ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ಪ್ರಕರಣ: ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಜೈಲಿನಿಂದ ಬಿಡುಗಡೆ

ಜೂನ್ 26ರಂದು ಇಂದೋರ್‌ ಮುನ್ಸಿಪಲ್‌ ಕಾರ್ಪೊರೇಷನ್‌ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದ ಸಂದರ್ಭದಲ್ಲಿ ಆಕಾಶ್‌ ಬೆಂಬಲಿಗನೋರ್ವನ ಕಟ್ಟಡ ಕೆಡವಲು ಮುಂದಾಗಿದ್ದ ಪಾಲಿಕೆ ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದರು. 

Last Updated : Jun 30, 2019, 10:54 AM IST
ಕ್ರಿಕೆಟ್ ಬ್ಯಾಟ್‌ನಿಂದ ಹಲ್ಲೆ ಪ್ರಕರಣ: ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಜೈಲಿನಿಂದ ಬಿಡುಗಡೆ title=

ಇಂದೋರ್: ಪಾಲಿಕೆ ಅಧಿಕಾರಿ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿ ಜೈಲು ಪಾಲಾಗಿದ್ದ ಮಧ್ಯಪ್ರದೇಶ ಬಿಜೆಪಿ ಶಾಸಕ ಆಕಾಶ್ ವಿಜಯವರ್ಗಿಯ ಭಾನುವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. 

ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯ ಅವರ ಪುತ್ರನಾದ ಆಕಾಶ್ ವಿಜಯವರ್ಗೀಯ ಅವರು, ಜೂನ್ 26ರಂದು ಇಂದೋರ್‌ ಮುನ್ಸಿಪಲ್‌ ಕಾರ್ಪೊರೇಷನ್‌ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ್ದ ಸಂದರ್ಭದಲ್ಲಿ ಆಕಾಶ್‌ ಬೆಂಬಲಿಗನೋರ್ವನ ಕಟ್ಟಡ ಕೆಡವಲು ಮುಂದಾಗಿದ್ದ ಪಾಲಿಕೆ ಅಧಿಕಾರಿ ಮೇಲೆ ಕ್ರಿಕೆಟ್ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದರು. ಆ ದೃಶ್ಯದ ವೀಡಿಯೋ ಸಹ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಬಳಿಕ ಆಕಾಶ್ ಅವರನ್ನು ಬಂಧಿಸಿದ್ದ ಪೊಲೀಸರು ಹಲ್ಲೆ ಹಾಗೂ ಕಾನೂನುಬಾಹಿರ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದರು. ಶನಿವಾರ ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಇದೀಗ ಈ ಪ್ರಕರಣದಲ್ಲಿ ಆಕಾಶ್ ಅವರಿಗೆ ಜಾಮೀನು ನೀಡಿದೆ. 50,000 ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಇನ್ನಿತರೆ ಪ್ರಕರಣಗಳಲ್ಲಿ 20,000 ರೂ.ಬಾಂಡ್ ನೀಡಿ ಜಾಮೀನು ಪಡೆಯಲಾಗಿದೆ.

ಜೈಲಿನಿಂದ ಬಿಡುಗಡೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆಕಾಶ್ ವಿಜಯವರ್ಗಿಯ, ಕಟ್ಟಡ ಕೆಡವಲು ಬಂದ ಅಧಿಕಾರಿಗಳು ಅಲ್ಲಿದ್ದ ಮಹಿಳೆಯ ಕಾಲು ಹಿಡಿದು ಕಟ್ಟಡದಿಂದ ಹೊರಹಾಕಲು ಪ್ರಯತ್ನಿಸುತ್ತಿದ್ದ ದೃಶ್ಯ ಕಂಡು, ಆ ಪರಿಸ್ಥಿತಿಯಲ್ಲಿ ಬೇರೆ ಏನೂ ನನಗೆ ತೋಚಲಿಲ್ಲ. ಮತ್ತೊಮ್ಮೆ ಇಂಥ ಘಟನೆ ಮರುಕಳಿಸುವುದಿಲ್ಲ" ಎಂದು ಹೇಳಿದ್ದಾರೆ. 

Trending News