬಾಯ್ಲರ್ ಕೋಳಿಗಳು ಹೆಚ್ಚು ಅಪಾಯಕಾರಿ. ಇದರಲ್ಲಿರುವ ಬ್ಯಾಕ್ಟಿರಿಯಾಗಳು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ. ಅಲ್ಲದೆ, ನೀವು ಸೇವಿಸುವ ಆಹಾರ ವಿಷಾಹಾರವಾಗಿಯೂ ಪರಿಣಾಮ ಬೀರಬಹುದು.
2. ಸ್ತನ ಕ್ಯಾನ್ಸರ್'ಗೆ ತುತ್ತಾಗುವ ಸಾಧ್ಯತೆ
ಪ್ರತಿನಿತ್ಯ ಅಥವಾ ಎರಡು ದಿನಕ್ಕೊಮ್ಮೆ ಚಿಕನ್ ತಿನ್ನುವುದರಿಂದ ದೇಹದಲ್ಲಿ ಆರ್ಸೆನಿಕ್ ಅಂಶ ಹೆಚ್ಚಾಗುತ್ತದೆ. ಮಹಿಳೆಯರ ದೇಹದಲ್ಲಿ ಆರ್ಸೆನಿಕ್ ಅಂಶ ಹೆಚ್ಚಾಗುವುದರಿಂದ ಇದು ಸ್ತನ ಕ್ಯಾನ್ಸರ್'ಗೆ ಕಾರಣವಾಗುತ್ತದೆ. ಬಾಡಿ ಬಿಲ್ಡ್ ಮಾಡಲು ಹೆಚ್ಚು ಚಿಕನ್ ಸೇವಿಸುವವರು ಈ ಕಾಯಿಲೆಗೆ ತುತ್ತಾಗುತ್ತಾರೆ. ಅಲ್ಲದೆ, ಬುದ್ಧಿಮಾಂದ್ಯತೆ ಮತ್ತು ಇತರ ನರ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆಯೂ ಹೆಚ್ಚು.
3. ಅತಿ ಹೆಚ್ಚು ಸೋಂಕು ತಗುಲುವ ಸಾಧ್ಯತೆ
ಕೋಳಿಗಳ ಜೀವಿತಾವಧಿ 10 ರಿಂದ 12 ವರ್ಷಗಳು. ಹಾಗೇ ಅವುಗಳು ಪ್ರೌಢಾವಸ್ಥೆಗೆ ಬರಲು ಕನಿಷ ಎಂದರೂ 50 ರಿಂದ 60 ದಿನಗಳು ಬೇಕಾಗುತ್ತದೆ. ಆದರೆ ಪೌಲ್ಟ್ರಿ ಉದ್ದಿಮೆದಾರರು ಕೋಳಿಗಳು ವೇಗವಾಗಿ ಬೆಳೆಯುವಂತೆ ಮಾಡಲು ಅವುಗಳ ತೊಡೆಯ ಭಾಗಗಳಿಗೆ ಸ್ಟೆರಾಯಿಡ್ ನೀಡಿ ಕೇವಲ 30 ದಿನಗಳಲ್ಲೇ ಅವುಗಳ ತೂಕ ಹೆಚ್ಚುವಂತೆ ಮಾಡಿ, ಮಾಂಸದ ಅಂಗಡಿಗಳಿಗೆ ಸರಬರಾಜು ಮಾಡಿ ಕೋಟಿಗಟ್ಟಲೆ ಹಣವನ್ನು ಗಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಪೌಲ್ಟ್ರಿಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡದಿರುವುದರಿಂದ ಹಾಗೂ ಮಾಂಸದ ಅಂಗಡಿಗಳಲ್ಲಿ ಕೋಳಿ ಮಾಂಸವನ್ನು ಸೂಕ್ತ ರೀತಿಯಲ್ಲಿ ಸ್ವಚ್ಛ ಮಾಡದ ಕಾರಣ, ಇದನ್ನು ಸೇವಿಸುವುದರಿಂದ ದೇಹಕ್ಕೆ ಸೋಂಕು ತಗಲುವ ಸಾಧ್ಯತೆ ಹೆಚ್ಚು.
4. ದೇಹದ ತೂಕ ಹೆಚ್ಚಾಗುತ್ತದೆ
ಚಿಕನ್ ಸೇವನೆಯಿಂದ ದೇಹದ ತೂಕ ಹೆಚ್ಚಾಗುವುದಿಲ್ಲ ಎಂದೇ ಹೇಳಲಾಗುತ್ತದೆ. ಆದರೆ ಚಿಕನ್ ಬಿಳಿ ಮಾಂಸ ಆಗಿರುವುದರಿಂದ ನಾರಿನಂಶ ಕಡಿಮೆ ಇರುತ್ತದೆ. ಆದರೆ ಅತಿ ಹೆಚ್ಚು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಹಾಗಾಗಿ ಚಿಕನ್ ಸೇವನೆಯಿಂದ ದೇಹದ ಕ್ಯಾಲೋರಿ ಪ್ರಮಾಣ ಹೆಚ್ಚಾಗುವುದರಿಂದ ತೂಕವೂ ಕ್ರಮೇಣ ಹೆಚ್ಚಾಗುತ್ತದೆ.
5. ಪುರುಷ ಬಂಜೆತನ
ಬಾಯ್ಲರ್ ಚಿಕನ್ ಸೇವನೆಯಿಂದ ಪುರುಷರಲ್ಲಿ ಬಂಜೆತನ ಪ್ರಮಾಣ ಹೆಚ್ಚಾಗುತ್ತದೆ. ಬಾಯ್ಲರ್ ಕೋಳಿಯಲ್ಲಿರುವ ರಾಸಾಯನಿಕ ಅಂಶಗಳು ಪುರುಷರಲ್ಲಿನ ವೀರ್ಯಾಣು ಸಂಖ್ಯೆಯನ್ನು ಕಡಿಮೆಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯೊಂದು ಹೇಳಿದೆ. ಹಾಗಾಗಿ ಪುರುಷರು ಆದಷ್ಟು ನಾಟಿ ಕೋಳಿ ಸೇವನೆ ಮಾಡುವುದು ಸೂಕ್ತ.