ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನವೆಂಬರ್ ತಿಂಗಳಿನಲ್ಲಿ ಹಿಂದೆಂದಿಗಿಂತಲೂ ವಾಯುಮಾಲಿನ್ಯ ಮಿತಿ ಮೀರಿದ್ದು, ಇದರ ನಿಯಂತ್ರಣಕ್ಕಾಗಿ ಮೋಡ ಬಿತ್ತನೆ ಮೂಲಕ ಕೃತಕ ಮಳೆ ಬರಿಸಳು ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಪರಿಸರ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ.
ನವೆಂಬರ್ ಮೊದಲ ವಾರದಲ್ಲಿ 'ಸಾಧಾರಣ', 'ಕಳಪೆ' ಮಟ್ಟದಲ್ಲಿದ್ದ ವಾಯುಮಾಲಿನ್ಯ, ಮೂರನೇ ವಾರದಲ್ಲಿ 'ಅಪಾಯಕಾರಿ ಹಂತ ತಲುಪಿದೆ. ದೀಪಾಳಿಯ ನಂತರದ ದಿನಗಳಲ್ಲಿ ವಾಯುಗುಣದ ಸ್ಥಿತಿ ತೀವ್ರ ಅಪಾಯದ ಹಂತ ತಲುಪಿದೆ. ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಕೆಲ ದಿನಗಳ ಕಾಲ ನಗರಕ್ಕೆ ಟ್ರಕ್ ಗಳ ಪ್ರವೇಶ ನಿಷೇಧಿಸಲಾಗಿತ್ತಾದರೂ, ಈ ಕ್ರಮ ವಾಯುಮಾಲಿನ್ಯ ನಿಯಂತ್ರಣಕ್ಕೆ ಅಂತಿಮ ಪರಿಹಾರವಲ್ಲ ಎಂದು ಸುಪ್ರೀಂ ಕೋರ್ಟ್ ನೇಮಿಸಿರುವ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಮೋಡಬಿತ್ತನೆ ಮಾಡಿ ಕೃತಕ ಮಳೆ ಬರಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಚರ್ಚೆ ನಡೆಸಿ ಶೀಘ್ರದಲ್ಲಿಯೇ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶರ್ಮಾ ಹೇಳಿದ್ದಾರೆ.