ದೆಹಲಿಯಲ್ಲಿ ಮೆಟ್ರೋ ಟ್ರ್ಯಾಕ್‌ ಮೇಲೆ ಹಾರಿದ ವ್ಯಕ್ತಿ, ಯೆಲ್ಲೋ ಲೈನ್ ಸೇವೆ ಸ್ಥಗಿತ

ಪ್ರಯಾಣಿಕರೊಬ್ಬರು ಮೆಟ್ರೊ ಟ್ರ್ಯಾಕ್‌ನಲ್ಲಿ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

Updated: Sep 16, 2019 , 10:12 AM IST
ದೆಹಲಿಯಲ್ಲಿ ಮೆಟ್ರೋ ಟ್ರ್ಯಾಕ್‌ ಮೇಲೆ ಹಾರಿದ ವ್ಯಕ್ತಿ, ಯೆಲ್ಲೋ ಲೈನ್ ಸೇವೆ ಸ್ಥಗಿತ

ನವದೆಹಲಿ: ದೆಹಲಿ ಮೆಟ್ರೋದ ಜಿಟಿಬಿ ನಗರ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮೆಟ್ರೊ ಟ್ರ್ಯಾಕ್‌ನಲ್ಲಿ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಪ್ರಕಾರ, ವ್ಯಕ್ತಿಯೊಬ್ಬರು ಮೆಟ್ರೊ ಮಾರ್ಗದಲ್ಲಿ ಹಾರಿ, ಸಮೈಪುರ್ ಬದ್ಲಿ ಮತ್ತು ವಿಶ್ವ ವಿದ್ಯಾಲಯ ನಡುವಿನ ರೈಲು ಸೇವಾ ಕಾರ್ಯಾಚರಣೆಯನ್ನು ಅಡ್ಡಿಪಡಿಸಿದ್ದಾರೆ. ಆದಾಗ್ಯೂ, ಇತರ ಎಲ್ಲ ಮಾರ್ಗಗಳಲ್ಲಿ ಮೆಟ್ರೋ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.

ಸೆಪ್ಟೆಂಬರ್ 11 ರಂದು, ಮೆಟ್ರೊದಲ್ಲಿ ಅದೇ ಮಾರ್ಗದಲ್ಲಿ ಟ್ರ್ಯಾಕ್ನಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಘಟನೆಯ ನಂತರ, ಸಮೈಪುರ್ ಬದ್ಲಿ ಮತ್ತು ವಿಶ್ವವಿದ್ಯಾಲಯ ನಿಲ್ದಾಣದ ನಡುವಿನ ಸಂಚಾರಕ್ಕೆ ತೊಂದರೆಯಾಯಿತು. ಕಳೆದ ಏಳು ತಿಂಗಳಲ್ಲಿ ಮೆಟ್ರೋ ಟ್ರ್ಯಾಕ್‌ನಲ್ಲಿ ಹಾರಿ ಮೃತಪಟ್ಟವರ ಸಂಖ್ಯೆ 41 ಕ್ಕೆ ತಲುಪಿದೆ.

ಡಿಎಂಆರ್‌ಸಿಯ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಇಂತಹ ಘಟನೆಗಳನ್ನು ನಿಲ್ಲಿಸಲಾಗುತ್ತಿಲ್ಲ. ಇಂತಹ ಘಟನೆಗಳನ್ನು ತಡೆಯುವ ಸಲುವಾಗಿ ಡಿಎಂಆರ್‌ಸಿ ಅಭಿಯಾನವನ್ನು ಪ್ರಾರಂಭಿಸಿದೆ. ವಾಸ್ತವವಾಗಿ ಮಾನಸಿಕ ತೊಂದರೆಗಳು ಮತ್ತು ಒಂಟಿತನದಿಂದ ಹೋರಾಡುವ ಜನರಿಗಾಗಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಮೆಟ್ರೊದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳಲ್ಲಿ ಹೆಚ್ಚಿನವರು ಮಾನಸಿಕ ತೊಂದರೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಅಭಿಯಾನಕ್ಕೆ 'ನೆವರ್ ಗಿವ್ ಅಪ್' ಎಂದು ಹೆಸರಿಸಲಾಗಿದೆ. ಈ ಅಭಿಯಾನವನ್ನು ಉತ್ತೇಜಿಸಲು ಮೆಟ್ರೋ ಮ್ಯೂಸಿಯಂನಲ್ಲಿ ಒಂದು ಫಲಕವನ್ನು ಸ್ಥಾಪಿಸಲಾಗಿದೆ. ಜನರ ದುಃಖವನ್ನು ಕಡಿಮೆಗೊಳಿಸುವ ಹಾಗೂ ಮನಸ್ಸಿಗೆ ಸಮಾಧಾನ ನೀಡುವ ಘೋಷಣೆ ಅಥವಾ ಸಣ್ಣ ಕವಿತೆಗಳನ್ನು ಹಂಚಿಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.