ನವದೆಹಲಿ: ನೀವೂ ಸಹ ಪೋಸ್ಟ್ ಆಫೀಸ್‌ನಲ್ಲಿ (Post Office) ಉಳಿತಾಯ ಖಾತೆ (Saving Account)ಯನ್ನು ಹೊಂದಿದ್ದರೆ ಈ ಸುದ್ದಿ ನಿಮಗೆ ಅವಶ್ಯಕವಾಗಿದೆ. ಅಂಚೆ ಇಲಾಖೆ ಉಳಿತಾಯ ಖಾತೆಯ ಕನಿಷ್ಠ ಬಾಕಿ ಮೊತ್ತವನ್ನು 50 ರೂ.ನಿಂದ 500 ರೂ.ಗೆ ಹೆಚ್ಚಿಸಿದೆ.
19 ಡಿಸೆಂಬರ್ 2019 ರ ಹೊತ್ತಿಗೆ, 13 ಕೋಟಿ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬಾಕಿ 500 ರೂಪಾಯಿಗಳಿಗಿಂತ ಕಡಿಮೆಯಿತ್ತು. ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಖಾತೆದಾರರನ್ನು ಸಂಪರ್ಕಿಸಲು ಅಂಚೆ ಕಚೇರಿ ನಿರ್ದೇಶಕರು ಎಲ್ಲಾ ಅಂಚೆ ಕಚೇರಿಯನ್ನು ಕೇಳಿದ್ದಾರೆ. ಯಾಕೆಂದರೆ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿರುವುದರಿಂದ ಅಂಚೆ ಇಲಾಖೆಗೆ ವಾರ್ಷಿಕವಾಗಿ 2800 ಕೋಟಿ ರೂ. ನಷ್ಟವಾಗಿದೆ.
ಅಖಿಲ ಭಾರತ ಅಂಚೆ ನೌಕರರ ಸಂಘ ಗ್ರೂಪ್ ಸಿ(All India Postal Employees Union Group C) ಹೇಳುವಂತೆ ಹೆಚ್ಚಿನ ಅಂಚೆ ಕಚೇರಿ ಉಳಿತಾಯ ಖಾತೆಗಳು ಗ್ರಾಮಗಳಲ್ಲಿವೆ. ಗ್ರಾಮಸ್ಥರಿಗೆ ಕನಿಷ್ಠ 500 ರೂಪಾಯಿ ಬಾಕಿ ಉಳಿಸಿಕೊಳ್ಳುವುದು ಸುಲಭವಲ್ಲ. ಕನಿಷ್ಠ 500 ರೂಪಾಯಿಗಳ ಬಾಕಿ ಉಳಿಸಿಕೊಳ್ಳಲು ಕೇಳಿದರೆ ಅವರು ಖಾತೆಯನ್ನು ಮುಚ್ಚಬಹುದು. ಕನಿಷ್ಠ ಬಾಕಿ ಕಡಿಮೆಯಾದಾಗ ದಂಡ ವಿಧಿಸಲಾಗುತ್ತದೆ.
ಉಳಿತಾಯ ಖಾತೆಯಲ್ಲಿ ಕನಿಷ್ಠ ಬಾಕಿ ಕಡಿಮೆ ಇದ್ದರೆ, ಪೋಸ್ಟ್ ಆಫೀಸ್ ವ್ಯವಹಾರ ವರ್ಷದ ಕೊನೆಯ ದಿನದಂದು 100 ರೂಪಾಯಿಗಳನ್ನು ಕಡಿತಗೊಳಿಸುತ್ತದೆ. ಇದು ಪ್ರತಿವರ್ಷ ಸಂಭವಿಸುತ್ತದೆ ಮತ್ತು ಖಾತೆಯಲ್ಲಿ ಬ್ಯಾಲೆನ್ಸ್ ಶೂನ್ಯವಾಗಿದ್ದರೆ ಅದು ಸ್ವಯಂಚಾಲಿತವಾಗಿ ಮುಚ್ಚಲ್ಪಡುತ್ತದೆ.
ಯಾವುದೇ ಭಾರತೀಯ ಪ್ರಜೆ ಕೇವಲ 500 ರೂಪಾಯಿಗಳನ್ನು ಪಾವತಿಸಿ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಬಹುದು. ಈ ಉಳಿತಾಯ ಖಾತೆಯನ್ನು ಏಕ, ಜಂಟಿ ಅಥವಾ ಮಗುವಿನ ಹೆಸರಿನಲ್ಲಿ ತೆರೆಯಬಹುದು. ಈ ಖಾತೆಯಲ್ಲಿ ಚೆಕ್ ಮತ್ತು ಎಟಿಎಂ ಸೌಲಭ್ಯವೂ ಇರುತ್ತದೆ. ಜೊತೆಗೆ ನಾಮನಿರ್ದೇಶನಕ್ಕೂ ಅವಕಾಶವಿದೆ.
ಅಂಚೆ ಕಚೇರಿಯ ಸಾರ್ವಜನಿಕ ಭವಿಷ್ಯ ನಿಧಿ (PPF), 5 ವರ್ಷದ ಅಂಚೆ ಕಚೇರಿ ಠೇವಣಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) ಬಹಳ ಜನಪ್ರಿಯ ಸಣ್ಣ ಪ್ರಮಾಣದ ಉಳಿತಾಯ ಯೋಜನೆಗಳು. ಈ ಯೋಜನೆಗಳ ಬಡ್ಡಿ ಮೊತ್ತವು ತೆರಿಗೆ ಮುಕ್ತವಾಗಿದೆ.