ನವದೆಹಲಿ: ದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕ್ (ICICI Bank) ನಗದು ವಹಿವಾಟನ್ನು ಕಡಿಮೆ ಮಾಡಲು ಗ್ರಾಹಕರನ್ನು ಎಚ್ಚರಿಸಿದೆ. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಈ ತಿಂಗಳಿನಿಂದ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಬ್ಯಾಂಕ್ ಹೇಳಿದೆ. ಹೌದು, ಇದೀಗ ಗ್ರಾಹಕರು ಸಾಲದ ಇಎಂಐ ಅನ್ನು ಪಾವತಿಸಲು ಬ್ಯಾಂಕ್ ಶಾಖೆಗೆ ಹೋಗಿ ಅದನ್ನು ನಗದು ರೂಪದಲ್ಲಿ ಜಮಾ ಮಾಡಿದರೆ, ನಂತರ ಅವರು ಶುಲ್ಕವನ್ನು ಪಾವತಿಸಬೇಕಾಗಲಿದೆ. ಅಂದರೆ ಇನ್ಮುಂದೆ ಬ್ಯಾಂಕ್ 'ನಗದು ವಹಿವಾಟು ಶುಲ್ಕ' ವಸೂಲಿ ಮಾಡಲಿದೆ.
ಬ್ಯಾಂಕ್ ಇದನ್ನು ಸೆಪ್ಟೆಂಬರ್ 15, 2020 ರಿಂದ ಜಾರಿಗೊಳಿಸಲಿದೆ. ಡಿಜಿಟಲ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿ ಸಾಲ ಮರುಪಾವತಿಗೆ ಡಿಜಿಟಲ್ ವಿಧಾನಗಳನ್ನು ಬಳಸಲು ಗ್ರಾಹಕರನ್ನು ಪ್ರೇರೇಪಿಸುವುದು ಬ್ಯಾಂಕಿನ ಉದ್ದೇಶವಾಗಿದೆ. ಆದರೆ ಗ್ರಾಹಕರು ಸಾಲದ ಹಣದ ಭಾಗಶಃ ಪಾವತಿ, Foreclosure, ಪರಿವರ್ತನೆ ಶುಲ್ಕ, ಸ್ವಾಪ್ ಶುಲ್ಕ, ವಿತರಿಸಬಹುದಾದ ಶುಲ್ಕದ ರೂಪದಲ್ಲಿ ಹಣವನ್ನು ಪಾವತಿಸಿದರೆ ಅವರಿಗೆ ಯಾವುದೇ ರೀತಿಯ ಚಾರ್ಜ್ ವಿಧಿಸಲಾಗುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ನಗದು ರೂಪದಲ್ಲಿ ಇಎಂಐ ಪಾವತಿಸಲು 100 ರೂಪಾಯಿ ವಿಧಿಸಲಾಗುವುದು. ಇದರ ಜೊತೆಗೆ ಜಿಎಸ್‌ಟಿಯನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಇದರಲ್ಲಿ ಬ್ಯಾಂಕ್ ಗೃಹ ಸಾಲ, ವೈಯಕ್ತಿಕ ಸಾಲ, ಕಾರು ಸಾಲ, ಗ್ರಾಹಕ ಹಣಕಾಸು ಸಾಲ, ಶಿಕ್ಷಣ ಸಾಲ, ವಾಣಿಜ್ಯ ವಾಹನ ಸಾಲ, ದ್ವಿಚಕ್ರ ವಾಹನ ಸಾಲ, ನಿರ್ಮಾಣ ಸಲಕರಣೆ ಸಾಲ, ವೈದ್ಯಕೀಯ ಸಲಕರಣೆ ಸಾಲ, ಕಚೇರಿ ಸಲಕರಣೆ ಸಾಲ, ತ್ರೀ ವೀಲರ್ ಸಾಲ, ಬಳಕೆದಾರ ಕಾರು ಸಾಲ, ಸರ್ಕಾರಿ ಪ್ರಾಯೋಜಿತ ಸಾಲ ಯೋಜನೆಗಳು ಶಾಮೀಲಾಗಿವೆ.