ನವದೆಹಲಿ: COVID -19ಗೆ ಮದ್ದು ಹುಡುಕೇಬಿಟ್ಟೆವು, ಆಗಸ್ಟ್ 15ಕ್ಕೆ ಕೋವ್ಯಾಕ್ಸಿನ್ (Covaxin) ಕಂಡುಹಿಡಿದೇಬಿಟ್ಟೆವು ಎಂದು ಕೇಂದ್ರ ಸರ್ಕಾರ ಬೀಗುತ್ತಿತ್ತು. ಆದರೀಗ ಅದೇ ಕೇಂದ್ರ ಸರ್ಕಾರದ ಅಧಿಕಾರಿಗಳು ಯಾವುದೇ ಕಾರಣಕ್ಕೂ ಈ ವರ್ಷ ಕೊರೊನಾಗೆ ಲಸಿಕೆ (Corona vaccine) ಸಿಗುವುದಿಲ್ಲ ಎಂದು ಹೇಳಿವೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ (ICMR) ಈಗಾಗಲೇ ಕೋವ್ಯಾಕ್ಸಿನ್ ಮಾನವ ಪ್ರಯೋಗ ನಡೆಸಲು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಹಾಗೂ ಜ್ಯುಡಸ್ ಕಾಡಿಯಾ ಹೆಲ್ತ್ ಕೇರ್ ಲಿಮಿಟೆಡ್ ಗಳಿಗೆ ಅನುಮತಿ ನೀಡಿತ್ತು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್ ಡೈರೆಕ್ಟರ್ ಜನರಲ್ ಡಾ. ಬಲರಾಮ್ ಭಾರ್ಗವ ಪತ್ರ ಬರೆದು ಆದಷ್ಟು ಬೇಗ ಪ್ರಯೋಗ ಮಾಡುವಂತೆ ಒತ್ತಾಯಿಸಿದ್ದರು.
ಕರೋನಾ: ಆಗಸ್ಟ್ 15ರಂದು ಬಿಡುಗಡೆಗೆ ಸಿದ್ಧವಾಗಿರುವ ಲಸಿಕೆ ಬಗ್ಗೆ ತಜ್ಞರು ಶಂಕಿಸುತ್ತಿರುವುದೇಕೆ?
ಡಾ. ಬಲರಾಮ್ ಭಾರ್ಗವ ಅವರು ಜುಲೈ 4ರಂದು ಪತ್ರ ಬರೆದು ಅವಸರ ಮಾಡಿದ್ದಕ್ಕೆ ವಿಜ್ಞಾನಿಗಳ ವಲಯದಿಂದ ವ್ಯಾಪಕವಾದ ವಿರೋಧ ಕೂಡ ವ್ಯಕ್ತವಾಗಿತ್ತು. ಜೊತೆಗೆ ಆಗಸ್ಟ್ 15ರೊಳಗೆ ಕೋವ್ಯಾಕ್ಸಿನ್ ಬಂದೇ ಬಿಟ್ಟಿತು ಎಂಬ ಬಿಟ್ಟಿ ಪ್ರಚಾರ ತೆಗೆದುಕೊಂಡಿದ್ದಕ್ಕೂ ಆಕ್ಷೇಪ ವ್ಯಕ್ತವಾಗಿತ್ತು. ಆನಂತರದಲ್ಲಿ ದಿ ಡ್ರಗ್ ಕಂಟ್ರೋಲರ್ ಜೆನರಲ್ ಆಫ್ ಇಂಡಿಯಾ 1 ಮತ್ತು 2ನೇ ಹಂತದ ಕ್ಲಿನಿಕಲ್ ಮತ್ತು ಮಾನವ ಪ್ರಯೋಗಗಳಿಗೆ ಮಾತ್ರ ಹೇಳಲಾಗಿದೆ ಎಂದು ಸ್ಪಷ್ಟೀಕರಣ ನೀಡಿತ್ತು.
ಹೀಗೆ ಕೋವ್ಯಾಕ್ಸಿನ್ ಬಗ್ಗೆ ಪುಕ್ಕಟ್ಟೆ ಪ್ರಚಾರ ಪಡೆಯುವ ವೇಳೆಯಲ್ಲೇ ಜುಲೈ 10ರಂದು ಕೇಂದ್ರ ಸರ್ಕಾರದ ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಂಸದೀಯ ಸಮಿತಿ ಸಭೆ ಸೇರಿ ಕೋವಿಡ್ -19 (COVID-19)ಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿತು. ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ನೇತೃತ್ವದಲ್ಲಿ ನಡೆದ ಸಂಸದೀಯ ಸಮಿತಿ ಸಭೆಗೆ ಅಧಿಕಾರಿಗಳು ನೀಡಿರುವ ಮಾಹಿತಿ ನಿರಾಶಾದಾಯಕವಾಗಿವೆ.
ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಂಸದೀಯ ಸಮಿತಿ ಸಭೆಗೆ 'COVID -19ಗೆ 2021ಕ್ಕೂ ಮೊದಲೇ ಮದ್ದು ಸಿಗುವುದಿಲ್ಲ. ಕರೋನಾವೈರಸ್ (Coronavirus) COVID -19ಗೆ ಲಸಿಕೆ ಅಥವಾ ಕೋವ್ಯಾಕ್ಸಿನ್ ಕಂಡುಹಿಡಿಯಲು ಇನ್ನೂ ಸಮಯಾವಕಾಶ ಬೇಕಾಗುತ್ತದೆ' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.