ರಾಯಪುರ: ಪುಲ್ವಾಮಾದಲ್ಲಿನ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವನ್ನು ವ್ಯಕ್ತಪಡಿಸಿದ ಯೋಗ ಗುರು ಬಾಬಾ ರಾಮ್ ದೇವ್ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಬಲೂಚಿಸ್ತಾನ ಪ್ರಾಂತ್ಯದ ಪ್ರತ್ಯೇಕತಾವಾದಿ ಚಳವಳಿಗೆ ಭಾರತ ಸರ್ಕಾರ ಬೆಂಬಲ ನೀಡಬೇಕು ಎಂದು ರಾಮ್ ದೇವ್ ಆಗ್ರಹಿಸಿದರು.
"ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುವವರಿಗೆ ಭಾರತವು ಶಸ್ತ್ರಾಸ್ತ್ರಗಳನ್ನು ಒದಗಿಸುವುದಲ್ಲದೆ ಅವರಿಗೆ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬೆಂಬಲ ನೀಡಬೇಕು ಆ ಮೂಲಕ ಬಲೂಚಿಸ್ತಾನವನ್ನು ಸ್ವತಂತ್ರಗೊಳಿಸುವುದಕ್ಕಾಗಿ ಭಾರತವು ಅವರಿಗೆ ಸಹಾಯ ಮಾಡಬೇಕು" ಎಂದು ಹೇಳಿದರು.
ಇತ್ತೀಚಿಗೆ ಪಾಕ್ ಬೆಂಬಲಿತ ಉಗ್ರ ಸಂಘಟನೆ ಜೈಶ್ ಇ ಮೊಹಮ್ಮದ್ ದಾಳಿಯನ್ನು ಕಟುವಾಗಿ ಟೀಕಿಸಿರುವ ಯೋಗಗುರು "ಪಾಕಿಸ್ತಾನ ಮತ್ತು ಉಗ್ರರಿಗೆ ತಕ್ಕ ಪಾಠವನ್ನು ಕಲಿಸಬೇಕು. ಪಾಕಿಸ್ತಾನವನ್ನು ಮೂರು ಭಾಗವಾಗಿ ವಿಭಜಿಸಬೇಕು" ಎಂದು ರಾಮ್ ತಿಳಿಸಿದರು.
ಪಾಕ್ ನ ಬೆಂಬಲಿತ ಉಗ್ರ ಚಟುವಟಿಕೆಗಳಿಂದಾಗಿ ಇದುವರೆಗೆ ಸುಮಾರು 50 ಸಾವಿರ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ ಎಂದು ರಾಮ್ ದೇವ್ ತಿಳಿಸಿದರು.