ನವದೆಹಲಿ: ಚಂಡೀಗಢದಿಂದ ಡಿಬ್ರೂಗಡಕ್ಕೆ ಚಲಿಸುತ್ತಿದ್ದ 15904 ಸಂಖ್ಯೆಯ ಚಂಡೀಗಢ-ಡಿಬ್ರುಗರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.
ಮೂಲಗಳ ಪ್ರಕಾರ, ಮೊದಲು ರೈಲಿನ ಇಂಜಿನ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಬಳಿಕ ಇಂಜಿನ್ ಪಕ್ಕದಲ್ಲಿದ್ದ ಭೋಗಿಗೆ ಆವರಿಸಿದೆ. ನೋಡ ನೋಡುತ್ತಿದ್ದಂತೆಯೇ ಪಕ್ಕದ ಇನ್ನೆರಡು ಭೋಗಿಗಳಿಗೂ ಬೆಂಕಿ ಆವರಿಸಿದ್ದು, ಆತಂಕಗೊಂಡ ಪ್ರಯಾಣಿಕರು ರೈಲಿನಿಂದ ಇಳಿದು ಪ್ರಾಣರಕ್ಷಣೆಗಾಗಿ ದೂರ ಓಡುತ್ತಿರುವ ದೃಶ್ಯ ಕಂಡುಬಂದಿದೆ. ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆ ನ್ಯೂಜಲ್ಪಾಯ್ಗುಡಿ ಸ್ಟೇಷನ್ ಗೂ ಮುನ್ನ ಚಾತರ್ ಹೆಸರಿನ ಹಾಲ್ಟ್ ಬಳಿ ರೈಲನ್ನು ನಿಲ್ಲಿಸಲಾಗಿದೆ.
ರೈಲಿನ ಇಂಜಿನ್ ನಿಂದ ಡೀಸೆಲ್ ಸೋರಿಕೆಯಾದ ಕಾರಣ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ರೈಲ್ವೆ ಹಳಿಯುದ್ದಕ್ಕೂ ಡೀಸೆಲ್ ಸೋರಿಕೆಯಾಗಿರುವುದು ಕಂಡು ಬಂದಿದೆ. ಈ ಅವಘಡದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನಲಾಗಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.