ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಾಕ್ಸರ್ ವಿಜೇಂದರ್ ಸಿಂಗ್ ಅಜ್ಜಿ ಇಂದಿರಾ ಗಾಂಧಿಯವರನ್ನು ಹೋಲುತ್ತಾರೆ ಎಂದು ಹೇಳಿದ್ದಾರೆ.
ದಕ್ಷಿಣ ದೆಹಲಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಬಾಕ್ಸರ್ ವಿಜೇಂದರ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ "ನಾನು ಪ್ರಿಯಾಂಕಾ ಗಾಂಧಿ ಅವರ ಸರಳತೆಗೆ ಮಾರು ಹೋಗಿದ್ದೇನೆ, ಅವರು ನಡೆಯುವ ರೀತಿ ಮಾತಾಡುವ ರೀತಿ ಎಲ್ಲವು ಇಂದಿರಾ ಗಾಂಧಿಯವರನ್ನೇ ಹೋಲುತ್ತದೆ, ಅವರಿಂದ ನಾನು ಪ್ರಭಾವಿತಗೊಂಡಿದ್ದೇನೆ" ಎಂದು ಹೇಳಿದರು.
ಇದೇ ವೇಳೆ ಇತರ ಅಭ್ಯರ್ಥಿಗಳ ವಿರುದ್ಧ ತಮ್ಮದು ಯಾವುದೇ ಸ್ಪರ್ಧೆಯಿಲ್ಲ ನನ್ನ ವಿಷಯಗಳನ್ನು ನಾನು ಜನರ ಮುಂದೆ ಇಟ್ಟಿದ್ದೇನೆ. ನಾನು ಸುಳ್ಳು ಹೇಳಲು ಹೋಗುವುದಿಲ್ಲ. ನಾನು ರೈತರ ಕುಟುಂಬಕ್ಕೆ ಸೇರಿದ ಒಬ್ಬ ಬಸ್ ಚಾಲಕನ ಮಗ, ನನ್ನ ಜೀವನ ಶೂನ್ಯದೊಂದಿಗೆ ಪ್ರಾರಂಭವಾಗಿದೆ. ಈಗಷ್ಟೇ ನಾನು ವಸಂತ್ ಕುಂಜ ದಲ್ಲಿ ವಾಸಿಸಲು ಆರಂಭಿಸಿದ್ದೇನೆ ಎಂದು ಪಿಟಿಐಗೆ ತಿಳಿಸಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ವಿಜೇಂದರ್ ಸಿಂಗ್ ತಮ್ಮ ವಿಚಾರದಾರೆಗೆ ಅದು ಹೊಂದಾಣಿಕೆ ಆಗುವುದರಿಂದ ತಾವು ಈ ಪಕ್ಷಕ್ಕೆ ಸೇರಿರುವುದಾಗಿ ತಿಳಿಸಿದ್ದಾರೆ.
"ನಿಮ್ಮ ಆಲೋಚನೆಗಳು ಎಲ್ಲಿ ಹೊಂದಾಣಿಕೆಯಾಗುತ್ತವೆ ಅಲ್ಲಿಗೆ ಹೋಗುವುದು ಸರಿ, ನಮಗೆ ಹೊಂದಾಣಿಕೆ ಆಗದೆ ಇರುವ ಕಡೆ ಹೋಗುವುದು ಸರಿಯಲ್ಲ, ನನ್ನ ಹೋರಾಟದಲ್ಲಿ ನಾನು ಬ್ಯುಸಿಯಾಗಿದ್ದೆ. ಆದರೆ ಮೋದಿಜಿ, ಪ್ರಿಯಾಂಕಾ,ರಾಹುಲ್ ಗಾಂಧಿಜಿ ಯವರ ಜೊತೆ ಸಂಪರ್ಕ ದಲ್ಲಿದ್ದೆ. ಕಾಂಗ್ರೆಸ್ ಪಕ್ಷವು ಯುವಕರ ಬಗ್ಗೆ ಉದ್ಯೋಗದಂತಹ ಅವರ ಸಮಸ್ಯೆಗಳ ಬಗ್ಗೆ ಮಹತ್ವ ಕೊಡುತ್ತಿರುವುದರ ಹಿನ್ನಲೆಯಲ್ಲಿ ನಾನು ಕಾಂಗ್ರೆಸ್ ಆಯ್ಕೆ ಮಾಡಿದೆ "ಎಂದು ಅವರು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಪಕ್ಷವು ನಕಲಿ ರಾಷ್ಟ್ರೀಯತೆ ಬಗ್ಗೆ ಮಾತನಾಡುವುದಿಲ್ಲವೆಂದು ಹೇಳಿದರು.