ನವದೆಹಲಿ: 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರ ಠೇವಣಿ ಮೊತ್ತದ ಪ್ರಮಾಣ ಶೇ.80ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಹಂಗಾಮಿ ಹಣಕಾಸು ಸಚಿವ ಪಿಯುಶ್ ಗೋಯಲ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
2014-17ರ ಅವಧಿಯಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಒಟ್ಟಾರೇ ಶೇ. 50 ರಷ್ಟು ಕಾನೂನು ಹೊಣೆಗಾರಿಕೆಗಳನ್ನು ಹೆಚ್ಚಿಸಿರುವುದು ಸ್ವೀಸ್ ಬ್ಯಾಂಕ್ ವಾರ್ಷಿಕ ಅಂಕಿಅಂಶಗಳಿಂದ ತಿಳಿದುಬಂದಿದೆ. ಇದರಿಂದ ಸ್ವಿಸ್ ಬ್ಯಾಂಕ್ಗಳಲ್ಲಿ ಕಪ್ಪು ಹಣವು 2014 ಮತ್ತು 2017 ರ ನಡುವೆ ಶೇ.80 ಕಡಿಮೆಯಾಗಿದೆ ಎಂದು ಪಿಯುಶ್ ಗೋಯಲ್ ತಿಳಿಸಿದರು.
"ಸ್ವಿಟ್ಜರ್ಲೆಂಡ್ ನಲ್ಲಿರುವ ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಹೂಡುವ ಠೇವಣಿಯನ್ನು ಆಗಾಗ್ಗೆ ಕಪ್ಪುಹಣ ಎಂದು ಊಹಿಸಲಾಗಿದೆ. ಆದರೆ, ಸ್ವಿಟ್ಜರ್ಲೆಂಡ್ನಲ್ಲಿ ಭಾರತೀಯ ನಿವಾಸಿಗಳ ಠೇವಣಿಗಳ ಸರಿಯಾದ ದತ್ತಾಂಶವನ್ನು ಗುರುತಿಸಲು ಎಸ್.ಎನ್.ಬಿ ಸಹಯೋಗದೊಂದಿಗೆ ಬ್ಯಾಂಕ್ ಆಫ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್ (ಬಿಐಎಸ್) ಪ್ರಕಟಿಸಿದ ದಾಖಲೆಗಳ ಮೂಲಕ ಸ್ಥಳೀಯ ಬ್ಯಾಂಕಿಂಗ್ ಅಂಕಿಅಂಶಗಳನ್ನು (ಎಲ್ಬಿಎಸ್) ಸಂಗ್ರಹಿಸುತ್ತದೆ ಎಂದು ಭಾರತ ಸರ್ಕಾರಕ್ಕೆ ಸ್ವಿಸ್ ರಾಯಭಾರಿ ಆಂಡ್ರಿಯಾಸ್ ಬಾಮ್ ಬರೆದ ಪತ್ರದಲ್ಲಿ ತಿಳಿಸಿದ್ದಾರೆ" ಎಂದು ಪಿಯುಶ್ ಗೋಯಲ್ ವಿವರಿಸಿದರು.
2017 ರ ಡಿಸೆಂಬರ್ 21 ರಂದು ಭಾರತ ಸರ್ಕಾರವು ಕಪ್ಪು ಹಣದ ಸಂಗ್ರಹವನ್ನು ತಡೆಗಟ್ಟಲು ಸ್ವಿಟ್ಜರ್ಲೆಂಡ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಜನವರಿ 1, 2018 ರಿಂದ ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಎರಡೂ ದೇಶಗಳು ಡೇಟಾವನ್ನು ಸಂಗ್ರಹಿಸಳು ಆರಂಭಿಸಿದ್ದು, ಸೆಪ್ಟಂಬರ್ 2019 ರಿಂದ ವಾರ್ಷಿಕ ಆಧಾರದ ಮೇಲೆ ಡೇಟಾ ವಿನಿಮಯವನ್ನು ಮಾಡಿಕೊಳ್ಳಲಾಗುವುದು. ಇದು ಕಪ್ಪು ಹಣದ ಅಪಾಯವನ್ನು ನಿವಾರಿಸುತ್ತದೆ ಮತ್ತು ಅಂತಹ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಭಾರತದಲ್ಲಿ ಸೂಕ್ತ ಮಾಹಿತಿ ಲಭ್ಯವಾಗುವಂತೆ ಮಾಡುತ್ತದೆ ಗೋಯಲ್ ಹೇಳಿದರು.