ಔರಂಗಾಬಾದ್: ಲೋಕಸಭಾ ಚುನಾವಣೆಗೆ ಟಿಕೆಟ್ ದೊರೆಯದ ಕಾರಣ ಕೋಪಗೊಂಡ ಕಾಂಗ್ರೆಸ್ ಶಾಸಕರೊಬ್ಬರು ಕಾರ್ಯಕರ್ತರೊಂದಿಗೆ ಪಕ್ಷದ ಕಚೇರಿಗೆ ನುಗ್ಗಿ 300 ಕುರ್ಚಿಗಳನ್ನು ಹೊತ್ತೊಯ್ದ ಘಟನೆ ನಡೆದಿದೆ.
ಮಹಾರಾಷ್ಟ್ರದ ಸಿಲೋದ್ ಶಾಸಕ ಅಬ್ದುಲ್ ಸತ್ತರ್ ಔರಂಗಾಬಾದ್ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ದೊರೆಯದ ಹಿನ್ನೆಲೆಯಲ್ಲಿ ಕೋಪಗೊಂಡು ಪಕ್ಷದ ಕಚೇರಿಯಿಂದ ಒಂದಲ್ಲ, ಎರಡಲ್ಲ, ಮುನ್ನೂರು ಕುರ್ಚಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇದ್ದಕ್ಕೆ ಪ್ರತಿಕ್ರಿಯಿಸಿರುವ ಸತ್ತರ್, ಟಿಕೆಟ್ ದೊರೆಯದ ಬೇಸರಗೊಂಡು ಪಕ್ಷವನ್ನು ತೊರೆದಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಆ ಕುರ್ಚಿಗಳನ್ನು ತಮ್ಮದಾಗಿದ್ದರಿಂದ ಹೊತ್ತೊಯ್ದಿರುವುದಾಗಿ ಹೇಳಿದ್ದಾರೆ.
ವರದಿಗಳ ಪ್ರಕಾರ, ಶಾಗಂಜ್ ನ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಜಂಟಿ ಸಭೆ ಏರ್ಪಡಿಸಲಾಗಿತ್ತು. ಆದರೆ, ಸಭೆ ಆರಂಭವಾಗುವ ಮುನ್ನವೇ ಪಕ್ಷದ ಕಾರ್ಯಕರ್ತರೊಂದಿಗೆ ಕಚೇರಿಗೆ ಬಂದ ಶಾಸಕ ಅಬ್ದುಲ್ ಸತ್ತರ್ ಅಲ್ಲಿದ್ದ ಕುರ್ಚಿಗಳನ್ನು ತೆಗದುಕೊಂಡು ಹೋಗಿದ್ದಾರೆ. ಬಳಿಕ ಎನ್ಸಿಪಿ ಪಕ್ಷದ ಕಚೇರಿಯಲಿ ಸಭೆ ನಡೆದಿದೆ ಎನ್ನಲಾಗಿದೆ. ಔರಂಗಾಬಾದ್ ಕ್ಷೇತ್ರದ ಕಾಂಗ್ರೆಸ್ ನಾಯಕರಾದ ಸತ್ತರ್, ಆ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ. ಆದರೆ ಅವರ ರಾಜೀನಾಮೆ ಪತ್ರ ಇನ್ನೂ ಅಂಗೀಕೃತವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.