ಸರ್ಕಾರಿ ಅಧಿಕಾರಿಯನ್ನು ಥಳಿಸಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಅರೆಸ್ಟ್

ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗಿಯ ಪುತ್ರ ಶಾಸಕ ಆಕಾಶ್ ಅವರು ಮುನಿಸಿಪಲ್ ಕಾರ್ಪೋರೇಶನ್ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಥಳಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾದ ಬೆನ್ನಲ್ಲೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Updated: Jun 26, 2019 , 06:51 PM IST
ಸರ್ಕಾರಿ ಅಧಿಕಾರಿಯನ್ನು ಥಳಿಸಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಅರೆಸ್ಟ್

ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿ ಅಕ್ರಮ ಕಟ್ಟಡ ನೆಲಸಮ ಕಾರ್ಯಾಚರಣೆಗೆ ಆಗಮಿಸಿದ್ದ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರನ್ನು ಥಳಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗೀಯ ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಆಕಾಶ್ ವಿರುದ್ಧ ಇಂದೋರ್‌ನ ಎಂಜಿ ರೋಡ್ ಪೊಲೀಸ್ ಠಾಣೆಯಲ್ಲಿ ಐಪಿಸಿ 353, 294, 506, 147, 148 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಆಕಾಶ್ ಅವರನ್ನು ಬಂಧಿಸಿರುವ ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಕೈಲಾಶ್ ವಿಜಯವರ್ಗಿಯ ಪುತ್ರ ಶಾಸಕ ಆಕಾಶ್ ಅವರು ಮುನಿಸಿಪಲ್ ಕಾರ್ಪೋರೇಶನ್ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್‌ನಿಂದ ಹೊಡೆದು ಥಳಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾದ ಬೆನ್ನಲ್ಲೇ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ನಗರದ ಗಂಜಿ ಕಾಂಪೌಂಡ್ ಪ್ರದೇಶದಲ್ಲಿ ಆಕಾಶ್ ಮತ್ತು ಇತರ ಬೆಂಬಲಿಗರು ಕಟ್ಟಡವನ್ನು ಕೆಡವಲು ಬಂದ ಅಧಿಕಾರಿಯನ್ನು ತಡೆಯಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಲು ಆಕಾಶ್ ತನ್ನ ಕೈಯಲ್ಲಿದ್ದ ಬ್ಯಾಟ್ ಬಳಸಿದರೆ, ಅವರ ಬೆಂಬಲಿಗರು ಕೂಡ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ದೃಶ್ಯ ಕ್ಯಾಮರಾದಲ್ಲಿ ದಾಖಲಾಗಿದೆ..

ಆದಾಗ್ಯೂ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿರುವ ಆಕಾಶ್, ಕಾಂಗ್ರೆಸ್ ನಾಯಕರು ಕಟ್ಟಡವನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರನ್ನು ತಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದ್ದಾರೆ.

"ಕಟ್ಟಡವನ್ನು ವಶಪಡಿಸಿಕೊಳ್ಳಲು ಕಾಂಗ್ರೆಸ್ ಮುಖಂಡ ಸಜ್ಜನ್ ಸಿಂಗ್ ವರ್ಮಾ ಕೆಲವರನ್ನು ಕಳುಹಿಸಿದ್ದು, ಅವರಿಗೆ ಮಹಾನಗರ ಪಾಲಿಕೆ ಕಾರ್ಮಿಕರು ಸಹಾಯ ಮಾಡುತ್ತಿದ್ದಾರೆ. ಅಲ್ಲದೆ, ಕೆಲವು ಮುನ್ಸಿಪಲ್ ಕಾರ್ಪೋರೇಶನ್ ಕಾರ್ಮಿಕರು ಆ ಕಟ್ಟದಲ್ಲಿ ವಾಸವಿದ್ದ ಮಹಿಳೆಯ ಕಾಲುಗಳನ್ನು ಹಿಡಿದೆಳೆದು ಹೊರಹಾಕಲು ಪ್ರಯತ್ನಿಸುತ್ತಿದ್ದರು. ಈ ಘಟನೆಯೇ ಮುನ್ಸಿಪಲ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಕಾರಣವಾಯಿತು" ಎಂದು ಆಕಾಶ್ ಹೇಳಿದ್ದಾರೆ.