ವಿಶ್ವಸಂಸ್ಥೆ ವರದಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

 ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗದ ವರದಿ ಪ್ರೇರೇಪಿತವಾಗಿದ್ದು, ಪಾಕಿಸ್ತಾನದ ಆರೋಪಗಳ ಮೇರೆಗೆ ವರದಿ ತಯಾರಿಸಲಾಗಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

Updated: Jun 27, 2018 , 03:11 PM IST
ವಿಶ್ವಸಂಸ್ಥೆ ವರದಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ: ಸೇನಾ ಮುಖ್ಯಸ್ಥ ಬಿಪಿನ್ ರಾವತ್

ನವದೆಹಲಿ: ಜಮ್ಮು-ಕಾಶ್ಮೀರದ ಬಗ್ಗೆ ವಿಶ್ವಸಂಸ್ಥೆ ವಿವಾದಾತ್ಮಕ ವರದಿಯಲ್ಲಿರುವ ಅಂಶಗಳನ್ನು ವಿರೋಧಿಸಿರುವ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ವರದಿ 'ಪೂರ್ವಾಗ್ರಹಪೀಡಿತ' ಎಂದು ಹೇಳಿದ್ದಾರೆ.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ವಿಶ್ವ ಸಂಸ್ಥೆಯು ಜಮ್ಮು-ಕಾಶ್ಮೀರದ ಬಗ್ಗೆ ನೀಡಿರುವ ವರದಿಗೆ ಮಹತ್ವ ನೀಡುವ ಅಗತ್ಯವಿಲ್ಲ. ವಿಶ್ವಸಂಸ್ಥೆಯ ಮಾನವಹಕ್ಕು ಆಯೋಗದ ವರದಿ ಪ್ರೇರೇಪಿತವಾಗಿದ್ದು, ಪಾಕಿಸ್ತಾನದ ಆರೋಪಗಳ ಮೇರೆಗೆ ವರದಿ ತಯಾರಿಸಲಾಗಿದೆ. ಭಾರತೀಯ ಸೇನೆಯ ಮಾನವೀಯತೆ ಬಗ್ಗೆ ಇಡೀ ದೇಶಕ್ಕೇ ತಿಳಿದಿದೆ. ಹಾಗಾಗಿ ಈ ವರದಿಗೆ ಹೆಚ್ಚು ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ವರದಿಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ ಕೂಡ 'ವಿಶ್ವ ಸಂಸ್ಥೆ ವರದಿಯಲ್ಲಿ ಮಾಹಿತಿಗಳನ್ನು ಪರಿಶೀಲಿಸದೆ ತಯಾರಿಸಲಾಗಿದೆ. ಇದು ಪ್ರೇರೇಪಿತ ವರದಿ ಮತ್ತು ತಪ್ಪುದಾರಿಗೆಳೆಯುವ ಪ್ರಯತ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತ್ತು.

"ಈ ವರದಿಯು ಭಾರತದ ಸಾರ್ವಭೌಮತ್ವ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಪಾಕಿಸ್ತಾನ ಕಾಶ್ಮೀರದ ಕೆಲವೊಂದು ಭಾಗಗಳನ್ನು ಅಕ್ರಮವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿದ್ದು, ಅದನ್ನು ಬಿಟ್ಟುಕೊಡಲು ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೆ, ಇದೀಗ ವಿಶ್ವಸಂಸ್ಥೆಯು ತನ್ನ ವರದಿಯಲ್ಲಿ ಭಾರತದ ಭೂಪ್ರದೇಶದ ಬಗ್ಗೆ ತಪ್ಪಾಗಿ ವಿವರಣೆ ನೀಡಿರುವುದು ಪೂರ್ವಾಗ್ರಹಪೀಡಿತ ಮತ್ತು ತಪ್ಪುದಾರಿಗೆಳೆಯುವ ಪ್ರಯತ್ನ. ಇದು ಸ್ವೀಕಾರಾರ್ಹವಲ್ಲ. ಇಲ್ಲಿ 'ಅಜಾದ್ ಜಮ್ಮು ಮತ್ತು ಕಾಶ್ಮೀರ' ಮತ್ತು 'ಗಿಲ್ಗಿಟ್-ಬಾಲ್ಟಿಸ್ತಾನ್' ಎಂಬ ಯಾವುದೇ ಘಟಕದ ಅಸ್ತಿತ್ವವಿಲ್ಲ" ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಇತ್ತೀಚೆಗೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗವು ಕಾಶ್ಮೀರ ಮತ್ತು ಪಾಕಿಸ್ತಾನದ ಮಾನವಹಕ್ಕುಗಳ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಸುಮಾರು 42 ಪುಟಗಳ ವರದಿಯನ್ನು ಸಲ್ಲಿಸಿತ್ತು. ಈ ವರದಿ ರಾಜಕೀಯ ತಜ್ಞರು ಮತ್ತು ಸೇನಾ ಪರಿಣಿತರಿಂದ ಸಾಕಷ್ಟು ಟೀಕೆಗೆ ಒಳಗಾಗಿದೆ.